ಮಾಗಡಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಉದ್ದೇಶಿತ ಸ್ಥಳದಲ್ಲಿ ಮರಗಳ ಹರಾಜು ಪ್ರಕ್ರಿಯೆ ನಡೆಯಿತು.
ಮಾಗಡಿ: ಪಟ್ಟಣದಲ್ಲಿ ತೀವ್ರ ಕುತೂಹಲಕ್ಕೆ ಮತ್ತು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದ್ದ ಸರ್ಕಾರಿ ಆಸ್ಪತ್ರೆ ನಿರ್ಮಾಣದ ಮುಂದಿದ್ದ ದೊಡ್ಡ ಅಡೆತಡೆ ನಿವಾರಣೆಯಾಗಿದೆ.
ಆಸ್ಪತ್ರೆ ಆವರಣದಲ್ಲಿದ್ದ ಮರಗಳ ತೆರವಿಗೆ ಸಂಬಂಧಿಸಿದಂತೆ ಇದ್ದ ಕಾನೂನು ಸಂರ್ಷಕ್ಕೆ ತೆರೆ ಬಿದ್ದಿದ್ದು, ಅರಣ್ಯ ಇಲಾಖೆಯಿಂದ ಯಶಸ್ವಿಯಾಗಿ ಮರಗಳ ಹರಾಜು ಪ್ರಕ್ರಿಯೆ ಮುಕ್ತಾಯಗೊಂಡಿದೆ. ಇದರಿಂದಾಗಿ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾರ್ಯ ಚುರುಕುಗೊಳ್ಳಲು ಹಾದಿ ಸುಗಮವಾಗಿದೆ. ವಿವಾದದ ಹಿನ್ನೆಲೆ: ಮಾಗಡಿ ತಾಲೂಕು ಕಚೇರಿ ಹಾಗೂ ಪುರಸಭೆ ಜಾಗದಲ್ಲಿ ಸುಮಾರು 46 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸರ್ಕಾರಿ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಎಚ್.ಸಿ.ಬಾಲಕೃಷ್ಣ ಚಾಲನೆ ನೀಡಿದ್ದರು. ಆದರೆ, ಈ ಆಸ್ಪತ್ರೆ ನಿರ್ಮಾಣವಾಗಬೇಕಿದ್ದ ಜಾಗದಲ್ಲಿ ವಿವಿಧ ಜಾತಿಯ ಒಟ್ಟು 89 ಮರಗಳಿದ್ದವು. ಆಸ್ಪತ್ರೆಯ ಕಟ್ಟಡ ಕಾಮಗಾರಿಗಾಗಿ ಮರಗಳ ತೆರವಿಗೆ ಅರಣ್ಯ ಇಲಾಖೆ ಮುಂದಾದಾಗ ಪರಿಸರ ಸಂರಕ್ಷಣೆ ದೃಷ್ಟಿಯಿಂದ ವಿರೋಧ ವ್ಯಕ್ತವಾಗಿತ್ತು.
ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾದ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಅವರು, ಮರಗಳ ಕಟಾವು, ಕೆಂಪೇಗೌಡ ಪ್ರತಿಮೆ ಸ್ಥಳಾಂತರ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಪರಿಶೀಲಿಸಿದ ಹೈಕೋರ್ಟ್, ಸ್ಥಳಿಯ ನಾಗರಿಕರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು. ಹೈಕೋರ್ಟ್ ನಿರ್ದೇಶನದಂತೆ ನಡೆಸಲಾದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಣೆಯಲ್ಲಿ, ಪಟ್ಟಣದ ಬಹುತೇಕ ನಾಗರಿಕರು ಪರಿಸರ ಕಾಳಜಿಯ ಜತೆಗೆ ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಸುಸಜ್ಜಿತ ಆಸ್ಪತ್ರೆಯ ಅಗತ್ಯವನ್ನರಿತು, ಮರಗಳ ತೆರವು ಬೆಂಬಲಿಸಿದ್ದರು.
ಸಾರ್ವಜನಿಕರ ಬಹುಮತ ಹಾಗೂ ಕೋರ್ಟ್ ನಿರ್ದೇಶನದ ಅನ್ವಯ, ಅರಣ್ಯ ಇಲಾಖೆಯು ಬುಧವಾರ ಆಸ್ಪತ್ರೆ ಆವರಣದ ಮರಗಳ ಬಹಿರಂಗ ಹರಾಜು ನಡೆಸಲಾಯಿತು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಮ್ಮ, ವಲಯ ಅರಣ್ಯಾಧಿಕಾರಿ ಜಿ.ಕೆ.ಚೈತ್ರಾ ನೇತೃತ್ವದಲ್ಲಿ ಪಾರದರ್ಶಕ ಹಾಗೂ ಶಾಂತಿಯುತವಾಗಿ ಪ್ರಕ್ರಿಯೆ ಜರುಗಿತು. ಒಟ್ಟು 8 ಮಂದಿ ಬಿಡ್ದಾರರು ತೀವ್ರ ಪೈಪೋಟಿ ನಡೆಸಿದರು. ಆ ಪೈಕಿ ಕುದೂರಿನ ನಿವಾಸಿ ಹೊನ್ನರಾಜು ಅಂತಿಮವಾಗಿ 66 ಸಾವಿರ ರೂ.ಗಳಿಗೆ 89 ಮರಗಳನ್ನು ಹರಾಜಿನಲ್ಲಿ ತಮ್ಮದಾಗಿಸಿಕೊಂಡರು.
ಹರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಇಂದಿನಿಂದ 15 ದಿನಗಳ ಒಳಗಾಗಿ ನಿಯಮಾನುಸಾರ ಎಲ್ಲ ಮರಗಳನ್ನು ಸ್ಥಳದಿಂದ ತೆರವುಗೊಳಿಸಬೇಕೆಂದು ಬಿಡ್ದಾರ ಹೊನ್ನರಾಜು ಅವರಿಗೆ ಸೂಚನೆ ನೀಡಿದರು.
ಮರಗಳ ಕಟಾವಿಗೆ ತಡೆಯಾಗಿದ್ದರಿಂದ ಆಸ್ಪತ್ರೆ ನಿರ್ಮಾಣ ಯೋಜನೆ ಎಲ್ಲಿ ಕೈಬಿಟ್ಟು ಹೋಗುತ್ತದೆಯೋ ಅಥವಾ ಮತ್ತಷ್ಟು ವಿಳಂಬವಾಗುತ್ತದೆಯೋ ಎಂದುಕೊಂಡಿದ್ದ ಸಾರ್ವಜನಿಕರು, ಯಾವುದೇ ಗೊಂದಲಗಳಿಲ್ಲದೆ, ಶಾಂತಿಯುತವಾಗಿ ಹರಾಜು ಪ್ರಕ್ರಿಯೆ ಮುಗಿದಿದ್ದಕ್ಕೆ ನಿಟ್ಟುಸಿರು ಬಿಟ್ಟರು.
"
ಆಸ್ಪತ್ರೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಮುಗಿದು ಕಾರ್ಯಾದೇಶ ನೀಡಲಾಗಿದೆ. ಶ್ರೀವೇ ಕಾಮಗಾರಿ ಆರಂಭಿಸಲಾಗುವುದು. ಬಡವರ ಆರೋಗ್ಯಕ್ಕಾಗಿ ಕೈಗೆತ್ತಿಕೊಂಡಿರುವ ಆಸ್ಪತ್ರೆ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ.
— > ಎಚ್.ಸಿ.ಬಾಲಕೃಷ್ಣ ಶಾಸಕ
"
ಯಾವುದೇ ಅಡೆ ತಡೆ ಇಲ್ಲದಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಆರಂಭವಾಗುತ್ತಿತ್ತು. ಅಭಿವೃದ್ಧಿಗೆ ಸಹಕಾರ ನೀಡಬೇಕು, ಸುಖಾ ಸುಮ್ಮನೆ ತೊಂದರೆ ನೀಡಬಾರದು. ಆಸ್ಪತ್ರೆ ನಿರ್ಮಾಣದಿಂದ ೇತ್ರದ ಜನರಿಗೆ ಅನುಕೂಲವಾಗಲಿದೆ.
— > ಕೆ.ಕೃಷ್ಣಮೂರ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ