ಮಾಗಡಿ ಪಟ್ಟಣದ ಗಾಣಿಗರ ಬೀದಿಯಲ್ಲಿ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿರುವುದು. 
ಬೆಂಗಳೂರು ದಕ್ಷಿಣ

ಬೆಂಕಿ ಬಿದ್ದು ಮನೆ ಸಂಪೂರ್ಣ ಭಸ್ಮ

ಮಾಗಡಿ: ಗಾಣಿಗರ ಬೀದಿಯ ಕಮಲಮ್ಮ ಎಂಬುವವರ ಮನೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಸೋಮವಾರ ಮಧ್ಯಾಹ್ನ ಕಮಲಮ್ಮ ಅವರು ಮನೆಯ ಕಂದಾಯ ಪಾವತಿಸಲು ಪುರಸಭೆಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಇಡೀ ಮನೆ ಆವರಿಸಿ ಮನೆಯಲ್ಲಿದ್ದ ಟೀವಿ, ಫ್ರಿಡ್ಜ್​, ಮರದ ಸಲಕರಣೆಗಳು ಸೇರಿದಂತೆ ದಿನಸಿ ಪದಾರ್ಥಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿವೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮನೆಯಿಂದ ಹೊಗೆ ಮತ್ತು ಬೆಂಕಿ ಬರುತ್ತಿರುವುದನ್ನು ಗಮನಿಸಿದ ಸ್ಥಳಿಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರಾದರೂ, ಅಷ್ಟರಲ್ಲಾಗಲೇ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿದ್ದವು. ಮಾಗಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.