ಮಾವಿಗೆ ಜೋನಿ ರೋಗ ತಗುಲಿರುವುದು.
- ರೋಗ, ಕೀಟಬಾಧೆಯಿಂದ ನೆಲಕ್ಕುದುರುತ್ತಿದೆ ಸಲು
- ನಷ್ಟ ಭಯದಲ್ಲಿ ಬೆಳೆಗಾರರು
ಒಂದು ಕಡೆ ಬಿಸಿಲ ಝಳ, ಮತ್ತೊಂದೆಡೆ ಜೋನಿ, ಬೂದಿ ರೋಗ, ಥ್ರೀಪ್ಸ್ ಕೀಟ ಬಾಧೆ ಹೊಡೆತಕ್ಕೆ ಸಿಲುಕಿದ ಮಾವು ಕಳೆದ ವರ್ಷದಂತೆ ಈ ವರ್ಷವೂ ರೈತನಿಗೆ ಸಿಹಿ ಬದಲು ಹುಳಿಯಾಗುವ ಆತಂಕ ಮನೆಮಾಡಿದೆ.
ಹೌದು. ಏರುತ್ತಿರುವ ಬಿಸಿಲ ಝಳಕ್ಕೆ ಗಿಡದ ತೊಟ್ಟಿನಲ್ಲೇ ಮಾವಿನಕಾಯಿಗಳು ಬಾಡಿ ಬೆಂಡಾಗಿ ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕುದುರುತ್ತಿವೆ. ಅಳಿದುಳಿದ ಮಾವು ಕೈ ಸೇರುತ್ತದೆ ಎಂಬ ವಿಶ್ವಾಸ ಇಲ್ಲವಾಗಿದೆ. ಜಿಲ್ಲೆಯ ರೈತರ ವಾಣಿಜ್ಯ ಬೆಳೆ ಮಾವು. ಸೇಂದೂರ, ತೋತಾಪುರಿ, ರಸಪೂರಿ ಶೇ.15ರಿಂದ 20 ಇದ್ದರೆ,ಬಾದಾಮಿ ಶೇ.5 ರಷ್ಟಿದೆ. ವಾತಾವರಣದಲ್ಲಿನ ಬದಲಾವಣೆ, ಜೋನಿ, ಥ್ರೀಪ್ಸ್ ಕೀಟ ಬಾಧೆ, ಹೂವು ಬಿಡುವುದರಲ್ಲಿ ಕಾಲದ ಬದಲಾವಣೆ, ಬಿಟ್ಟ ಹೂವು ಉದುರುತ್ತಿರುವುದು ಸೇರಿದಂತೆ ಹಲವು ಕಾರಣದಿಂದ ಶೇ.90ನಷ್ಟ ಕಾಣುತ್ತಿದೆ. ಇಷ್ಟೊತ್ತಿಗೆ ಮಾರುಕಟ್ಟೆಗೆ ಮುಖ ಮಾಡಬೇಕಾದ ರೈತರು ತೋಟದಲ್ಲಿ ಫಸಲಿಲ್ಲದೆ ನಷ್ಟದ ಭೀತಿಯಿಂದ ಆಕಾಶದತ್ತ ಮುಖ ಮಾಡುವಂತಾಗಿದೆ ಎನ್ನುತ್ತಾರೆ ಹುಣಸನಹಳ್ಳಿಯ ರೈತ ಮೋಹನ್.
ಕಡಿಮೆಯಾಗದ ರೋಗ
ಮಾವಿಗೆ ಜೋನಿ, ಬೂದಿ ರೋಗ ಶಾಪವಾಗಿದೆ. ಈ ಬಾರಿ ಹೂವಿನಿಂದಲೂ ಪ್ರಾರಂಭವಾಗಿರುವ ಜೋನಿ, ಬೂದಿ, ಥ್ರಿಪ್ಸ್ ಕೀಟಬಾಧೆ ಕಾಯಿ ದಪ್ಪವಾದಾಗಲೂ ರೋಗ ಹತೋಟಿಗೆ ಬಂದಿಲ್ಲ. ಇದರಿಂದ ಇಡೀ ಮಾವಿನಮರದ ತುಂಬೆಲ್ಲಾ ಜೋನಿ ಅಂಟು ದ್ರವ ಸೋರುತ್ತಿದೆ. ಕಾಯಿಗಳ ಮೇಲೆ ಜೋನಿ ಅಂಟು ಸೋರಿ ಕಾಯಿಗಳು ಕಪ್ಪಾಗಿ ನೆಲಕಚ್ಚುತ್ತಿವೆ. ಬೂದಿ ರೋಗದಿಂದ ಹೂವು ಹಂತದಲ್ಲೇ ಕಾಯಿಗಳು ಉದುರಿವೆ.
ಹೂವು ಕಚ್ಚಿಲ್ಲ
ಜಿಲ್ಲೆಯಲ್ಲಿ ಸರಾಸರಿ 27,638 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದ್ದು, ರಾಮನಗರ 10,534, ಚನ್ನಪಟ್ಟಣ 4,896, ಕನಕಪುರ 4,774, ಮಾಗಡಿ 6,695, ಹಾರೋಹಳ್ಳಿ 738 ಹೆಕ್ಟೇರ್ ಪ್ರದೇಶದಲ್ಲಿ ಮಾವು ಇದೆ. ಈ ಬಾರಿ ಮಾವಿನಲ್ಲಿ ಹೆಚ್ಚಿನ ಫಸಲು ಜಿಲ್ಲೆಯಲ್ಲಿ ಕಾಣುತ್ತಿಲ್ಲ. ವಿರಳ ಹೂವು ಬಿಟ್ಟಿದ್ದ ತೋಟಗಳಲ್ಲಿ ಫಸಲು ಬೆರೆಳೆಣಿಕೆಯಷ್ಟಿದೆ. ಬಿಸಿಲ ಝಳಕ್ಕೆ ಹೂವು ಉದುರಿ ಕಾಯಿ ಕಚ್ಚದೆ ಮಾವಿನತೋಟಗಳು ಬರಡಾಗಿವೆ. ಮಾವಿನ ತೋಟ ಗುತ್ತಿಗೆ ಪಡೆದ ಮಾರಾಟಗಾರರಿಗೆ, ರೈತರಿಗೆ ಆರ್ಥಿಕ ಚಿಂತೆ ಕಾಡುತ್ತಿದೆ.
ಔಷಧ ಸಿಂಪಡಣೆಗೂ ಜಗ್ಗಿಲ್ಲ
ಜೋನಿ, ಬೂದಿ ರೋಗ ಹತೋಟಿಗೆ ರೈತರು ಔಷಧ ಸಿಂಪಡಣೆ ಮಾಡಿ ಅಳಿದುಳಿದ ಮಾವಿನ ಫಸಲನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಫಲ ನೀಡಿಲ್ಲ. ಇದ್ದ ಫಸಲಿನಲ್ಲೇ ಒಂದಷ್ಟು ನಷ್ಟ ತೂಗಿಸಿಕೊಳ್ಳೋಣ ಎಂಬ ಆಸೆ ಇಟ್ಟುಕೊಂಡ ರೈತರಿಗೆ ಬಿಸಿಲ ಝಳ ನಿರಾಸೆ ತಂದಿದೆ.
ಬಾರದ ಮಳೆ
ಪ್ರತಿ ವರ್ಷ ಮಾರ್ಚ್ನಲ್ಲಿ ಅಕಾಲಿಕವಾಗಿಯಾದರೂ ಮಳೆ ಸುರಿಯುತ್ತಿತ್ತು. ಇದರಿಂದ ಮಾವಿನಕಾಯಿ ದಪ್ಪವಾಗಲು ಸಹಕಾರಿಯಾಗುತ್ತಿತ್ತು. ಆದರೆ, ಈ ಬಾರಿ ಅಕಾಲಿಕ ಮಳೆಯೂ ಇಲ್ಲ, ಇತ್ತ ಬಿಸಿಲಿನ ಝಳ ಹೆಚ್ಚಳದಿಂದ ಕಾಯಿಗಳು ದಪ್ಪವೂ ಆಗದೆ ಉದುರುತ್ತಿವೆ.
ಕಳೆದ ಬಾರಿಯೂ ನಷ್ಟ
ಕಳೆದ ವರ್ಷ ಎರಡ್ಮೂರು ಬಾರಿ ಹೂವು ಬಿಟ್ಟು ಕಾಯಿಗಳು ಕಚ್ಚಿದ್ದವು. ಮಾರ್ಚ್&ಏಪ್ರಿಲ್ನಲ್ಲಿ ಅಕಾಲಿಕವಾದರೂ ಒಂದಷ್ಟು ಹದ ಮಳೆಯಾಗಿದ್ದರಿಂದ ಮಾವಿನ ಕಾಯಿಗಳು ದಪ್ಪವಾಗಿ ಫಸಲು ರೈತರ ಕೈ ಸೇರಿತ್ತು. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ಸೆಂದೂರ ಕೆಜಿಗೆ 2, 3 ರೂ. ಬಾದಾಮಿ 5, 6, 7, ರಸಪೂರಿ 4, 5 ರೂ.ಗೆ ತಲುಪಿ ರೈತರು ಮರದಲ್ಲೇ ಕಾಯಿಗಳನ್ನು ಬಿಟ್ಟು ನಷ್ಟಕ್ಕೆ ಒಳಗಾದರು.
ಜೋನಿ ರೋಗ ಹತೋಟಿಗೆ ಬರದೆ ಇಡೀ ಮಾವಿನ ತೋಟ ಜೋನಿ ಅಂಟು ದ್ರವದಲ್ಲಿ ತೊಯ್ಯುತ್ತಿದೆ. ಬಿಟ್ಟ ಹೂವು ಬೂದಿ ರೋಗಕ್ಕೆ ತುತ್ತಾಗಿ ಪೀಚು ಕಚ್ಚಲಿಲ್ಲ. ಇದ್ದ ಕಾಯಿಗಳು ಬಿಸಿಲಿನ ಝಳಕ್ಕೆ ಬಾಡಿ ಬೆಂಡಾಗಿ ಉದುರುತ್ತಿವೆ. ತೊಟ್ಟಿನ ಭಾಗದಲ್ಲೇ ಕಾಯಿಗಳು ಕಪ್ಪಾಗಿ, ಕೊಯ್ಲಿಗೆ ಬರುವ ಸಮಯದಲ್ಲಿ ನೆಲಕಚ್ಚುತ್ತಿವೆ. ಶೇ.10ಫಸಲು ಇಲ್ಲವಾಗಿದ್ದು ಮಾವು ಈ ಬಾರಿಯೂ ಬೆಳೆಗಾರನಿಗೆ ಕಹಿ ಉಣಿಸುತ್ತಿದೆ.
> ಕಾಳುನಾಯ್ಕ, ಮಾವು ಬೆಳೆಗಾರ, ದೇವರದೊಡ್ಡಿ.
ತೇವಾಂಶ ಕೊರತೆ ಮತ್ತು ಜನವರಿಯಲ್ಲಿ ಉಂಟಾದ ಮೋಡ ಕವಿದ ವಾತಾವರಣ ಬದಲಾವಣೆಯಿಂದ ಹೂವು ಉದುರಿದ ಪರಿಣಾಮ ಕಾಯಿಗಳು ಗೊಂಚಲಿನಲ್ಲಿ ನಿಲ್ಲದೆ, ಕೀಟಬಾಧೆಗೆ ಒಳಗಾಗಿವೆ. ಹಾಗಾಗಿ ಫಸಲಿನಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಒಟ್ಟಾರೆ ಶೇ.15ರಿಂದ 20 ಮಾತ್ರ ಮಾವು ಫಸಲು ಸಿಗುವ ಲಕ್ಷಣ ಕಾಣುತ್ತಿದೆ.
ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ, ರಾಮನಗರ