ಮಾಗಡಿ ಕೋಟೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರನ್ನು ಶಾಸಕ ಎಚ್​.ಸಿ.ಬಾಲಕೃಷ್ಣ ಅಭಿನಂದಿಸಿದರು. ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರವೀಶ್​, ಪಾಪಣ್ಣಿ ಇದ್ದರು. 
ಬೆಂಗಳೂರು ದಕ್ಷಿಣ

ಗರಡಿ ಮನೆಗಳ ಅಭಿವೃದ್ಧಿಗೆ ಕ್ರಮ

ಮಾಗಡಿ: ತಾಲೂಕಿನಲ್ಲಿನ ಎಲ್ಲ ಗರಡಿ ಮನೆಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಹೇಳಿದರು.
ಪಟ್ಟಣದ ಕೋಟೆ ಮೈದಾನದಲ್ಲಿ ಕೆಂಪೇಗೌಡ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಕುಸ್ತಿ ಕಲೆ ಪುರುಷ ಕ್ರೀಡೆಗಳಲ್ಲೇ ಶ್ರೇಷ್ಠವಾಗಿದೆ. ಕುಸ್ತಿ ಶರೀರದ ಎಲ್ಲ ಭಾಗಗಳಿಗೂ ವ್ಯಾಯಾಮ ಒದಗಿಸಿ, ದೇಹವನ್ನು ಸಮ ಪ್ರಮಾಣದಲ್ಲಿ ಅಭಿವೃದ್ಧಿಗೊಳಿಸಿ ಮಾಂಸಖಂಡಗಳನ್ನು ತುಂಬುವಂತೆ ಮಾಡತ್ತದೆ. ನೋಡಲು ದೇಹ ಅಂದವಾಗಿ ಕಾಣುವಂತೆ ಮಾಡುತ್ತದೆ. ಧೈರ್ಯ ಹಾಗೂ ಮುನ್ನುಗುವ ಶಕ್ತಿಗಳನ್ನೂ ಕೊಟ್ಟು ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ ಎಂದರು.
ಬೇರೆ ಯಾವ ಕ್ರೀಡೆಯಲ್ಲಿಯೂ ಗುರುಭಕ್ತಿ ಕಂಡುಬರುವುದಿಲ್ಲ. ಶಿಷ್ಯನಾದವ ಗುರುವಿನ ಕಾಲಿಗೆ ಬೀಳುವ ಪದ್ಧತಿ ಇಂದಿಗೂ ಗರಡಿಗಳಲ್ಲಿ ರೂಢಿಯಲ್ಲಿದೆ. ತಾಲೂಕಿನಲ್ಲಿ ಕುಸ್ತಿಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಲಾಗುವುದು ಎಂದ ಬಾಲಕೃಷ್ಣ, 50ಕ್ಕೂ ಹೆಚ್ಚು ಕುಸ್ತಿ ಪಟುಗಳು ಭಾಗವಹಿಸಿ ಪ್ರದರ್ಶನ ನೀಡಿದ್ದಾರೆ. ಕ್ರಿಕೆಟ್​, ಕಬಡ್ಡಿಗೆ ನೀಡುವ ಪೋತ್ಸಾಹ ಕುಸ್ತಿಗೂ ನೀಡಬೇಕಿದೆ ಎಂದರು.
ಬಿಎಂಆರ್​ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿಮಾತನಾಡಿ, ಕುಸ್ತಿ ಸಾವಿರಾರು ವರ್ಷಗಳಷ್ಟು ಹಳೆಯ ಕ್ರೀಡೆಯಾಗಿದ್ದು, ಪ್ರಾಚಿನ ಭಾರತದಲ್ಲಿ ಮಲ್ಲಯುದ್ಧ ಎಂದು ಕರೆಯಲಾಗುತ್ತಿತ್ತು. ಭಾರತದಲ್ಲಿ ಜನಪ್ರಿಯವಾಗಿರುವ ಕುಸ್ತಿ ಶಕ್ತಿ, ತಂತ್ರ ಮತ್ತು ಕೌಶಲದ ಸಂಕೇತವಾಗಿದೆ. ನಾಡಪ್ರಭು ಕೆಂಪೇಗೌಡರು ಕುಸ್ತಿ ಪಂದ್ಯಾವಳಿಗೆ ಹೆಚ್ಚು ಅಸಕ್ತಿ ನೀಡಿದ್ದರು ಎಂದರು.
ಕುಸ್ತಿ ಅಖಾಡದಲ್ಲಿ ಪೈಲ್ವಾನರು ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲ್ಲೂ ನೆರೆದಿದ್ದ ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು.
ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ರವೀಶ್​, ಪುರಸಭೆ ಅಧ್ಯೆ ಶಿವರುದ್ರಮ್ಮ ವಿಜಯ್​ ಕುಮಾರ್​, ಸದಸ್ಯರಾದ ಶಿವಕುಮಾರ್​, ಹೇಮಲತಾ, ರಮ್ಯಾನರಸಿಂಹಮೂರ್ತಿ, ಆಶ್ವತ್ಥ, ಕುಂಕುಮ ಉಮೇಶ್​, ಕಸ್ತೂರಿ ಕಿರಣ್​, ಪಾಪಣ್ಣ, ಹಲಸಬೆಲೆ ಯೋಗೇಶ್​, ಪೈಲ್ವಾನ್​ಗಳಾದ ಮುನಿಸ್ವಾಮಯ್ಯ, ಯಶವಂತ್​, ಚಿನ್ನಣ್ಣ, ಮಿಲಿಟರಿ ಶರ್ಮ, ಯತೀರಾಜು, ಶಂಕರ್​, ಜಯಂತ್​. ದೊಡ್ಡಿ ಲೋಕೇಶ್​, ನಾಗೇಶ್​ ಇದ್ದರು.