ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  
ಬೆಂಗಳೂರು ದಕ್ಷಿಣ

ಜಿಲ್ಲೆಯಲ್ಲಿ ಎಸ್​ಐಆರ್​ ಶೇ.99.94 ಪೂರ್ಣ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಮಾಹಿತಿ
  • 8ರೊಳಗೆ ಎನ್ಯುಮರೇಷನ್​ ಅರ್ಜಿ ನೀಡುವಂತೆ ಕರೆ
ರಾಮನಗರ
ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ಕಾರ್ಯ ಶೇ.99.94 ಪೂರ್ಣಗೊಂಡಿದ್ದು, ಬಾಕಿ ಉಳಿದ 518 ಮತದಾರರು ತಮ್ಮ ಎನ್ಯುಮರೇಷನ್​ ಅರ್ಜಿ ನಮೂನೆಯನ್ನು ಆ.8ರೊಳಗೆ ವಾಪಸ್​ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಯಶವಂತ್​ ವಿ. ಗುರುಕರ್​ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ 9,38,586 ಮತದಾರರಿದ್ದು, ಅವರೆಲ್ಲರಿಗೂ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್​ಐಆರ್​) ಸಂಬಂಧಿಸಿದಂತೆ ಎನ್ಯುಮರೇಷನ್​ ಅರ್ಜಿ ನಮೂನೆಯನ್ನು ವಿತರಿಸಲಾಗಿದೆ. ಆ ಪೈಕಿ 8,26,620 ಮತದಾರರು ತಮ್ಮ ಎನ್ಯುಮರೇಷನ್​ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತ ಪಡಿಸಿಕೊಂಡಿರುತ್ತಾರೆ.
ಉಳಿದಂತೆ 1,11,448 ಅಂದರೆ ಶೇ.11.87 ಮತದಾರರು ಎಎಸ್​ಡಿಡಿಒ ಪಟ್ಟಿಯಲ್ಲಿ ಗುರುತಿಸಿ ಕೊಂಡಿರುತ್ತಾರೆ, ಅಂದರೆ ಆ ಮತದಾರರು ಮೃತಪಟ್ಟವರು, ಗೈರಾದವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ಎರಡು ಕಡೆ ಮತದಾರರ ಹೆಸರಿದೆ ಎಂದು ತಿಳಿಸಿದವರಾಗಿರುತ್ತಾರೆ. ಉಳಿದಂತೆ ಜಿಲ್ಲೆಯಲ್ಲಿ 518 ಮತದಾರರ ಎನ್ಯುಮರೇಷನ್​ ಅರ್ಜಿ ನಮೂನೆಗಳು ವಾಪಸ್​ ಬರಬೇಕಿದೆ, ಇನ್ನೆರಡು ದಿನದಲ್ಲಿ ಅವರೆಲ್ಲರೂ ನಮೂನೆಯನ್ನು ಹಿಂತಿರುಗಿಸುವಂತೆ ಜಿಲ್ಲಾಧಿಕಾರಿಯವರು ಕೋರಿದರು.

ಎಷ್ಟು ಮಂದಿ

ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್​ಐಆರ್​ ಪ್ರಕ್ರಿಯೆಯಲ್ಲಿ ಈವರೆಗೆ ಎಎಸ್​ಡಿಡಿಒ ಪಟ್ಟಿಯಲ್ಲಿ ಮೃತರಾದವರು 33 ಸಾವಿರ , ಶಾಶ್ವತವಾಗಿ ಸ್ಥಳಾಂತರಗೊಂಡವರು 47 ಸಾವಿರ, ಎರಡು ಕಡೆ ಹೆಸರಿದೆ ಎಂದವರು 15 ಸಾವಿರ ಹಾಗೂ ಗೈರಾದವರು 13 ಸಾವಿರ ಸೇರಿ ಒಟ್ಟು 1,11,448 ಜನರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಾಪಾಸ್​ ನೀಡಿ

ಜಿಲ್ಲೆಯಲ್ಲಿ 518 ವಾಪಸ್​ ಬರಬೇಕಾದ ಅರ್ಜಿಗಳನ್ನು ಕೂಡಲೇ ಸ್ಥಳಿಯ ಬಿಎಲ್​ಒಗಳಿಗೆ ನೀಡಬಹುದಾಗಿದೆ. ಆ ಬಿಎಲ್​ಒಗಳು ಅವರ ಮೊಬೈಲ್​ ನಂಬರನ್ನು ನೀಡಿದ್ದು, ಅವರನ್ನು ಸಂಪರ್ಕಿಸಿ ಅರ್ಜಿ ನಮೂನೆ ನೀಡಬಹುದು ಅಥವಾ ಬಿಎಲ್​ಎ ಅವರಿಗಾದರೂ ನೀಡಬಹುದಾಗಿದೆ, ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ಯಾರೊಬ್ಬರೂ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗೂಳಿಯಬಾರದು ಎಂಬುದೇ ಜಿಲ್ಲಾಡಳಿತದ ಆಶಯ ಎಂದು ಡಿಸಿ ಮನವಿ ಮಾಡಿದರು.

ಕರಡು ಪಟ್ಟಿ ಫ್ರೀಜ್​

ಎನ್ಯುಮರೇಷನ್​ ನಮೂನೆಯನ್ನು ವಾಪಸ್​ ನೀಡಲು ಆಗಸ್ಟ್​ 8 ಕೊನೆಯ ದಿನವಾಗಿದ್ದು, ಆಗಸ್ಟ್​ 8ರ ಮಧ್ಯರಾತ್ರಿ ಈ ಕರಡು ಪಟ್ಟಿಯನ್ನು ಫ್ರೀಜ್​ ಮಾಡಲಾಗುತ್ತದೆ. ನಂತರದಲ್ಲಿ ಎನ್ಯೂಮರೇಷನ್​ ನಮೂನೆಯನ್ನು ಸ್ವೀಕರಿಸಲು ಅವಕಾಶವಿರುವುದಿಲ್ಲ. ಆ.17ರಂದು ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗುವುದು ಹಾಗೂ ಅಂದಿನಿಂದ ಸೆಪ್ಟೆಂಬರ್​ 16ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ, ಈ ಹಂತದಲ್ಲಿ ಮತದಾರರ ಹೆಸರು ಸೇರ್ಪಡೆಗೊಳಿಸಲು ಅಥವಾ ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದವರಿಗೆ ನೋಟಿಸ್​ ನೀಡಿ ಮುಂದಿನ ಪ್ರಕ್ರಿಯೆ ಜರುಗಿಸಲಾಗುವುದು, ಅಕ್ಟೋಬರ್​ 19ಕ್ಕೆ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದವರು ಡಿಸಿ ತಿಳಿಸಿದರು.
ಜಿಲ್ಲೆಯಲ್ಲಿ ಎಸ್​ಐಆರ್​ ಪ್ರಕ್ರಿಯೆ ಶೇ.99.94 ಪೂರ್ಣಗೊಂಡಿದೆ. ಬಾಕಿ ಉಳಿದಿರುವ 518 ಎನ್ಯುಮರೇಷನ್​ ಅರ್ಜಿಗಳನ್ನು ಇದೇ 8ರೊಳಗಳಿಗೆ ವಾಪಾಸ್​ ನೀಡಬೇಕು. ನಂತರ ಕರಡು ಮತದಾರರ ಪಟ್ಟಿ ಫ್ರೀಜ್​ ಆಗಲಿದೆ.
> ಯಶವಂತ್​ ವಿ.ಗುರುಕರ್​, ಜಿಲ್ಲಾಧಿಕಾರಿ, ಬೆಂಗಳೂರು ದಣ ಜಿಲ್ಲೆ.