ವಿಜಯ್​ 
ಬೆಂಗಳೂರು ದಕ್ಷಿಣ

ಕ್ಯಾಂಟರ್​ ಹರಿದು ವಿದ್ಯಾರ್ಥಿ ಸಾವು

ಬಿಡದಿ: ಪಟ್ಟಣದ ಬೆಂಗಳೂರು&ಮೈಸೂರು ಹೆದ್ದಾರಿಯ ಬಾನಂದೂರು ಕ್ರಾಸ್​ ಬಳಿ ಹೆದ್ದಾರಿ ಪಕ್ಕ ಕ್ಯಾಂಟರ್​ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇಲ್ಲಿನ ಬಿಲ್ಲಕೆಂಪನಹಳ್ಳಿ ವಾಸವಿದ್ದ, ಮೂಲತ ಯಾದಗಿರಿ ಜಿಲ್ಲೆಯ ಮೋತಿಲಾಲ್​ ಅವರ ಪುತ್ರ ವಿಜಯ್​ (13) ಮೃತ.
ಬಿಡದಿ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿಜಯ್​ ಎಂದಿನಂತೆ ಗುರುವಾರ ಶಾಲೆಗೆ ತೆರಳಲು ಪರಿಚಿತರ ಬೈಕ್​ನಲ್ಲಿ ಬಾನಂದೂರು ಕ್ರಾಸ್​ವರೆಗೂ ಬಂದಿದ್ದ. ಅಲ್ಲಿಂದ ಬಿಡದಿ ಕಡೆಗೆ ಹೋಗಲು ಹೆದ್ದಾರಿ ಪಕ್ಕದಲ್ಲಿ ನಿಂತಿದ್ದಾಗ ಬೆಂಗಳೂರು ಕಡೆಯಿಂದ ಕಬ್ಬಿಣ ತುಂಬಿಕೊಂಡು ಬಂದ ಕ್ಯಾಂಟರ್​ ಚಾಲಕ ಏಕಾಏಕಿ ಬಾಲಕನತ್ತ ವಾಹನ ತಿರುಗಿಸಿದ್ದಾನೆ. ಪರಿಣಾಮ ತಲೆಯ ಮೇಲೆ ಕ್ಯಾಂಟರ್​ ಚಕ್ರ ಹರಿದು ವಿಜಯ್​ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಚಾಲಕನ ವಶ
ಚಾಲಕ ಮದ್ಯಪಾನ ಮಾಡಿ ವಾಹನ ಚಾಲಾಯಿಸುತ್ತಿದ್ದ ಎನ್ನಲಾಗಿದ್ದು, ಅಪಘಾತದ ಬಳಿಕ ಓಡಿ ಹೋಗಲು ಪ್ರಯತ್ನಿಸಿದಾಗ ಸ್ಥಳಿಯರು ಆತನನ್ನು ಹಿಡಿದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದರು. ಸ್ಥಳ ಪರಿಶೀಲಿಸಿ, ಚಾಲಕನನ್ನು ವಶಕ್ಕೆ ಪಡೆದ ಬಿಡದಿ ಪೊಲೀಸರು, ಬಾಲಕನ ಮೃತ ದೇಹವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀೆ ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದರು. ಬಿಡದಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ
ಯಾದಗಿರಿ ಜಿಲ್ಲೆಯವರಾದ ವಿಜಯ್​ ತಂದೆ ಕೆಲಸ ಅರಸಿ ಬಿಡದಿಗೆ ಬಂದು ಬಿಲ್ಲಕೆಂಪನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೂವರು ಗಂಡು ಮಕ್ಕಳ ಪೈಕಿ ವಿಜಯ್​ ಅವಳಿ&ಜವಳಿ ಮಗನಾಗಿದ್ದ. ದೂರುದೂರಿನಿಂದ ಕೆಲಸಕ್ಕೆ ಬಂದಿದ್ದ ಕುಟುಂಬಕ್ಕೆ ಮಗನ ಸಾವು ಬರಸಿಡಿಲಿನಂತೆ ಅಪ್ಪಳಿಸಿದ್ದು, ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.