ಕುದೂರು ಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರಕ್ಕಾಗಿ ಕಾದು ಕುಳಿತಿರುವ ಗ್ರಾಹಕರು.
ಕುದೂರು: ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಗುರುವಾರ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಹಾಗೂ ತಾಂತ್ರಿಕ ತೊಡಕಿನಿಂದಾಗಿ ಚೀಟಿದಾರರು ಪಡಿತರಕ್ಕಾಗಿ ಪರದಾದಾಡಿದರು.
ಮೇ ಹಾಗೂ ಜೂನ್ ತಿಂಗಳ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಕಾಡುತ್ತಿದ್ದು, ಗ್ರಾಹಕರು ಬೆಳಗ್ಗೆ 7 ಗಂಟೆಯಿಂದಲೇ ನ್ಯಾಯಬೆಲೆ ಅಂಗಡಿಯಲ್ಲಿ ಠಿಕಾಣಿ ಹೂಡಿದ್ದರು. ಆದರೆ ಸರ್ವರ್ ಸಮಸ್ಯೆಯಿಂದ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶದಂತೆ ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ಪಡೆಯಲು ಅರ್ಹರು ಎರಡು ಬಾರಿ ಕಡ್ಡಾಯವಾಗಿ ಹೆಬ್ಬೆಟ್ಟಿನ ಗುರುತು ನೀಡಬೇಕು. ಪರಿಣಾಮ ವಿತರಣಾ ಪ್ರಕ್ರಿಯೆಯಲ್ಲಿನ ತಾಂತ್ರಿಕ ತೊಡಕು ಪಡಿತರ ಕೇಂದ್ರದ ಮುಂದೆ ಜನದಟ್ಟಣೆಗೆ ಕಾರಣವಾಯಿತು.
ಗಂಟೆಗೆ ಗರಿಷ್ಠ 2ರಿಂದ 3 ಕಾರ್ಡ್ದಾರರಿಗೆ ಮಾತ್ರ ಪಡಿತರ ವಿತರಿಸಲು ಸಾಧ್ಯವಾಗುತ್ತಿದೆ. ಈ ಬಗ್ಗೆ ಆಹಾರ ಇಲಾಖೆಯವರನ್ನು ಸಂಪರ್ಕಿಸಿದರೆ ಸರ್ವರ್ ಸಮಸ್ಯೆಯಿಂದ ಸಮಯವನ್ನು ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ವಿಸ್ತರಿಸಲಾಗಿದೆ ಎನ್ನುತ್ತಾರೆ. ಗ್ರಾಮೀಣ ಭಾಗದ ಕೂಲಿಕಾರರು ಬೆಳಗ್ಗೆಯಿಂದ ರಾತ್ರಿವರೆಗೆ ಕೆಲಸ ಕಾರ್ಯ ಬಿಟ್ಟು ಕಾಯುವಂತಾಗಿದೆ.
ಆಹಾರ ಇಲಾಖೆಯ ನಿಯಮದಂತೆ ಪಡಿತರ ಪಡೆಯಲು ತಿಂಗಳೊಳಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ನೀಡಬೇಕು. ಬೆರಳ ಗುರುತು ನೀಡಲು ಆಗದವರಿಗೆ ಈ ತಿಂಗಳ ಅಕ್ಕಿ ರಾಗಿ ಸಿಗುವುದಿಲ್ಲ. ಇದರಿಂದ ಸರ್ಕಾರದ ಪಡಿತರವನ್ನೇ ನಂಬಿರುವ ಬಡವರು ಸಂಕಷ್ಟಕ್ಕೆ ಸಿಲುಕಿದ್ದು, ಪಡಿತರಕ್ಕಾಗಿ ಒಂದು ತಿಂಗಳು ಕಾಯಬೇಕಿದೆ ಎಂದು ಸಾರ್ವಜನಿಕರು ತಮ್ಮ ಅಳಲು ತೊಡಿಕೊಂಡಿದ್ದಾರೆ.
ಸರ್ವರ್ ಡೌನ್ ಆಗಿರುವುದರಿಂದ ಒಬ್ಬರ ಬಯೋಮೆಟ್ರಿಕ್ ಪಡೆಯಲು ಸುಮಾರು 30ರಿಂದ 40 ನಿಮಿಷ ತಗಲುತ್ತಿದೆ. ಮೇ ಮತ್ತು ಜೂನ್ ಎರಡು ತಿಂಗಳ ಬಯೋಮೆಟ್ರಿಕ್ ಪಡೆಯಬೇಕು ಎಂದು ವಿತರಕ ಹುಲಿಕಲ್ ಗ್ರಾಮದ ತಿಪ್ಪೇರುದ್ರಯ್ಯ ಹೇಳಿದರು.
ಬಯೋಮೆಟ್ರಿಕ್ ಸಮಸ್ಯೆ ನಡುವೆ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಅಕ್ಕಿ ಜತೆಗೆ ರಾಗಿಯನ್ನು ವಿತರಿಸಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿಗೆ 28 ಕೆಜಿ ಅಕ್ಕಿ, 42 ಕೆಜಿ ರಾಗಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ 10 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.
"
ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ನೀಡಲಾಗುತ್ತಿದೆ. ಬೆಳಗ್ಗೆ 6ರಿಂದ ರಾತ್ರಿ 10ರವರಿಗೆ ಪಡಿತರ ನೀಡಲು ಅವಕಾಶ ಕಲ್ಪಿಸಲಾಗಿದೆ. ಸರ್ವರ್ಗೆ ಹೆಚ್ಚು ಒತ್ತಡವಾದ ವೇಳೆ ಸ್ವಲ್ಪ ಸಮಸ್ಯೆ ಆಗುತ್ತಿದ್ದು, ತಾಂತ್ರಿಕ ತೊಡಕನ್ನು ಶ್ರೀವೇ ಬಗೆಹರಿಸಲಾಗುವುದು.
— > ಗಣೇಶ್, ಶಿರಸ್ತೇದಾರ್, ಆಹಾರ ಮತ್ತು ನಾಗರಿಕ ಆಹಾರ ಸರಬರಾಜು ಇಲಾಖೆ.