ರಾಮನಗರ ಜಿಲ್ಲಾಶ್ಪತ್ರೆಯಲ್ಲಿ ಬಸವನಪುರ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯ ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು. 
ಬೆಂಗಳೂರು ದಕ್ಷಿಣ

ವಿಷಾಹಾರ ಸೇವನೆ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಪ್ರಮುಖ ಮುಖ್ಯಾಂಶಗಳು

  • ಬಸವನಪುರ ವಾಲ್ಮೀಕಿ ವಸತಿ ಶಾಲೆಯಲ್ಲಿ ಘಟನೆ
  • 11 ಮಕ್ಕಳು ಆಸ್ಪತ್ರೆಗೆ ದಾಖಲು
ರಾಮನಗರ : ರಾತ್ರಿ ಊಟದ ನಂತರ ವಸತಿ ಶಾಲೆ ಮಕ್ಕಳಿಗೆ ಊಟದಲ್ಲಿ ವ್ಯತ್ಯಾಸ ಉಂಟಾಗಿ ವಾಂತಿ, ಹೊಟ್ಟೆನೋವು ಕಾಣಿಸಿಕೊಂಡು ರಾಮನಗರ ಜಿಲ್ಲಾಸ್ಪತ್ರೆಗೆ ಗುರುವಾರ ರಾತ್ರಿ 11 ವಿದ್ಯಾರ್ಥಿಗಳು ದಾಖಲಾದ ಘಟನೆ ನಡೆದಿದೆ.
ರಾಮನಗರ ಸಮೀಪದ ಬಸವನಪುರ ವಾಲ್ಮೀಕಿ ಗಿರಿಜನ ಆಶ್ರಮ ಶಾಲೆಯಲ್ಲಿ ಘಟನೆ ನಡೆದಿದೆ. ಅಡುಗೆಯವರು ಮತ್ತು ವಾರ್ಡನ್ ನಿರ್ಲಕ್ಷö್ಯದ ಬಗ್ಗೆ ಮಕ್ಕಳ ಪಾಲಕರು, ವಿದ್ಯಾರ್ಥಿಗಳ ಆಕ್ಷೇಪ ಸಮಗ್ರ ತನಿಖೆ ನಡಸುವಂತೆ ಸಾರ್ವಜನಿಕರ ಒತ್ತಾಯವಾಗಿದೆ.
ಆಶ್ರಮ ಶಾಲೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಹೆಣ್ಣು ಮತ್ತು ಗಂಡು ಮಕ್ಕಳು 1 ರಿಂದ 5 ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ರಾತ್ರಿ ಊಟಕ್ಕೆ ಸೊಪ್ಪಿನ ಸಾರು ಅನ್ನ ಮಾಡಲಾಗಿತ್ತು. ಕೆಲ ಮಕ್ಕಳಿಗೆ ರಾತ್ರಿ ಊಟದ ನಂತರ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಉಂಟಾಗಿದೆ.
ಮಕ್ಕಳಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಳ್ಳುತ್ತಲೇ ಮಕ್ಕಳ ಪಾಲಕರಿಗೆ ವಿಷಯ ತಿಳಿದಿದೆ. ಅಷ್ಟರಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ವಾಂತಿ ಮಾಡಿಕೊಳ್ಳುತ್ತಿದ್ದ ಮಕ್ಕಳನ್ನು ತಕ್ಷಣವೇ ಪಾಲಕರ ಜೊತೆಯಲ್ಲಿಯೇ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ನಂತರ ಮಕ್ಕಳು ಚೇತರಿಸಿಕೊಂಡಿದ್ದಾರೆ.
ಚಿಕಿತ್ಸೆ ನೀಡಿದ ವೈದ್ಯರು ಶುಕ್ರವಾರ ಸಂಜೆವರೆಗೂ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು ಸಂಜೆ ಗುಣಮುಖರಾದನಂತರ ಮನೆಗೆ ಪಾಲಕರ ಜೊತೆ ಕಳುಹಿಸಿದರು. ಮಕ್ಕಳ ರಕ್ಷಣಾ ಘಟಕ ಅಧಿಕಾರಿಗಳು ಘಟನೆ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಂಡರು.
========
ವಸತಿ ಆಶ್ರಮ ಶಾಲೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಧೈರ್ಯ ಹೇಳಿದ್ದೇವೆ. ಅಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಮಾಹಿತಿ ಕಲೆಹಾಕಿ ಮಕ್ಕಳ ಕೌನ್ಸೆಲಿಂಗ್ ಸಹ ಮಾಡಿದ್ದೇವೆ. ಈ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತೇವೆ.
ರಜಿನಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ.
&&&&&&&&&
ಫುಡ್ ಪಾಯಿಸನ್ ಆಗಿದೆ, ವಾಂತಿ ಹೊಟ್ಟೆ ನೋವು ಎಂದು ಮಕ್ಕಳನ್ನು ರಾತ್ರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದರು ನಮ್ಮ ವೈದ್ಯರು ಅಗತ್ಯ ಚಿಕಿತ್ಸೆ ನೀಡಿದ್ದು, ಮಕ್ಕಳು ಚೇತರಿಸಿಕೊಂಡಿದ್ದಾರೆ ಅವರ ರಕ್ತ ಪರೀಕ್ಷೆ ನಡೆಸಲಾಗಿದೆ. ಮಕ್ಕಳು ಆರೋಗ್ಯವಾಗಿದ್ದು ಮನೆಗೆ ಕಳಿಸಿದ್ದೇವೆ. ಮಕ್ಕಳು ಬಳಸುತ್ತಿರುವ ನೀರು ಅಥವಾ ಉಳಿದ ಆಹಾರವನ್ನು ಪರೀಕ್ಷೆ ಮಾಡಿದರೆ ನಿಖರ ಕಾರಣ ತಿಳಿದು ಬರಲಿದೆ.
ಡಾ. ಮಂಜುನಾಥ್, ಜಿಲ್ಲಾ ಶಸ್ತçಚಿಕಿತ್ಸಕ.
&&&&&&&&
ಪ್ರಕರಣದ ನಂತರ ವಾರ್ಡ್ನ್ ಸಮೇತ ಅಲ್ಲಿನ ಅಡುಗೆ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲು ತಾಲೂಕು ಅಧಿಕಾರಿಗೆ ತಿಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಆರೋಗ್ಯವಾಗಿದ್ದಾರೆ. ಫುಡ್ ಪಾಯಿಸನ್ ಆಗಿರುವ ಕುರಿತು ವೈದ್ಯರ ವರದಿಯಲ್ಲಿ ದೃಢಪಟ್ಟಿಲ್ಲ. ಮಕ್ಕಳು ಪ್ಯಾನಿಕ್ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಸಂಪೂರ್ಣ ತನಿಖೆ ಮಾಡಲಾಗುವುದು.
ಶಿವಕುಮಾರ್, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.
====