ರಾಮನಗರದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಘದ ಶಿವಸ್ವಾಮಿ, ಭೈರಪ್ಪ, ಜಯಪ್ರಕಾಶ್ ಇದ್ದರು.
- ರಾಮನಗರದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯ್ಷರ ಸುದ್ದಿಗೋಷ್ಠಿ
- ಸಿಬ್ಬಂದಿ ಮೇಲೆ ರೈತರ ಹಲ್ಲೆ ಖಂಡನೀಯ
- ಪೊಲೀಸರು ಮುಂಜಾಗ್ರತೆ ವಹಿಸಿದ್ದರೆ ಘಟನೆ ತಪ್ಪಿಸಬಹುದಿತ್ತು.
ರಾಮನಗರ: ಬಿಡದಿಯಲ್ಲಿ ಸರ್ಕಾರಿ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಪ್ರಕರಣ ನಿಜಕ್ಕೂ ಆತಂಕವನ್ನು ಸೃಷ್ಠಿಸಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಸರ್ವೇ ಮಾಡಲು ಹೋಗುವ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಒತ್ತಾಯಿಸಿದರು.
ನಗರದ ಜಿಬಿಡಿಎ ಕಚೇರಿ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಿಡದಿಯ ಮಂಡಲಹಳ್ಳಿಯಲ್ಲಿ ನಡೆದ ಘಟನೆ ಖಂಡನೀಯ. ನಾವು ವಾಪಾಸ್ ಹೋಗುತ್ತೇವೆ ಎಂದು ಹೇಳಿದರು. ರೈತರು ಮಹಿಳಾ ಸಿಬ್ಬಂದಿ ಎನ್ನುವುದನ್ನು ಗಮನಿಸದೇ ಹಲ್ಲೆ ನಡೆಸಿದ್ದಾರೆ. ಸಿಬ್ಬಂದಿ ಸಹ ರೈತ ಕುಟುಂಬದ ಹಿನ್ನೆಲೆಯಿಂದಲೇ ಬಂದಿದ್ದು, ಈ ಘಟನೆ ಸಿಬ್ಬಂದಿಗೆ ಮಾತ್ರವಲ್ಲದೆ, ಅವರ ಕುಟುಂಬ ಸದಸ್ಯರಿಗೂ ಸಹ ಆತಂಕವನ್ನು ಉಂಟು ಮಾಡಿದೆ. ಇಂತಹ ಘಟನೆ ನಡೆಯಬಾರದಿತ್ತು, ಇದು ಖಂಡನೀಯ ಎಂದರು.
ಬಿಡದಿಯಲ್ಲಿ ನಡೆದ ಘಟನೆಯನ್ನು ಪೊಲೀಸ್ ಇಲಾಖೆ ಕೊಂಚ ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೆ ತಡೆಯಬಹುದಾಗಿತ್ತು. ಇದರಲ್ಲಿ ಪೊಲೀಸ್ ವೈಫಲ್ಯವೂ ಇದೆ. ಸಿಬ್ಬಂದಿ ಈಗ ಮತ್ತೆ ಸರ್ವೇ ಕಾರ್ಯಕ್ಕೆ ಹೋಗಲು ಹೆದರುತ್ತಿದ್ದಾರೆ. ನಮ್ಮ ಸಿಬ್ಬಂದಿಗೆ ಜಿಬಿಡಿಎ ಮತ್ತು ಪೊಲೀಸ್ ಇಲಾಕೆ ಸೂಕ್ತ ರಕ್ಷಣೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಹೇಳುವುದನ್ನು ಮಾಡುವುದಷ್ಟೇ ನಮ್ಮ ಕೆಲಸ. ಯೋಜನೆಗೆ ಒಪ್ಪಿಗೆ ನೀಡಿದ್ದ ರೈತರ ಜಮೀನಿಗೆ ಮಾತ್ರವೇ ನೌಕರರು ಸರ್ವೇ ಕಾರ್ಯಕ್ಕೆ ತೆರಳಿದ್ದರು. ಆದರೆ ಸಿಬ್ಬಂದಿಯ ಯಾವುದೇ ಮಾತುಗಳಿಗೆ ಮನ್ನಣಯನ್ನೇ ನೀಡದೆ ಏಕಾ ಏಕಿ ಹಲ್ಲೆ ಮಾಡಲಾಗಿದೆ. ರಾಜ್ಯದಲ್ಲಿ ಸಾಕಷ್ಟು ಸರ್ಕಾರಿ ಹುದ್ದೆಗಳು ಖಾಲಿ ಇವೆ, ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ನಮ್ಮ ನೌಕರರು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಇಂತಹ ಘಟನೆಗಳು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಆತ್ಮಸ್ಥೈರ್ಯವನ್ನ ಕುಗ್ಗಿಸುತ್ತದೆ.
ಇದು ಮುಖ್ಯಮಂತ್ರಿ ತವರು ಜಿಲ್ಲೆ, ಈ ತರಹದ ಹಲ್ಲೆಗಳು ಮುಂದುವರಿದರೆ ಇಡೀ ಜಿಲ್ಲೆಗೆ ಕಳಂಕ. ಈ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಬಿಜಿಡಿಎ ಸೂಕ್ತ ರಕ್ಷಣೆ ನೀಡಬೇಕು. ಒಂದು ವೇಳೆ ಇಂತಹ ಘಟನೆ ಮರುಕಳಿಸಿದ್ದೇ ಆದರೆ, ಸರ್ಕಾರಿ ನೌಕರರ ಬಂದ್‌ಗೆ ಕರೆ ನೀಡಿ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಕೆಯನ್ನು ಸತೀಶ್ ನೀಡಿದರು.
ಈ ವೇಳೆ ಸಂಘದ ಶಿವಸ್ವಾಮಿ, ಭೈರಪ್ಪ, ಜಯಪ್ರಕಾಶ್ ಮುಂತಾದವರು ಇದ್ದರು.