ಪ್ರಮುಖ ಮುಖ್ಯಾಂಶಗಳು
ಕನಕಪುರ
ಮಾತೃ ದೇವೋಭವ, ಪಿತೃ ದೇವೋಭವ ಹಾಗೂ ಆಚಾರ್ಯ ದೇವೋಭವ ಎಂಬ ಮಂತ್ರವನ್ನು ಮಕ್ಕಳು ಸದಾ ನೆನಪಿಟ್ಟುಕೊಳ್ಳಬೇಕು. ಆಗ ಮಾತ್ರ ನಮ್ಮ ಸಾಧನೆ ಹಾಗೂ ಸ್ಥಾನಮಾನಕ್ಕೆ ಹೆಚ್ಚಿನ ಗೌರವ ಬರುತ್ತದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಪರಿಸರ ಅಧಿಕಾರಿ ಸಿ.ಆರ್. ಮಂಜುನಾಥ್ ಹೇಳಿದರು.
ತಾಲೂಕಿನ ಕೋಡಿಹಳ್ಳಿ ಸರ್ಕಾರಿ ಆದರ್ಶ ಶಾಲೆಯಲ್ಲಿ ಗಿರಿಕಾನನ ಬುಡಕಟ್ಟು ಅಭಿವೃದ್ಧಿ ಟ್ರಸ್ಟ್ ಹಾಗೂ ರಾಜ್ಯ ರೈತ ಸಂಘವು ಬೆಂಗಳೂರಿನ ಅಂಥಮ್ ಬಯೋಸೈನ್ಸ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ಸಬಲೀಕರಣದಲ್ಲಿ ಗ್ರಾಮೀಣ ಅಭಿವೃದ್ಧಿ ಅಡಗಿದೆ. ಅಂತಹ ಶಾಲೆಗಳಿಗೆ ಕಲಿಕಾ ಸೌಲಭ್ಯ ಹಾಗೂ ಉಪಕರಣಗಳನ್ನು ಒದಗಿಸುವುದು ಪುಣ್ಯದ ಕೆಲಸವಾಗಿದೆ. ಮಕ್ಕಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಓದಿನತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಕೈಗಾರಿಕೋದ್ಯಮಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನವನ್ನು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮೀಸಲಿಟ್ಟು, ಶಾಲೆಗಳ ಅಭಿವೃದ್ಧಿಗೆ ಹೊಸ ಮುನ್ನುಡಿ ಬರೆದಿದ್ದಾರೆ. ಆ ಕಾರಣಕ್ಕೆ ಇಂದು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಫಲಿತಾಂಶದಲ್ಲೂ ಗಮನ ಸೆಳೆದಿವೆ. ಮಕ್ಕಳು ಉತ್ತಮ ಸ್ಥಾನ ಅಲಂಕರಿಸಿ ತಂದೆ-ತಾಯಿ, ಗುರುಗಳು ಹಾಗೂ ಶಾಲಾ- ಕಾಲೇಜಿಗೆ ಕೀರ್ತಿ ತರಬೇಕು. ತಮ್ಮ ಜನ್ಮ ದಿನಕ್ಕೆ ಸಸಿ ನೆಟ್ಟು ಪೋಷಿಸಬೇಕು ಎಂದು ಕಿವಿಮಾತು ಹೇಳಿದರು.
ಅಂಥಮ್ ಬಯೋಸೈನ್ಸ್ ಸಹ ಸಂಸ್ಥಾಪಕ ರವೀಂದ್ರ ಕೆ.ಪಿ ಮಾತನಾಡಿ, ಕೃಷಿ ಕುಟುಂಬದಿಂದಲೇ ಬಂದು ವಿದೇಶದಲ್ಲಿ ಹೆಚ್ಚಿನ ಅಧ್ಯಯನ ಮಾಡಿ, ಇಲ್ಲಿಯೇ 1989ರಲ್ಲಿ ಔಷಧ ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿ 15 ವರ್ಷ ಕೆಲಸ ಮಾಡಿದ ಬಳಿಕ 2006ರಲ್ಲಿ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಕಂಪನಿ ಸ್ಥಾಪಿಸಿದೆ. ಔಷಧ ಸಂಶೋಧನೆ ಹಾಗೂ ಉತ್ಪಾದನೆ ಕಂಪನಿಯಲ್ಲಿ ಮೂರು ಸಾವಿರ ವಿಜ್ಞಾನಿಗಳಿದ್ದಾರೆ. ಇದೀಗ ಹಾರೋಹಳ್ಳಿಯಲ್ಲಿ ನಮ್ಮ ಘಟಕ ಇದೆ. ಕಂಪನಿಯಿಂದ ಇದುವರೆಗೆ 60 ಸರ್ಕಾರಿ ಶಾಲೆಗಳಿಗೆ ಕಟ್ಟಡಗಳನ್ನು ಕಟ್ಟಿ ಕೊಟ್ಟಿದ್ದೇವೆ. ಸದ್ಯ ಹಾರೋಹಳ್ಳಿ ಚೀಲೂರಿನಲ್ಲಿ 10.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಶಾಲೆ ನಿರ್ಮಾಣ ಮಾಡುತ್ತಿದ್ದೇವೆ. ಶಾಲೆಗೆ ಬಿಸಿಲಿನಿಂದ ರಕ್ಷಣೆ ಪಡೆಯಲು ಛಾವಣಿ ನಿರ್ಮಿಸಿ ಕೊಡಬೇಕೆಂದು ಮನವಿ ಮಾಡಿದ್ದು, ಇದರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವೆ ಎಂದು ಭರವಸೆ ನೀಡಿದರು.
ಷಡಕ್ಷರಿ ಸ್ವಾಗತಿಸಿದರು. ರೈತ ಸಂಘದ ನಲ್ಲಹಳ್ಳಿ ಶ್ರೀನಿವಾಸ್, ಟ್ರಸ್ಟ್‌ನ ಸಂಸ್ಥಾಪಕ ಕೃಷ್ಣಮೂರ್ತಿ, ಕಾರ್ಯದರ್ಶಿ ಗೌರಮ್ಮ, ಶಾಲೆಯ ಮುಖ್ಯ ಶಿಕ್ಷಕ ಸೈಯದ್ ಜಾವಿದ್, ಪತ್ರಕರ್ತ ಓದೇಶ ಸಕಲೇಶಪುರ, ರೈತ ಮುಖಂಡರಾದ ಕೆಬ್ಬಳ್ಳಿ ಶಿವರಾಜು, ಮುಳ್ಳಳ್ಳಿ ಮಂಜುನಾಥ್, ಮರಿಸ್ವಾಮಿ, ನ್ಯೂ ಚಿಗುರು ಚಾರಿಟೇಬಲ್ ಟ್ರಸ್ಟ್, ಸುಗ್ಗಿ ಸಂಭ್ರಮ ಟ್ರಸ್ಟ್ ಪದಾಧಿಕಾರಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಇದ್ದರು.