ಕನಕಪುರ ತಾಲೂಕಿನ ಸಂಗಮ ಬಳಿಯ ಮೇಕೆದಾಟುವಿನ ವಿಹಂಗಮ ನೋಟ.
- ಸುಮಾರು 5200 ಸಾವಿರ ಹೆಕ್ಟೇರ್ ಭೂ ಸ್ವಾಧೀನ
- 9000 ಕೋಟಿ ರೂ. ಯೋಜನೆ
- 66 ಟಿಎಂಸಿ ನೀರು ಸಂಗ್ರಹ ಉದ್ದೇಶ
- 5096 ಹೆಕ್ಟೇರ್ ಅರಣ್ಯ ಭೂಮಿ ಮುಳುಗಡೆ
ಮೇಕೆದಾಟು ಜಲಾಶಯ ಇದು ರಾಜ್ಯದ ಬಹು ವರ್ಷಗಳ ಕನಸು. ತಮಿಳು ನಾಡಿನ ಕ್ಯಾತೆಯಿಂದಾಗಿ ಯೋಜನೆ ವಿಳಂಭವಾಗುತ್ತಲೇ ಬಂದಿದೆ. ಆದರೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ವಾದಕ್ಕೆ ಮನ್ನಣೆ ದೊರೆತು, ತಮಿಳು ನಾಡಿಗೆ ಮುಖಭಂಗವಾಗಿರುವುದು ಹೊಸ ಆಸೆಯನ್ನು ಚಿಗುರಿಸಿದೆ..
ಈ ಯೋಜನೆ ಈಗ ಯಾವ ಹಂತದಲ್ಲಿ ಇದೆ? ಯೋಜನೆಯಿಂದ ಏನೆಲ್ಲಾ ಲಾಭವಾಗಲಿದೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ...
ಏನೆಲ್ಲ ಲಾಭ?
ಸದಾ ಬರದ ಬೇಗೆಯಿಂದ ಬೇಯುವ ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಯೋಜನೆಯಿಂದ ಲಾಭವಾಗುವುದಂತೂ ಖಚಿತ. ಇದರ ಜತೆಗೆ ಬೆಂಗಳೂರು ನಗರದ ನೀರಿನ ಬವಣೆಯನ್ನು ನೀಗಿಸಲಿದೆ. ಈ ಯೋಜನೆಯನ್ನು ಪ್ರಮುಖವಾಗಿ ನೀರು ಸಂಗ್ರಹ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯಲು ನೀರು ಬಳಕೆ ಮಾಡುವ ಉದ್ದೇಶದಿಂದಲೇ ರೂಪಿಸಲಾಗಿದೆ.
ಎಲ್ಲಿ ಯೋಜನೆ?
ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಬೇಕು ಎನ್ನುವ ಯೋಜನೆ ನಿನ್ನೆ ಮೊನ್ನೆಯದಲ್ಲ. ಈ ಹಿಂದೆಯೇ ಅಂದರೆ ಸುಮಾರು 35-40 ವರ್ಷಗಳ ಹಿಂದೆಯೇ ಯೋಜನೆ ಜಾರಿಗೆ ಸರ್ಕಾರ ಮುಂದಾಗಿತ್ತು. ಇದಕ್ಕಾಗಿ ಕ್ರಮಗಳನ್ನು ಕೈಗೊಂಡಿತ್ತು ಎನ್ನುವುದು ಸ್ಥಳೀಯರ ವಾದ. ಇದಕ್ಕೆ ಪುಷ್ಟಿ ನೀಡುವಂತೆ ಕಾವೇರಿ ನದಿ ಹರಿಯುವ ಮತ್ತು ಮೇಕೆದಾಟು ಪ್ರವಾಸಿ ಸ್ಥಳದಿಂದ 3-4 ಕಿಲೋ ಮೀಟರ್‌ಗೂ ಮೊದಲೇ ಸಿಗುವ ಒಂಟಿ ಗುಂಡು ಎಂಬ ಸ್ಥಳದಲ್ಲಿ ಅಲ್ಲಲ್ಲಿ ಸಿಮೆಂಟ್ ಮೂಲಕ ನಿರ್ಮಾಣ ಮಾಡಿರುವ ಪಿಲ್ಲರ್‌ಗಳು ಕಾಣ ಸಿಗುತ್ತವೆ. ಇದೇ ಜಾಗದಲ್ಲಿ ಒಂಟಿ ಗುಂಡು ಜಲಾಶಯ ನಿರ್ಮಾಣವಾಗಲಿದೆ ಎನ್ನಲಾಗಿದೆ.
ಪರ್ಯಾಯ ಭೂಮಿ
ಕಾವೇರಿ ವನ್ಯ ಜೀವಿಧಾಮದಲ್ಲಿ ಮೇಕೆದಾಟು ಯೋಜನೆ ಜಾರಿಯಿಂದ ಸುಮಾರು 5,200 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದೆ. ಇದರಲ್ಲಿ 5 ಗ್ರಾಮಗಳು ಹಲವಾರು ಪ್ರೇಕ್ಷಣೀಯ ಸ್ಥಳಗಳು ಇವೆ. ಒಟ್ಟಾರೆ ಮುಳಗಡೆಯಾಗುವ ಪ್ರದೇಶದಲ್ಲಿ ಒಟ್ಟು 5096 ಹೆಕ್ಟೇರ್ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಇದಕ್ಕೆ ಪರ್ಯಾಯವಾಗಿ ಮಂಡ್ಯ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಪರ್ಯಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಲು ಈಗಾಗಲೇ ಜಾಗವನ್ನು ಗುರ್ತಿಸಲಾಗಿದೆ. ಯೋಜನೆ ಜಾರಿಗೆ ಮುಂದಾಗುತ್ತಿದ್ದಂತೆ ಇದಕ್ಕೆ ಚಾಲನೆ ದೊರೆಯಲಿದೆ.
5 ಗ್ರಾಮಗಳು ಸ್ಥಳಾಂತರ
ಮೇಕೆದಾಟು ಯೋಜನೆ ಜಾರಿಗೆ ಬರುತ್ತಿದ್ದಂತೆ ಈ ಭಾಗದ 5 ಗ್ರಾಮಗಳು ಸ್ಥಳಾಂತರಗೊಳ್ಳಲಿವೆ. ಸಂಗಮ ವಲಯ ವ್ಯಾಪ್ತಿಗೆ ಒಳಪಡುವ ಕೊಗ್ಗೆದೊಡ್ಡಿ, ಹಿರೇ ಮಡಿವಾಳ, ಬೊಮ್ಮಸಂದ್ರ, ಸಂಗಮ ಮತ್ತು ಮುತ್ತತ್ತಿ ವಲಯ ವ್ಯಾಪ್ತಿಗೆ ಒಳಪಡುವ ಮುತ್ತತ್ತಿ ಸಂಪೂರ್ಣ ಮುಳುಗಡೆಯಾಗಲಿದ್ದು, ಇಲ್ಲಿ 161 ಹೆಕ್ಟೇರ್ ಖಾಸಗಿ ಭೂಮಿ ಮುಳುಗಡೆಯಾಗಲಿದೆ. 233 ಕುಟುಂಬಗಳನ್ನು ಸ್ಥಳಾಂತರಿಸುವ ಜತೆಗೆ, ಅವರಿಗೆ ಪರ್ಯಾಯ ಭೂಮಿ ಮತ್ತು ಪರಿಹಾರ ನೀಡಬೇಕಿದೆ.
ಕಾವೇರಿ ವನ್ಯ ಪ್ರಪಂಚ
ಕಾವೇರಿ ವನ್ಯ ಜೀವಿಧಾಮವನ್ನು ವನ್ಯ ಪ್ರಪಂಚವೆಂದರೆ ತಪ್ಪಾಗಲಾರದು. ಸುಮಾರು 1,02,753 ಹೆಕ್ಟೇರ್ ವಿಸ್ತೀರ್ಣ ಹೊಂದಿರುವ ಕಾವೇರಿ ವನ್ಯ ಜೀವಿಧಾಮ ತಮಿಳುನಾಡಿನ ಗಡಿಗೆ ಹೊಂದಿಕೊಂಡಿದೆ. ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ವ್ಯಾಪ್ತಿಗೆ ಒಳಪಟ್ಟಿದೆ. ಎಲೆ ಉದುರಿಸುವ ಕುರುಚಲು ಕಾಡಾಗಿದ್ದು, ವಿವಿಧ ಜಾತಿಯ ಅಪರೂಪದ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ಆಶ್ರಯ ನೀಡಿದೆ. ಆನೆ, ಚಿರತೆ, ಜಿಂಕೆ ಮಾತ್ರವಲ್ಲದೆ, ಹನಿ ಬಡ್ಜರ್‌ನಂತ ಅಪರೂಪದ ಪ್ರಾಣಿಗಳು ಇಲ್ಲಿವೆ. ಅಳಿವಿನಂಚಿನಲ್ಲಿರುವ ಬೂದು ಬಣ್ಣದ ದೈತ್ಯ ಅಳಿಲುಗಳು, ಜತೆಗೆ 280 ವಿವಿಧ ಜಾತಿಯ ಪಕ್ಷಿ ಸಂಕುಲವಿದೆ.
ಕಾವೇರಿ ನದಿಯಲ್ಲಿ ಮಾತ್ರ ಕಾಣ ಸಿಗುವ ಮತ್ತು ಅಳಿವಿನಂಚಿನಲ್ಲಿರುವ ಮಹಶೀರ್ ಜಾತಿಯ ಮೀನುಗಳು, ಮೊಸಳೆಗಳು, ಆಮೆಗಳು, ನೀರು ನಾಯಿಗಳು ಕಾವೇರಿ ನದಿಯಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿವೆ.