ರಾಮನಗರ ನಗರಸಭೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನಡೆದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
- ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆಯಿಂದ ತರಬೇತಿ
- ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ
ರಾಮನಗರ : ಬೀದಿಬದಿ ವ್ಯಾಪಾರಿಗಳಿಗೆ ರಾಮನಗರ ನಗರಸಭೆ ಎಂದೂ ಎಂದೆಂದಿಗೂ ಸ್ನೇಯಮಯಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ತಿಳಿಸಿದರು.
ನಗರಸಭೆ ಆವರಣದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಏರ್ಪಡಿಸಿದ್ದ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಗರಸಭೆ ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದ ಹಲವಾರು ಸವಲತ್ತು ತಲುಪಿಸಿ ಜನಸ್ನೇಯಿಯಾಗಿದೆ. ಸರ್ಕಾರ ಕೂಡ ಹಲವಾರು ಯೋಜನೆಗಳನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ಜಾರಿಗೆ ತಂದಿದೆ. ವ್ಯಾಪಾರಸ್ಥರು ಈ ಯೋಜನೆಗಳ ಲಾಭ ಪಡೆದುಕೊಂಡು ಆರ್ಥಿಕಾಭಿವೃದ್ಧಿ ಹೊಂದಬೇಕು.
ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಲು ಕೆಲವು ದಾಖಲಾತಿಗಳು ಅಗತ್ಯವಾಗಿರುತ್ತವೆ. ದಾಖಲಾತಿಗಳು ಇಲ್ಲದಿದ್ದರೆ ಯಾವುದೇ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ದಾಖಲಾತಿಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಬೇಕು. ಇದಕ್ಕೆ ನಗರಸಭೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಸೂಕ್ತ ದಾಖಲಾತಿಗಳನ್ನು ಒದಗಿಸಿದರೆ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡುತ್ತವೆ. ಪಡೆದ ಸಾಲವನ್ನು ನಿಗದಿತ ಕಾಲಮಿತಿಯೊಳಗೆ ಮರು ಪಾವತಿ ಮಾಡಿದರೆ ಬ್ಯಾಂಕ್‌ಗಳ ಮತ್ತುಷ್ಟು ಸಾಲವನ್ನು ನೀಡುತ್ತವೆ. ಬ್ಯಾಂಕ್ ನಿಂದ ಹಣ ಪಡೆದುಕೊಂಡು ತಮ್ಮ ವ್ಯಾಪಾರವನ್ನು ವೃದ್ಧಿಸಿಕೊಳ್ಳಲು ಇದು ಸಹಕಾರಿಯಾಗುತ್ತದೆ.
ಬೀದಿ ಬದಿ ವ್ಯಾವ್ಯಾಪಾರಸ್ಥರಿಗೆ ಅರಿವಿನ ಕೊರತೆಯಿಂದ ಸೂಕ್ತ ದಾಖಲಾತಿಗಳನ್ನು ಇಟ್ಟುಕೊಳ್ಳುವುದಿಲ್ಲ. ಅಗತ್ಯ ದಾಖಲಾತಿಗಳಿಲ್ಲದೆ ಯಾವುದೇ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡುವುದಿಲ್ಲ. ವ್ಯಾಪಾರಸ್ಥರು ಯಾವ್ಯಾವ ದಾಖಲಾತಿಗಳನ್ನು ಇಟ್ಟುಕೊಳ್ಳಬೇಕು. ಅವುಗಳನ್ನು ಯಾವ ಇಲಾಖೆಯಿಂದ ಪಡೆದುಕೊಳ್ಳಬೇಕು. ಸಾಲ ಸೌಲಭ್ಯಕ್ಕಾಗಿ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಅರಿವು ಮೂಡಿಸಲು ನಗರಸಭೆ ಈ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ ಎಂದರು.
ನಗರದಲ್ಲಿ ಸುಮಾರು ೨ ಸಾವಿರ ಮಂದಿ ಬೀದಿ ಬದಿ ವ್ಯಾಪಾರಿಗಳಿದ್ದಾರೆ. ಅವರಿಗೆ ನಗರಸಭೆಯಿಂದ ಯಾವುದೇ ತೊಂದರೆ ನೀಡುತ್ತಿಲ್ಲ. ಆದರೆ, ಕೆಲ ವ್ಯಾಪಾರಿಗಳು ನಮಗೆ ತೊಂದರೆ ನೀಡುತ್ತಿದ್ದಾರೆ. ಯಾರ ಹೊಟ್ಟೆಯ ಮೇಲೆ ಹೊಡೆಯಬಾರದೆಂಬ ಉದ್ದೇಶದಿಂದ ನಾವು ಕ್ರಮ ಕೈಗೊಂಡಿಲ್ಲ. ನೀವು ಕೂಡ ಸಾರ್ವಜನಿಕರಿಗೆ ತೊಂದರೆ ಆಗದಂತೆ ನಿಮ್ಮ ವ್ಯವಹಾರ ನಡೆಸಬೇಕು ಎಂದು ಕಿವಿಮಾತು ಹೇಳಿದ ಕೆ. ಶೇಷಾದ್ರಿ (ಶಶಿ) ಅವರು ರಸ್ತೆಗಳನ್ನು ಒತ್ತುವರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಿಎಂ ಸ್ವನಿಧಿ ಮತ್ತು ಸ್ವಯಂ ಉದ್ಯೋಗ, ಬ್ಯಾಂಕಿನ ವ್ಯವಹಾರ ಮತ್ತು ಮರುಪಾವತಿ, ಜ್ಞಾನ ಹಾಗೂ ಅಭಿವೃದ್ಧಿ, ಡಿಜಿಟಲ್ ವಹಿವಾಟು ಹಾಗೂ ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ನಗರಸಭೆ ಉಪಾಧ್ಯಕ್ಷೆ ಗಿರಿಜಮ್ಮ ಗುರುವೇಗೌಡ, ನಗರಸಭೆ ಅಧಿಕಾರಿ ನಟರಾಜೇಗೌಡ, ಪುಷ್ಪಲತ, ರಾಮಕೃಷ್ಣಪ್ಪ, ಮಹದೇವಯ್ಯ, ಚಿಕ್ಕತಾಯಮ್ಮ, ಸರಸ್ವತಿ, ಮೋಹನ್, ವಿಜಯಮ್ಮ, ಮಹೇಶ್ವರಿ ಇದ್ದರು.