ರಾಮನಗರ: ಸಮಗ್ರ ಉಪನಗರ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ಬೈರಮಂಗಲ ಗ್ರಾಮದಲ್ಲಿ ಕಳೆದ 5 ದಿನಗಳಿಂದ ರಸ್ತೆ ಮೇಲೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನ ಪೊಲೀಸರು ಶುಕ್ರವಾರ ಸಂಜೆ ವಶಕ್ಕೆ ಪಡೆದರು.
ಕಳೆದ ಸೋಮವಾರದಿಂದಲೂ ಬೈರಮಂಗಲದ ಬಿಡದಿ - ಹಾರೋಹಳ್ಳಿ ಮುಖ್ಯ ರಸ್ತೆಯಲ್ಲೆ ರೈತರು ಕುಳಿತು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತವಾಗಿತ್ತು. ಈ ಹಿನ್ನೆಲೆಯಲ್ಲಿ ಎಎಸ್ಪಿ ರಾಜೇಂದ್ರ, ಡಿವೈಎಸ್ಪಿಗಳಾದ ಗಿರಿ ಹಾಗೂ ಶ್ರೀನಿವಾಸ್ ಸಂಜೆ ಧರಣಿ ನಿರತ ಸ್ಥಳಕ್ಕೆ, ರಸ್ತೆ ತೆರವುಗೊಳಿಸಿ, ಹಿಂದೆ ಪ್ರತಿಭಟನೆ ನಡೆಸುತ್ತಿದ್ದ ದೇವಸ್ಥಾನದ ಮುಂಭಾಗಕ್ಕೆ ಸ್ಥಳಾಂತರಗೊಳ್ಳುವಂತೆ ಮನವಿ ಮಾಡಿದರು.
ಆದರೆ, ರೈತರು ಪೊಲೀಸರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರನ್ನ ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ರೈತ ಮಹಿಳೆಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ರೈತರು, ಪೊಲೀಸರು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದರು.
ಅಂತ್ತಿಮವಾಗಿ ಪೊಲೀಸರು ಬಲವಂತದಿಂದ ರೈತರನ್ನ ಬಂಧಿಸುವ ಕೆಲಸಕ್ಕೆ ಮುಂದಾದರು. ಡಿ.ಎ.ಆರ್ ವ್ಯಾನ್ ಹಾಗೂ ಖಾಸಗಿ ಬಸ್ಸುಗಳಿಗೆ ರೈತರು ಹಾಗೂ ರೈತ ಮಹಿಳೆಯರನ್ನ ತಳ್ಳುವ ಕೆಲಸ ಮಾಡಿದರು. ಇದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ ಮಹಿಳೆಯರನ್ನ ಬಲವಂತವಾಗಿ ರಸ್ತೆ ಮೇಲೆ ಮಲಗಿದರು ಬಿಡದೆ ಎಳೆದುಕೊಂಡು ಬಸ್ಸು ಹಾಗೂ ವ್ಯಾನ್ ಹತ್ತಿಸುವ ಕೆಲಸ ಮಾಡಿದರು.
ರಸ್ತೆಯ ಎರಡು ಕಡೆಗಳಲ್ಲಿ ಎತ್ತಿನ ಗಾಡಿಗಳು ಹಾಗೂ ಹಸುಗಳನ್ನ ಕಟ್ಟಿಹಾಕಿ ರಸ್ತೆ ಬಂದ್ ಮಾಡಲಾಗಿತ್ತು. ಇದರ ಜತೆಗೆ ರಸ್ತೆ ಮಧ್ಯದಲ್ಲಿಯೇ ಗಣೇಶ ಮೂರ್ತಿ ಇಟ್ಟು ಪೂಜಿಸಲಾಗುತಿತ್ತು. ಪೊಲೀಸರು ಹಸುಗಳನ್ನ ಹಾಗೂ ಎತ್ತಿನ ಗಾಡಿಗಳನ್ನ ಹಾಗೂ ಗಣೇಶ ಮೂರ್ತಿಯನ್ನು ಮುಖ್ಯ ರಸ್ತೆಯಿಂದ ಪಕ್ಕದ ಖಾಲಿ ಜಾಗಕ್ಕೆ ತಳ್ಳಿದ್ದರು. ಹಸುಗಳನ್ನ ಸಹ ಪೊಲೀಸರೆ ಹಿಡಿದು ಪಕ್ಕಕ್ಕೆ ಕಟ್ಟಿದ್ದರು. ಇನ್ನೂ ರಸ್ತೆಯಲ್ಲಿ ಬಿಸಿಲಿನ ನೆರಳಿಗಾಗಿ ಕಟ್ಟಿದ್ದ ಪ್ಲಾಸ್ಟಿಕ್ ಟಾರ್ಪಲ್ ಹಾಗೂ ಸೀರೆಗಳನ್ನ ಸಹ ಪೊಲೀಸರು ಕಿತ್ತು ಹಾಕಿದರು.