ಲಾರಿಯಲ್ಲಿ ಜೆಲ್ಲಿ ತುಂಬಿಕೊಂಡು ಹೋಗುತ್ತಿರುವುದು.
ಬಿಡದಿ: ಟಿಪ್ಪರ್, ಲಾರಿಗಳ ಅಬ್ಬರ ಹಾಗೂ ಧೂಳಿನಿಂದ ಗೋಪಹಳ್ಳಿ ಜನ ನಲುಗುತ್ತಿದ್ದಾರೆ.
ಹೌದು.. ಸಮೀಪದ ಗೋಪಹಳ್ಳಿಯಲ್ಲಿ ನಿತ್ಯ ಜೆಲ್ಲಿ, ಎಂ.ಸ್ಯಾಂಡ್ ತುಂಬಿಕೊಂಡು ಹೆಚ್ಚು ಲಾರಿಗಳು ಓಡಾಡುವುದರಿಂದ ರಸ್ತೆ ಅಕ್ಕಪಕ್ಕದ ಮನೆಗಳಿಗೆ ಧೂಳು ಮೆತ್ತಿಕೊಂಡಿದ್ದು, ಗ್ರಾಮಸ್ಥರು ಕಾಯಿಲೆ ಬೀಳುತ್ತಿದ್ದಾರೆ.
ಅಲ್ಲದೆ ಎರಾಬಿರ್ರಿ ನೂರಾರು ಲಾರಿಗಳು ಎಡೆಬಿಡದೆ ಸಂಚರಿಸುವುದರಿಂದ ಮಕ್ಕಳು, ಮಹಿಳೆಯರು, ವೃದ್ಧರು ರಸ್ತೆಗಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ.
ಕ್ರಷರ್ಗಳಿಂದ ಜೆಲ್ಲಿ, ಕಲ್ಲಿನ ಪುಡಿ ಸೇರಿದಂತೆ ಇನ್ನಿತರ ವಸ್ತುಗಳನ್ನು ತುಂಬಿಕೊಂಡು ರಸ್ತೆಗೆ ಬರುವ ಮುನ್ನ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು. ಜೆಲ್ಲಿ ಹಾಗೂ ಎಂ.ಸ್ಯಾಂಡ್ ಮೇಲೆ ನೀರು ಹಾಕಿದ ನಂತರ ಅದಕ್ಕೆ ಹೊದಿಕೆ ಹಾಕಬೇಕು. ಆದರೆ ಇಲ್ಲಿ ಅಂತಹ ಯಾವುದೇ ಸುರತಾ ಕ್ರಮ ಅನುಸರಿಸದೆ ಗ್ರಾಮಗಳ ಮಧ್ಯೆ ಲಾರಿ, ಟಿಪ್ಪರ್ಗಳು ಸಂಚರಿಸುತ್ತಿವೆ.
ರಸ್ತೆ ಮಧ್ಯೆ ಲಾರಿಗಳು ಹೋದರೆ ಸಾಕು ಅಕ್ಕಪಕ್ಕದ ಮನೆಗಳಲ್ಲಿ ನೀರು, ಊಟದ ಮೇಲೆಲ್ಲ ಧೂಳು ಬಂದು ಬೀಳುತ್ತದೆ. ಪರಿಣಾಮ ಅಸ್ತಮಾದಂತಹ ರೋಗ ಬಾಧೆ ಹೆಚ್ಚುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಗಣಿ ಮತ್ತು ಭೂ ವಿಾನ ಇಲಾಖೆ, ಸಾರಿಗೆ ಇಲಾಖೆ, ತಹಸೀಲ್ದಾರ್ ಹಾಗೂ ಬಿಡದಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಆದರೆ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ಭಯಕ್ಕೆ ಅಡ್ಡದಾರೀಲಿ ಸಂಚಾರ
ಗೋಪಹಳ್ಳಿಯಿಂದ ಸ್ವಲ್ಪ ದೂರದಲ್ಲಿರುವ ಸೀಬಕಟ್ಟೆ ಹಾಗೂ ಕರಡಿಗೌಡನದೊಡ್ಡಿ ಗ್ರಾಮಗಳಲ್ಲಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಹಲವು ಕ್ರಷರ್ಗಳು ತಲೆ ಎತ್ತಿವೆ. ಇಲ್ಲಿಂದ ಬರುವ ಲಾರಿಗಳು ವಡ್ಡರದೊಡ್ಡಿ ಮಾರ್ಗವಾಗಿ ಗೋಪಹಳ್ಳಿಗೆ ಬಂದು ಅಲ್ಲಿಂದ ಕೊಳ್ಳಿಗಾನಹಳ್ಳಿ, ಅಣ್ಣೆದೊಡ್ಡಿ, ಗಾರೇಪಾಳ್ಯ, ಯರೆಹಳ್ಳಿ ಮಾರ್ಗವಾಗಿ ಹಾರೋಹಳ್ಳಿಗೆ ಸಂಪರ್ಕ ಪಡೆಯುತ್ತಿವೆ. ಬಿಡದಿಗೆ ಮಾರ್ಗವಾಗಿ ಬಂದರೆ ಪೊಲೀಸರು ಹಿಡಿಯುವ ಭಯದಿಂದ ನಿತ್ಯ ಇದೇ ಮಾರ್ಗದಲ್ಲಿ ನೂರಾರು ಟಿಪ್ಪರ್, ಲಾರಿಗಳು ಸಂಚರಿಸುತ್ತವೆ.
ಜಾನುವಾರುಗಳಿಗೂ ಟಿಪ್ಪರ್, ಲಾರಿಗಳ ಓಡಾಟದಿಂದ ಸಮಸ್ಯೆಯಾಗುತ್ತಿದೆ. ಧೂಳು ಮೇವಿನ ಮೇಲೂ ಬೀಳುತ್ತಿರುವುದರಿಂದ ರಾಸುಗಳು ಮೇವು ತಿನ್ನುತ್ತಿಲ್ಲ. ಜತೆಗೆ ರೇಷ್ಮೆ ಬೆಳೆಗಳ ಮೇಲೂ ಸಹ ಕಲ್ಲಿನ ಪುಡಿ ಬೀಳುತ್ತಿರುವ ಕಾರಣ ರೇಷ್ಮೆ ಕಡ್ಡಿ ಸಹ ಹಾಳಾಗುತ್ತಿದೆ.
ದಿನದ 24 ಗಂಟೆಯೂ ಲಾರಿಗಳು ಸಂಚರಿಸುತ್ತವೆ. ಅದರಲ್ಲೂ ರಾತ್ರಿ ವೇಳೆ ಹೆಚ್ಚಾಗಿ ಲಾರಿಗಳು ಓಡಾಟ ಮಾಡುತ್ತವೆ. ಪರಿಣಾಮ ನೆಮ್ಮದಿಯಿಂದ ನಿದ್ದೆ ಮಾಡಲಾಗುತ್ತಿಲ್ಲ. ಜೆಲ್ಲಿ, ಎಂ.ಸ್ಯಾಂಡ್ ತುಂಬಿದ ಲಾರಿಗಳು ಟಾರ್ಪಲ್ ಹಾಕಿಕೊಳ್ಳದೆ ಹಾಗೆಯೇ ಬರುವುದರಿಂದ ಧೂಳು ಹೆಚ್ಚಾಗಿ ಬರುತ್ತದೆ. ಇದನ್ನು ಪ್ರಶ್ನಿಸಿದರೆ ಟಿಪ್ಪರ್ ಚಾಲಕರು ನಾವು ಸರ್ಕಾರಕ್ಕೆ ಹಣ ಕಟ್ಟುತ್ತೇವೆ. ನೀವು ಏನೂ ಮಾಡಲು ಆಗಲ್ಲ ಎಂದು ಧಮ್ಕಿ ಹಾಕುತ್ತಾರೆ. ರಾತ್ರಿ ವೇಳೆ ಚಾಲಕರು ಮದ್ಯಪಾನ ಮಾಡಿ ಲಾರಿಗಳನ್ನು ಚಾಲನೆ ಮಾಡುತ್ತಾರೆ. ಇದರಿಂದ ನಮಗೆ ಜೀವಭಯವಿದೆ. ಸಂಬಂಧಿತ ಅಧಿಕಾರಿಗಳು ಕ್ರಮ ತಗೆದುಕೊಳ್ಳಬೇಕು
ಕ್ರಷರ್ಗಳಿಂದ ಕಲ್ಲು, ಕಲ್ಲಿನ ಪುಟಿ ತುಂಬಿಕೊಂಡು ಬರುವ 12&16 ಚಕ್ರದ ಟಿಪ್ಪರ್ ಲಾರಿಗಳು ಯಾವುದೇ ಕಾನೂನು ಸುರತಾ ಕ್ರಮಗಳನ್ನು ಅನುಸರಿಸುತ್ತಿಲ್ಲ. ತಮಗಿಷ್ಟ ಬಂದ ಹಾಗೆ ಲಾರಿಗಳನ್ನು ಚಲಾಯಿಸುತ್ತಾರೆ. ಪ್ರಶ್ನೆ ಮಾಡಿದರೆ ನಮ್ಮ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಾರೆ. ಒಟ್ಟಾರೆ ಲಾರಿಗಳ ಓಡಾಟದಿಂದ ಜನ ಜಾನುವಾರುಗಳಿಗೆ ಸಮಸ್ಯೆ ಉಂಟಾಗುತ್ತಿದೆ.