ಹಾರೋಹಳ್ಳಿ: ತೋಕಸಂದ್ರ ಸರ್ಕಾರಿ ಆಸ್ಪತ್ರೆಯ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ವಿಡಿಯೋ ಮಾಡುತ್ತಿದ್ದ ಆರೋಗ್ಯ ಕೇಂದ್ರದ ಡಿ ಗ್ರೂಪ್ ನೌಕರ ಶ್ರೀಧರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಈತ ಶೌಚಗೃಹದಲ್ಲಿ ಕ್ಯಾಮರಾ ಇಟ್ಟು ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣ ಬಯಲಾಗಿದ್ದೇಗೆ?: ಮಹಿಳೆಯೊಬ್ಬರು ಆರೋಗ್ಯ ತಪಾಸಣೆಗೆ ಬಂದಿದ್ದಾಗ ಶೌಚಗೃಹಕ್ಕೆ ತೆರಳಿದ್ದಾರೆ. ಆದರೆ, ನೀರು ಬರದೆ ಮತ್ತೆ ವಾಪಸಾಗಿ ಸಿಬ್ಬಂದಿಗೆ ತಿಳಿಸಿದ್ದಾರೆ. ಪರಿಶೀಲಿಸಿದ ಸಿಬ್ಬಂದಿ ನೀರು ಬರುತ್ತಿದೆ ಹೋಗಿ ಎಂದು ಹೇಳಿದ್ದಾರೆ. ನಂತರ ಮಹಿಳೆ ಶೌಚಗೃಹಕ್ಕೆ ಹೋಗಿದ್ದಾರೆ. ಈ ವೇಳೆ ಅಲ್ಲಿ ಚಿಕ್ಕ ವಸ್ತು ಇರುವುದನ್ನು ಗಮನಿಸಿದಾಗ ಅದು ಕ್ಯಾಮರಾ ಎಂಬುದು ಗೊತ್ತಾಗಿದೆ. ಕೂಡಲೇ ಹೊರಬಂದು ವೈದ್ಯರು ಹಾಗೂ ಪತಿಗೆ ವಿವರಿಸಿದ್ದಾರೆ.
ಅಷ್ಟರಲ್ಲಾಗಲೇ ಸ್ಥಳಕ್ಕೆ ಆಗಮಿಸಿದ ಶ್ರೀಧರ್ ಕ್ಯಾಮರಾ ಒಡೆದು ಹಾಕಿದ್ದಾನೆ. ಇದರಿಂದ ಕುಪಿತಗೊಂಡ ಸಾರ್ವಜನಿಕರು ಆತನನ್ನು ಥಳಿಸಿ ಹಾರೋಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕ್ಯಾಮರಾದಲ್ಲಿದ್ದ ಮೆಮೊರಿ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ಕ್ಯಾಮರಾದಲ್ಲಿ ಎಂಟು ವಿಡಿಯೋಗಳು ಚಿತ್ರೀಕರಣಗೊಂಡಿದ್ದು, ಮತ್ತೆ ಮಹಿಳೆಯರ ಅಶ್ಲೀಲ ದೃಶ್ಯವನ್ನು ಚಿತ್ರೀಕರಣ ಮಾಡಲು ಇಟ್ಟಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಹಾರೋಹಳ್ಳಿ ಠಾಣೆ ಇನ್ಸ್ಪೆಕ್ಟರ್ ಮಲ್ಲೆಶ್ ತಿಳಿಸಿದ್ದಾರೆ.