ಸುದ್ದಿಗೋಷ್ಠಿಯಲ್ಲಿ ರೀಲರ್ಸ್ಗಳಾದ ಮಾಜಿದ್ ಶರೀಫ್, ವಜೀರ್ ಅಹ್ಮದ್, ಮುಜಾಹಿದ್, ಶರೀಫ್, ಸಹಿದ್ ಅಕ್ಬರ್ ಇದ್ದರು.
ಕನಕಪುರ: ಕಾನೂನು ಪರಿಮಿತಿಯೊಳಗೆ ರೈತರ ರೇಷ್ಮೆ ಗೂಡು ಖರೀದಿಸಲು ಮುಕ್ತ ಮಾರುಕಟ್ಟೆಯ ಅವಕಾಶವಿದ್ದರೂ ಕನಕಪುರ ರೀಲರ್ಸ್ ಅಸೋಸಿಯೇಷನ್ಸ್ ಸಮರ್ಪಕವಾಗಿ ಖರೀದಿ ಮಾಡಿದವರ ಮೇಲೆಯೇ ದೌರ್ಜನ್ಯ ನಡೆಸುತ್ತಿದೆ ಎಂದು ರೀಲರ್ಸ್ಗಳು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೀಲರ್ಸ್ಗಳಾದ ಮಾಜಿದ್ ಶರೀಫ್, ವಜೀರ್ ಅಹ್ಮದ್, ಮುಜಾಹಿದ್, ಶರೀಫ್, ಸರ್ಕಾರಿ ಗೂಡು ಮಾರುಕಟ್ಟೆಯಲ್ಲಿ ನ್ಯಾಯಯುತವಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ 3 ಲಕ್ಷ ರೂಪಾಯಿಯ ರೇಷ್ಮೆ ಗೂಡು ಖರೀದಿಸಿ ಅದನ್ನು ರಾಮನಗರಕ್ಕೆ ಸಾಗಿಸುತ್ತಿದ್ದ ವೇಳೆ, ಇಲ್ಲಿನ ರೀಲರ್ಸ್ ಅಸೋಸಿಯೇಷನ್ಸ್ ಅಧ್ಯಕ್ಷ ಮಳಗಾಳು ಚಂದ್ರು ಹಾಗೂ ಮತ್ತಿತ್ತರರು ನಮ್ಮನ್ನು ಅಡ್ಡಗಟ್ಟಿ ಗೂಡನ್ನು ಕಿತ್ತುಕೊಂಡು ದೌರ್ಜನ್ಯ ಎಸಗಿದ್ದಲ್ಲದೆ, ಇನ್ನೊಂದು ಬಾರಿ ಮಾರುಕಟ್ಟೆಗೆ ಗೂಡು ಖರೀದಿಸಲು ಬಂದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಆಪಾದಿಸಿದರು.
ಶನಿವಾರ ಸರ್ಕಾರಿ ಗೂಡು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾಗ ನಾವು ಖರೀದಿಸಿದ್ದ ಗೂಡು ಕಿತ್ತುಕೊಂಡಿದ್ದಾರೆ. ನಾವು ಸರ್ಕಾರಿ ಗೂಡು ಮಾರುಕಟ್ಟೆಗೆ ಬಂದು ನೇರವಾಗಿ ರೈತರಿಂದಲೇ ಗೂಡು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇವೆ. ಇವರು ರೈತರ ಗೂಡನ್ನು ಉತ್ತಮ ಬೆಲೆಗೆ ಖರೀದಿಸಲಾಗದೆ, ಖರೀದಿ ಮಾಡುವವರ ಮೇಲೂ ಈ ರೀತಿ ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಇಲ್ಲಿನ ರೀಲರ್ಸ್ಗಳು ರೈತರ ಗೂಡನ್ನು ನಿಗದಿತ ಬೆಲೆಗೆ ಖರೀದಿ ಮಾಡದೆ ಹಾಗೂ ನಿಗದಿತ ಸಮಯಕ್ಕೆ ಅವರಿಗೆ ಹಣವನ್ನು ನೀಡದೆ ಮಾರುಕಟ್ಟೆಗೂ ನಷ್ಟ ಉಂಟು ಮಾಡುತ್ತಿದ್ದಾರೆ. ಅವರ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪೊಲೀಸರು ಕಾನೂನು ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.