ರಾಮನಗರದ ಕಂದಾಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಬಂಜಾರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ, ಸಹಾಯಕ ನಿರ್ದೇಶಕ ಕೆ. ಸತೀಶ್, ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯ ಗುರುಮೂರ್ತಿ ಮುಂತಾದವರು ಸೇವಾಲಾಲ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
- ಜಿಲ್ಲಾಢಳಿತದಿಂದ ಸಂತ ಸೇವಾಲಾಲ್ ಜಯಂತಿ
- ಸೇವಾಲಾಲ್ ಬಣ್ಣನೆ ಮಾಡಿದ ಮುಖಂಡ ಗೋವಿಂದಸ್ವಾಮಿ
- ಸೇವಾಲಾಲ್ ಆದರ್ಶ ಪಾಲಿಸಲು ಕರೆ
ರಾಮನಗರ: ಸಾಮಾಜಿಕ ಅನಿಷ್ಠಗಳ ವಿರುದ್ಧ ತಮ್ಮ ಬದುಕಿನುದ್ದಕ್ಕೂ ಜಾಗೃತಿ ಮೂಡಿಸಲು ಶ್ರಮಿಸಿದವರು ಸಂತ ಶ್ರೀ ಸೇವಾಲಾಲರು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಂಜಾರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಡಾ. ಎ.ಆರ್. ಗೋವಿಂದಸ್ವಾಮಿ ಬಣ್ಣಿಸಿದರು.
ನಗರದ ಕಂದಾಯಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆವತಿಯಿಂದ ಆಯೋಜಿಸಲಾಗಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂತ ಸೇವಾಲಾಲ್ ಅವರು ಬಂಜಾರ ಸಮುದಾಯದ ಸಾಂಸ್ಕೃತಿಕ ನಾಯಕರು, ಅವರು ಬಂಜಾರ ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ಅಪಾರವಾಗಿ ಶ್ರಮಿಸಿದರು. ಮಹಾಮಹಿಮರಾದ ಅವರು ಕರ್ನಾಟಕದ ದಾವಣಗೆರೆಯಲ್ಲಿ ಜನಿಸಿದರೆಂಬ ಪ್ರತೀತಿ ಇದೆ. ಎಲ್ಲರೂ ಸಮಾನರು ಮತ್ತು ಎಲ್ಲರಿಗೂ ಸ್ವಾತಂತ್ರÈದ ಆಶಯವನ್ನು ಅವರು ಪ್ರತಿಪಾದಿಸಿದ್ದರು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್ ಮಾತನಾಡಿ, ಬಂಜಾರ ಸಮುದಾಯದವರು ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯ ಗುರುಮೂರ್ತಿ ಮಾತನಾಡಿ, ಸಮುದಾಯದವರು ಒಗ್ಗಟ್ಟಾಗಿ ಇಲಾಖೆಗಳ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರದ ವಿದ್ಯಾರ್ಥಿ ನಿಲಯಗಳ ಪ್ರಯೋಜನ ಪಡೆದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಮುದಾಯದ ಪ್ರಮುಖರಿಗೆ ಸನ್ಮಾನ ಮಾಡಲಾಯಿತು. ಸಂಘದ ಜಿಲ್ಲಾಧ್ಯಕ್ಷ ಧನಂಜಯ ನಾಯ್ಕ, ಸಮುದಾಯದ ಮುಖಂಡರುಗಳಾದ ಎಚ್.ಬಿ. ಸಿದ್ಧಾ ನಾಯ್ಕ್, ಭಾನುಪ್ರಿಯ, ಜಿ. ಕೃಷ್ಣಾನಾಯ್ಕ, ಸಿಂಧ್ಯಾ ನಾಯ್ಕ, ಗೋವಿಂದ ಸ್ವಾಮಿ, ವರಲಕ್ಷ್ಮೀ, ರಾಮ ದಾಸನಾಯ್ಕ, ಧನಂಜಯನಾಯ್ಕ, ಮೂರ್ತಿನಾಯ್ಕ, ಗಂಗಾನಾಯ್ಕ ಸೇರಿದಂತೆ ಸಮುದಾಯದ ಮುಖಂಡರುಗಳು ಹಾಗೂ ಇತರರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದ ವಾಟರ್ ಟ್ಯಾಂಕ್ ಸರ್ಕಲ್‌ನಿಂದ ಕಂದಾಯ ಭವನದವರೆಗೆ ಆಯೋಜಿಸಲಾಗಿದ್ದ ಸೇವಾಲಾಲ್ ಅವರ ಭಾವಚಿತ್ರದ ಮೆರವಣಿಗೆಗೆ ರಾಮನಗರ ನಗರಸಭೆ ಅಧ್ಯಕ್ಷರಾದ ಕೆ. ಶೇಷಾದ್ರಿ ಚಾಲನೆ ನೀಡಿದರು.