ಕಸಿ ಮಾಡಿದ ಮಾವಿನ ಮರ ವೀಕ್ಷಿಸುತ್ತಿರುವ ರೈತ ಶಿವರಾಜು 
ಬೆಂಗಳೂರು ದಕ್ಷಿಣ

ರೈತನ ಆದಾಯಕ್ಕೆ ಬೇಸಾಯದ ಬಲ

ಪ್ರಮುಖ ಮುಖ್ಯಾಂಶಗಳು

  • ಕೃಷಿಯಲ್ಲೇ ರಾಜನಂಥಹ ಬದುಕು ಕಂಡ ಲಕ್ಷ್ಮೀಪುರದ ರೈತ ಶಿವರಾಜು
  • ಕಸಿ ಕಟ್ಟುವುದರಲ್ಲೂ ಫೇಮಸ್
ರಾಮನಗರ
ಅಂದು ತಂದೆ ತೆಗೆದುಕೊಂಡ ಒಂದು ನಿರ್ಧಾರ ಕೃಷಿಯತ್ತ ವಾಲುವಂತೆ ಮಾಡಿತು. ತಂದೆಯ ನಿರ್ಧಾರ ತಪ್ಪೂ ಆಗಲಿಲ್ಲ, ಕೃಷಿ ನನ್ನ ಕೈ ಬಿಡಲೂ ಇಲ್ಲ. ನಾನು ಬೇಕು ಅಂದಿದ್ದೆಲ್ಲವನ್ನೂ ನನಗೆ ಕೃಷಿ ನೀಡಿದೆ. ಇದಕ್ಕೆ ನಂಬಿಕೆ ಮತ್ತು ಶ್ರಮ ಕಾರಣ...
ಇದು ತಾಲೂಕಿನ ಲಕ್ಷ್ಮೀಪುರದ ಪ್ರಗತಿಪರ ರೈತ ಶಿವರಾಜು ಅವರ ನುಡಿ.
ಶಿವರಾಜು ಅವರ ತಂದೆ ಮೂವರು ಮಕ್ಕಳಲ್ಲಿ ಇಬ್ಬರನ್ನು ಕೃಷಿಗೆ ತೊಡಗಿಕೊಳ್ಳುವಂತೆ ಸೂಚಿಸಿದರು. ಇದನ್ನೇ ಪಾಲಿಸಿದ ಶಿವರಾಜು ಯೌವನದ ದಿನಗಳಲ್ಲೇ ಕೃಷಿಯತ್ತ ವಾಲಿದರು. ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಹಸನಾಗಿಸಿಕೊಂಡಿದ್ದಾರೆ.
ಎಲ್ಲವೂ ಇದೆ: ಶಿವರಾಜು ಅವರಿಗೆ ಲಕ್ಷ್ಮೀಪುರದಲ್ಲಿ ಒಟ್ಟು ೧೦ ಎಕರೆ ಜಮೀನಿದೆ. ಆದರೆ ಯಾವುದೂ ನೀರಾವರಿ ಅಲ್ಲ. ಆರಂಭದಲ್ಲಿ ಕಲ್ಲು ಬಾವಿ ನೀರು ಒದಗಿಸುತ್ತಿತ್ತು. ಕಾಲ ಕಳೆದಂತೆ ಕೊಳವೆ ಬಾವಿ ಆಶ್ರಯದಲ್ಲಿ ಕೃಷಿ ಮಾಡಿಕೊಂಡು ಬಂದಿದ್ದು, ನೀರಿನ ನಿರ್ವಹಣೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮವಾಗಿಯೇ ಮಾಡಿಕೊಂಡು ಬಂದಿದ್ದಾರೆ. ಶಿವರಾಜು ಅವರ ತೋಟ ಎಲ್ಲವನ್ನೂ ಒಳಗೊಂಡ ಒಂದು ಪ್ಯಾಕೇಜ್ ಇದ್ದಂತೆ. ತೆಂಗು, ಬಾಳೆ, ಅಡಿಕೆ, ಮಾವು, ಹಲಸು, ನೇರಳೆ, ಬಟರ್ ಫ್ರೂಟ್, ಅಂಜೂರ ಹೀಗೆ ವಿವಿಧ ಜಾತಿಯ ಹಣ್ಣಿನ ಗಿಡಗಳು ಇಡೀ ತೋಟವನ್ನು ಆವರಿಸಿವೆ. ಮೆಣಸು, ಏಲಕ್ಕಿ, ಜಾಯಿಕಾಯಿ ಆರ್ಥಿಕ ಬಲ ನೀಡುತ್ತಿವೆ. ಇಲ್ಲಿಗೆ ಯಾವುದೇ ಕಾಲಕ್ಕೂ ಭೇಟಿ ನೀಡಿದರೂ ಖಂಡಿತವಾಗಿ ಆ ಋತುವಿನ ಹಣ್ಣನ್ನು ಸವಿಯುವ ಅವಕಾಶವಂತೂ ಸಿಕ್ಕೆ ಸಿಗುತ್ತದೆ. ಇನ್ನು ಮನೆಗೆಂದು ಗಿರ್ ತಳಿ ಹಸು ಸಾಕಾಣಿಕೆ ಸಹ ಮಾಡುತ್ತಿದ್ದಾರೆ.

ಕೋಳಿ ಫೇಮಸ್

ಶಿವರಾಜು ಅವರ ವಾರ್ಷಿಕ ಆದಾಯ ಸುಮಾರು ೨೫ ಲಕ್ಷ ರೂಪಾಯಿ. ಇದರಲ್ಲಿ ಪ್ರಮುಖ ಮೂಲ ಅಡಿಕೆ, ತೆಂಗು, ಮಾವಿನದ್ದೇ ಆದರೂ ಕೋಳಿ ಸಾಕಾಣಿಕೆ ಸಹ ಇವರ ಆದಾಯ ಹೆಚ್ಚಿಸಿದೆ. ವರ್ಷದಲ್ಲಿ ನಾಲ್ಕದಿಂದ 5 ಬ್ಯಾಚ್ ಮೈಸೂರು ತಳಿ ನಾಟಿ ಕೋಳಿಯನ್ನು ಸುಮಾರು 500-600 ಸಂಖ್ಯೆಯಲ್ಲಿ ಸಾಕಾಣಿಕೆ ಮಾಡಿ ಮಾರಾಟ ಮಾಡುತ್ತಾರೆ. ಶಿವರಾಜು ಕೋಳಿಗಳ ಮಾರಾಟಕ್ಕಾಗಿ ಹೊರಗೆ ಹೋದ ಉದಾಹರಣೆಯೇ ಇಲ್ಲ. ಇದರಿಂದ ಪ್ರತಿ ಬ್ಯಾಚ್‌ನಿಂದ ಸುಮಾರು ಒಂದು ಲಕ್ಷ ರೂ. ಆದಾಯ ಇವರ ಕೈ ಸೇರುತ್ತಿದೆ. ಇದರ ಜತೆಗೆ 20-30 ಮೇಕೆ ಮತ್ತು ಕುರಿಗಳನ್ನು ಸಹ ಸಾಕುತ್ತಿದ್ದಾರೆ.

20 ವರ್ಷದ ಬಾಳೆ

ಶಿವರಾಜು ಅವರ ಕೃಷಿ ಒಲವು ಮತ್ತು ತಿಳಿವಳಿಕೆ ಎಷ್ಟಿದೆ ಎಂದರೆ, ಇವರ ತೋಟದಲ್ಲಿ ಕಳೆದ 20 ವರ್ಷದ ಹಿಂದೆ ನೆಟ್ಟ ಪಚ್ಚ ಬಾಳೆ ಗಿಡಗಳು ಇಂದಿಗೂ ಫಲ ಕೊಡುತ್ತಿರುವುದೇ ಸಾಕ್ಷಿ. ಸಾಮಾನ್ಯವಾಗಿ ಬಾಳೆಯನ್ನು ೨-೩ ಗೊನೆಗಳು ಬಂದ ನಂತರ ತೆರವುಗೊಳಿಸಲಾಗುತ್ತದೆ. ಆದರೆ ಇವರ ತೋಟದಲ್ಲಿ ಕಳೆದ 20 ವರ್ಷದಿಂದಲೂ ಹೊಸ ಕಸಿಗಳು ಹುಟ್ಟಿಕೊಂಡು ಉತ್ತಮವಾದ ಫಲವನ್ನೇ ನೀಡುತ್ತಿದ್ದು, ಬಾಳೆ ತೋಟ ನಿರ್ವಹಣೆಗೆ ಇವರು ಉತ್ತಮ ಉದಹಾರಣೆ ಆಗಿದ್ದಾರೆ.

ಮಗನ ಸಾಥ್

ಶಿವರಾಜು ಅವರಂತೆಯೇ ಅವರ ಪುತ್ರ ನಂದೀಶ್ ಸಹ ತಂದೆಯ ಕೃಷಿ ಚಟುವಟಿಕೆಗೆ ಹೆಗಲು ಕೊಟ್ಟು ನಿಂತಿದ್ದಾರೆ. ದ್ವಿತೀಯ ಪಿಯುಸಿವರೆಗೂ ವ್ಯಾಸಂಗ ಮಾಡಿರುವ ಇವರು, ಕೃಷಿಯಲ್ಲೇ ಉತ್ತಮವಾದ ಬದುಕು ಕಟ್ಟಿಕೊಳ್ಳಬಹುದು ಎನ್ನುವದನ್ನು ಅರಿತು, ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಒಲವು ತೋರಲೇ ಇಲ್ಲ. ಈ ಮೂಲಕ ಇಡೀ ಕುಟುಂಬ ಕೃಷಿ ಕುಟುಂಬವಾಗಿದೆ.

ಕಸಿ ಕಟ್ಟುವುದರಲ್ಲಿ ಫೇಮಸ್

ಸಮಗ್ರ ಬೇಸಾಯ ಪದ್ಧತಿ ಅನುಸರಿಸಿ ಉತ್ತಮ ಕೃಷಿಕರೂ ಆಗಿರುವ ಶಿವರಾಜು, ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಕಸಿ ಕಟ್ಟುವುದರಲ್ಲಿ ಸುತ್ತು ಮುತ್ತಲೂ ಹೆಸರು ಮಾಡಿದ್ದಾರೆ. ಗುಳಸುಂಡೇ ಗಿಡಕ್ಕೆ ಬದನೆ ಕಸಿ ಮಾಡುವುದು, ಒಂದೇ ಮರದಲ್ಲಿ ವಿವಿಧ ಜಾತಿಯ ಮಾವಿನ ತಳಿಗಳನ್ನು ಕಸಿ ಮಾಡಿ ಅದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಕೇವಲ ತಮ್ಮ ಜಮೀನಿನಲ್ಲಿ ಮಾತ್ರವಲ್ಲದೇ ಯಾರೇ ಕರೆದರೂ ಅಲ್ಲಿಗೆ ತೆರಳಿ ಕಸಿ ಮಾಡಿಕೊಡುವ ಹಾಗೂ ಕೃಷಿಗೆ ಸಂಬಂಧಿಸಿದಂತೆ ತಮಗೆ ಇರುವ ಜ್ಞಾನವನ್ನು ಹಂಚುವಲ್ಲಿ ಶಿವರಾಜು ನಿರತರಾಗಿದ್ದಾರೆ. ಇವರ ಕೃಷಿ ಕಾಯಕಕ್ಕೆ ಜಿಲ್ಲೆ ಮತ್ತು ರಾಜ್ಯಮಟ್ಟದ ಕೆಲ ಪ್ರಶಸ್ತಿಗಳು ಇವರನ್ನು ಹುಡಿಕಿಕೊಂಡು ಬಂದಿವೆ.

ನಾಲ್ಕೂವರೆ ದಶಕಕ್ಕೂ ಹೆಚ್ಚು ಕಾಲ ಕೃಷಿಯಲ್ಲೇ ಕಳೆದಿದ್ದೇನೆ. ಕೃಷಿ ಎಂದಿಗೂ ನಮ್ಮ ಕೈ ಬಿಟ್ಟ ಉದಾಹರಣೆ ಇಲ್ಲ. ನಂಬಿಕೆಯೊಂದಿಗೆ ಕೃಷಿ ಮಾಡಬೇಕು, ನಷ್ಟವಾದಾಗ ಎದೆಗುಂದಬಾರದು. ಹೊಸ ಆವಿಷ್ಕಾರಗಳಿಗೆ ನಮ್ಮನ್ನು ತೊಡಗಿಸಿಕೊಳ್ಳಬೇಕು. ಕೃಷಿ ನನಗೆ ಖುಷಿ ತಂದಿದೆ.
| ಶಿವರಾಜು ಪ್ರಗತಿಪರ ರೈತ.

ನನ್ನ ತಂದೆಯಂತೆಯೇ ನನಗೂ ಕೃಷಿಯಲ್ಲಿ ಬಾಲ್ಯದಲ್ಲಿಯೇ ಆಸಕ್ತಿ ಬೆಳೆಯಿತು. ಓದಿ ಬೇರೊಬ್ಬರ ಬಳಿ ಕೆಲಸಕ್ಕೆ ಸೇರುವುದಕ್ಕಿಂತ ನಮ್ಮ ಜಮೀನಿನಲ್ಲಿಯೇ ದುಡಿದರೆ ಖಂಡಿತವಾಗಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎನಿಸಿ ಕೃಷಿಯಲ್ಲಿ ಮುಂದುವರಿದಿದ್ದೇನೆ. ನಮ್ಮ ತಂದೆಯ ಕೆಲಸದಲ್ಲಿ ಸಾಥ್ ನೀಡುತ್ತಿದ್ದೇನೆ.
| ನಂದೀಶ್, ಶಿವರಾಜು ಅವರ ಪುತ್ರ

ಸಂಪರ್ಕ ಸಂಖ್ಯೆ
ಕೃಷಿ ಸಂಬಂಧಿತ ಮಾಹಿತಿ ಪಡೆಯಲು ರೈತ ಶಿವರಾಜು ಅವರನ್ನು ಸಂಪರ್ಕಿಸಲು ಮೊಬೈಲ್ ಸಂಖ್ಯೆ: 9901643223ಗೆ ಕರೆ ಮಾಡಬಹುದು. ಸಾಧ್ಯವಾದವರು ಬೆಳಗ್ಗೆ 10ರಿಂದ ಸಂಜೆ 6ಗಂಟೆ ಒಳಗೆ ನೇರವಾಗಿ ಅವರ ಜಮೀನಿಗೂ ಭೇಟಿ ನೀಡಬಹುದು.