ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಆನೆಗಳ ಹಿಂಡು ರೈತರ ಭತ್ತದ ಗದ್ದೆ ನಾಶಪಡಿಸಿರುವುದು.
ಕೈಲಾಂಚ: ಹೋಬಳಿಯ ಬನ್ನಿಕುಪ್ಪೆ ಗ್ರಾಮದಲ್ಲಿ ಏಳೆಂಟು ಆನೆಗಳ ಹಿಂಡು ಗುರುವಾರ ರಾತ್ರಿ ದಾಳಿ ನಡೆಸಿ ಭತ್ತದ ಸಲು ನಾಶಮಾಡಿವೆ.
ತೆಂಗಿನಕಲ್ಲು ಅರಣ್ಯದ ಮುಖಾಂತರ ಹಂದಿಗೊಂದಿ ಅರಣ್ಯಕ್ಕೆ ಹೋಗಿದ್ದ ಆನೆಗಳ ಹಿಂಡು ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ವಾಪಸ್ ತೆಂಗಿನಕಲ್ಲು ಅರಣ್ಯಕ್ಕೆ ಬರುವ ಮಾರ್ಗದಲ್ಲಿ ಕೆ.ಪಿ.ದೊಡ್ಡಿ ಬಳಿ ಅರ್ಕಾವತಿ ನದಿ ದಾಟಿ ಮೊಟ್ಟೆದೊಡ್ಡಿ ಲಕ್ಕಪ್ಪನಹಳ್ಳಿ ಮೂಲಕ ಬಂದು ಬನ್ನಿಕುಪ್ಪೆ ಗ್ರಾಮದ ವೆಂಕಟೇಶ್, ಲಲಿತಮ್ಮ, ಮಂಜುನಾಥ ಅವರ ಭತ್ತದ ಗದ್ದೆಗೆ ನುಗ್ಗಿವೆ. ಅದರಲ್ಲೂ ಕೊಯ್ಲು ಮಾಡಿ ಹಾಕಿದ್ದ ಭತ್ತವನ್ನು ಆನೆಗಳು ತಿಂದಿದ್ದಲ್ಲದೇ ಗದ್ದೆಯಲ್ಲಿ ಓಡಾದಿದ್ದು, ಸಂಪೂರ್ಣ ಫಸಲು ನಾಶವಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ಆನೆಗಳು ತೆಂಗಿನಕಲ್ಲು ಅರಣ್ಯದಿಂದ ಚಿಕ್ಕಮಣ್ಣುಗುಡ್ಡೆ, ಹಂದಿಗೊಂದಿ ಅರಣ್ಯ ಸೇರುವಾಗ ಪದೇಪದೆ ಫಸಲು, ಮರಮಟ್ಟು ಆನೆಗಳ ದಾಳಿಗೆ ನಾಶವಾಗುತ್ತಿವೆ. ಇದಕ್ಕೆ ಅರಣ್ಯ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.