ಚನ್ನಪಟ್ಟಣ: ಮಹಾಶಿವರಾತ್ರಿ ಎಂದೊಡನೆ ನೆನಪಾಗುವುದೇ ಜಾಗರಣೆ ಹಾಗೂ ಶಿವನಾಮ ಸ್ಮರಣೆ. ಉಪವಾಸವಿದ್ದು, ಶಿವನನ್ನು ಜಪಿಸುತ್ತ ಜಾಗರಣೆ ಮಾಡುವುದು ಎಲ್ಲೆಡೆ ಸಾಮಾನ್ಯ. ಆದರೆ, ತಾಲೂಕಿನ ಮಂಗಾಡಹಳ್ಳಿಯಲ್ಲಿ ಶಿವರಾತ್ರಿಯಂದು ಬಾಡೂಟವೇ ಪ್ರಧಾನ. ಹತ್ತಾರು ಹಳ್ಳಿಯವರು ಚನ್ನಪ್ಪಾಜಿ ದೇವಸ್ಥಾನದ ಬಳಿ ಸೇರಿ ಕುರಿ&ಕೋಳಿ ತಂದು, ಅಲ್ಲಿಯೇ ಪ್ರಸಾದ ತಯಾರಿಸುತ್ತಾರೆ. ಕೋಳಿ ಸಾರು, ಕುರಿ&ಮೇಕೆ ಗೊಜ್ಜು, ಮುದ್ದೆ ನೈವೇದ್ಯವನ್ನು ದೇವರಿಗೆ ಎಡೆಯಿಟ್ಟು, ನಂತರ ದೇವಸ್ಥಾನದ ಮುಂಭಾಗ ಎಲ್ಲರೂ ಕುಳಿತು ಪ್ರಸಾದ ಸೇವಿಸುತ್ತಾರೆ. ಬಳಿಕ ರಾತ್ರಿಯಲ್ಲ ಹರನಾಮಸ್ಮರಣೆ ಮಾಡುತ್ತ ಶಿವರಾತ್ರಿ ಆಚರಿಸುತ್ತಾರೆ. ಗ್ರಾಮದಲ್ಲಿ ಮಹಾಶಿವರಾತ್ರಿಯನ್ನು ಹಲವಾರು ವರ್ಷಗಳಿಂದ ಈ ರೀತಿ ವಿಭಿನ್ನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಹೊರ ರಾಜ್ಯದಿಂದಲೂ ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿ, ಬಾಡೂಟ ಸವಿಯುತ್ತಾರೆ.