ಠಾಣೆಗೆ ಪ್ರಕರಣವೊಂದರ ಸಂಬಂಧ ತೆರಳಿದ್ದ ವಕೀಲನೊಂದಿಗೆ ಸಾತನೂರು ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಕನಕಪುರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸಿದರು. ವಕೀಲರ ಸಂಘದ ಉಪಾಧ್ಯಕ್ಷ ಸಿದ್ಧಾರ್ಥ, ಕಾರ್ಯದರ್ಶಿ ನಾರಾಯಣ್, ಖಜಾಂಚಿ ಸಾಗರ್, ಹಿರಿಯ ವಕೀಲರಾದ ನಂಜೇಗೌಡ, ಮಾದೇಗೌಡ, ಶಿವರಾಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 
ಬೆಂಗಳೂರು ದಕ್ಷಿಣ

ವಕೀಲನೊಂದಿಗೆ ಪೊಲೀಸ್ ಸಿಬ್ಬಂದಿ ಅನುಚಿತ ವರ್ತನೆ?

ಕನಕಪುರ : ಸಾತನೂರು ಠಾಣೆಗೆ ದೂರು ನೀಡಲು ಬಂದ ವಕೀಲನೊಂದಿಗೆ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕನಕಪುರ ತಾಲೂಕು ವಕೀಲರು ಶುಕ್ರವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ನಗರದ ಜೆಎಂಎಫ್‌ಸಿ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ, ಆವರಣದಲ್ಲಿ ಜಮಾವಣೆಗೊಂಡ ನ್ಯಾಯವಾದಿಗಳು ವಕೀಲ ಮಧುಸೂದನ್ ಮೇಲೆ ಸಾತನೂರು ಸಬ್‌ಇನ್‌ಸ್ಪೆಕ್ಟರ್ ಸುಮಂತ್‌ಗೌಡ ಹಾಗೂ ಠಾಣಾ ಸಿಬ್ಬಂದಿ ಬಲರಾಮ್ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೇ ಸಾರ್ವಜನಿಕವಾಗಿ ನಿಂದಿಸಿದ್ದಾರೆ. ಕೂಡಲೇ ಅವರ ವಿರುದ್ಧ ಕ್ರಮವಾಗಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಗೂ ಮುನ್ನ ಸಭೆ ನಡೆಸಿ, ಒಮ್ಮತದ ನಿರ್ಧಾರವನ್ನೂ ವಕೀಲರು ಕೈಗೊಂಡರು.
ವಕೀಲರ ಸಂಘದ ಅಧ್ಯಕ್ಷ ಎ.ಸಿ.ಚನ್ನೇಗೌಡ ಮಾತನಾಡಿ, ವಕೀಲ ಮಧುಸೂದನ್ ಅವರು ಕಕ್ಷಿದಾರನ ಪರ ದೂರು ನೀಡಲು ಬುಧವಾರ ಸಾತನೂರು ಠಾಣೆಗೆ ತೆರಳಿದ್ದರು. ಈ ವೇಳೆ ಸಬ್‌ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಅವರಿಗೆ ಸಾರ್ವಜನಿಕವಾಗಿ ಅವಮಾನಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ವಿಕಾಸ್‌ಗೌಡ ಹಾಗೂ ಅನಂತರಾಮ್ ಭೇಟಿ ನೀಡಿ ವಕೀಲರ ಮನವಿಸ್ವೀಕರಿಸಿ, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಮಾಧಾನ ಪಡಿಸಿದರು.