ಕುದೂರು: ಟ್ರಸ್ಟ್ ಒಂದಕ್ಕೆ ಸೇರಿಸಿ ಬೇರೆಬೇರೆ ಕ್ರೀಡೆಗಳಲ್ಲಿ ಅವಕಾಶ ಕೊಡಿಸುವುದಾಗಿ ಯುವಕನಿಂದ 7 ಖಾಲಿ ಚೆಕ್ ಹಾಗೂ ಅಗ್ರಿಮೆಂಟ್ ಪೇಪರ್ಗೆ ಸಹಿ ಹಾಕಿಸಿಕೊಂಡು ಬ್ಲಾ$್ಯಕ್ಮೇಲ್ ಮಾಡಿದ್ದಲ್ಲದೇ ಆತನನ್ನು ಸಲಿಂಗಕಾಮಕ್ಕೆ ಒತ್ತಾಯಿಸಿ, ಹಿಂಸಿಸಿರುವ ಆರೋಪ ಕೇಳಿಬಂದಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ದೂರು&ಪ್ರತಿದೂರು ದಾಖಲಾಗಿದೆ.
ಪಟ್ಟಣದ ನವಗ್ರಾಮದ 24 ವರ್ಷದ ಯುವಕ ಸಂತ್ರಸ್ತ. ತೊರೆರಾಮನಹಳ್ಳಿ ನಿವಾಸಿ, ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ಮಂಜೇಶ್ ಕಿರುಕುಳ ನೀಡಿರುವ ಆರೋಪಿ.
ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ ಆಗಿರುವ ಸಂತ್ರಸ್ತ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ತಯಾರಿಯಲ್ಲಿದ್ದರು. ಈ ಮಧ್ಯೆ ಯುವಕನ ತಂದೆ ಮೇಲೆ ಸವರ್ಣೀಯರು ಹಲ್ಲೆ ಮಾಡಿದ ಪ್ರಕರಣದಲ್ಲಿ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಹೇಳಿದ ಮಂಜೇಶ್, ಕುಟುಂಬಕ್ಕೆ ಧನಸಹಾಯ ನೀಡಿ, ಬಳಿಕ ಯುವಕನನ್ನು ಟ್ರಸ್ಟ್ ಒಂದಕ್ಕೆ ಸೇರಿಸಿಕೊಂಡು ಅವಕಾಶ ಕೊಡಿಸುವುದಾಗಿ ನಂಬಿಸಿ 7 ಖಾಲಿ ಚೆಕ್ ಹಾಗೂ ಅಗ್ರಿಮೆಂಟ್ ಪೇಪರ್ಗಳಿಗೆ ಸಹಿ ಹಾಕಿಸಿಕೊಂಡಿದ್ದ. ದಿನಗಳು ಕಳೆದರೂ ಟ್ರಸ್ಟ್ಗೆ ಸೇರಿಸಿಕೊಳ್ಳದ ಬಗ್ಗೆ ಯುವಕ ಪ್ರಶ್ನಿಸಿದಾಗ, ಶ್ರೀದಲ್ಲೇ ತರಬೇತಿಗೆ ಕಳುಹಿಸುವುದಾಗಿ ನಂಬಿಸಿ, ಅಲ್ಲಿಯವರೆಗೆ ಕಾರು ಚಾಲಕನಾಗಿ ಕೆಲಸ ಮಾಡುವಂತೆ ತಿಳಿಸಿದ್ದ.
ಕಾರು ಚಾಲಕನಾಗಿ 6 ತಿಂಗಳು ಕಳೆದರೂ ಯಾವುದೇ ಟ್ರಸ್ಟಿಗೂ ಸೇರಿಸದ ಮಂಜೇಶ್, ವಾಹನ ಚಲಾಯಿಸುವಾಗ ಚುಂಬಿಸುವುದು, ಗುಪ್ತಾಂಗ ಸ್ಪರ್ಶಿಸುವುದು ಇತ್ಯಾದಿ ಚೇಷ್ಟೆಗಳ ಮೂಲಕ ಸಲಿಂಗಕಾಮಕ್ಕೆ ಪ್ರಚೋದಿಸಿದ್ದ. ಇದನ್ನು ವಿರೋಧಿಸಿದಾಗ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸುತ್ತಿದ್ದುದಲ್ಲದೇ ಪೊಲೀಸರಿಗೆ ದೂರು ನೀಡಿದರೆ ಖಾಲಿ ಚೆಕ್ ಮತ್ತು ಅಗ್ರಿಮೆಂಟ್ಅನ್ನು ಕೋರ್ಟ್ಗೆ ಸಲ್ಲಿಸಿ ಕೇಸ್ ದಾಖಲಿಸುವುದಾಗಿ ಬೆದರಿಸುತ್ತಿದ್ದ. ಮಂಜೇಶ್ ಸಲಿಂಗಕಾಮಿಯಂತೆ ಫೋನ್ ಸಂಭಾಷಣೆಯಲ್ಲಿ ಮಾತನಾಡಿರುವುದಕ್ಕೆ ದಾಖಲೆಗಳಿವೆ ಎಂದು ಯುವಕ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದು, ಈ ಸಂಬಂಧ ಕುದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಸಂತ್ರಸ್ತ ಪ್ರಕರಣ ದಾಖಲಿಸುವುದಕ್ಕೂ ಮುನ್ನವೇ ಮಂಜೇಶ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಸಂತ್ರಸ್ತನ ಕುಟುಂಬಕ್ಕೆ ಧನಸಹಾಯವಾಗಿ ನೀಡಿದ್ದ 2.5 ಲಕ್ಷ ರೂ.ಅನ್ನು ಈವರೆಗೂ ಮರಳಿಸಿಲ್ಲ. ಹಣ ಕೇಳಿದರೆ ಯುವಕನ ಕುಟುಂಬದವರು ಅವಾಚ್ಯವಾಗಿ ನಿಂದಿಸುತ್ತಾರೆ ಎಂದು ಮಂಜೇಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ