ಶಾಸಕ ಬಾಲಕೃಷ್ಣ ಪೊಲೀಸರಿಗೆ ಮನವಿ ಮಾಡಿದರು. 
ಬೆಂಗಳೂರು ದಕ್ಷಿಣ

ಬಹಿರಂಗ ಚರ್ಚೆಗೆ ಪೊಲೀಸ್​ ದಿಗ್ಬಂಧನ

ಮಾಗಡಿ: ಹಾಲಿ ಮತ್ತು ಮಾಜಿ ಶಾಸಕರ ಬಹಿರಂಗ ಚರ್ಚೆ ಪೊಲೀಸರ ಮಧ್ಯ ಪ್ರವೇಶದಿಂದ ಕೊನೆಗೂ ಬರಖಾಸ್ತಾಗಿದ್ದು, ವಾದ&ವಿವಾದಗಳಿಗೆ ಸದ್ಯಕ್ಕೆ ಅಲ್ಪವಿರಾಮ ಬಿದ್ದಿದೆ.
ಹಾಲಿ ಶಾಸಕ ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್​ ನಡುವೆ ಬಹಿರಂಗ ಚರ್ಚೆಗೆ ಚಕ್ರಬಾವಿ ವಿಎಸ್ಸೆಸ್ಸೆನ್​ನಲ್ಲಿ ವೇದಿಕೆ ಸಿದ್ಧವಾಗಿತ್ತು. ಚರ್ಚೆಗೆ ಬರಲು ಇಬ್ಬರೂ ನಾಯಕರು ಒಪ್ಪಿದ್ದರು. ಸಂಭಾವ್ಯ ಅನಾಹುತಗಳ ಅರಿವಿದ್ದ ತಾಲೂಕು ಆಡಳಿತ ಹಾಗೂ ಪೊಲೀಸ್​ ಇಲಾಖೆ ವಿಎಸ್ಸೆಸ್ಸೆನ್​ ಕಟ್ಟಡದ ಸುತ್ತಲೂ 144 ಸೆಕ್ಷನ್​ ಜಾರಿಗೊಳಿಸಿತ್ತು. ಗ್ರಾಮದಲ್ಲಿ 150ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಬಿಗಿಬಂದೋಬಸ್ತ್​ ಮಾಡಿತ್ತು. ಆದರೂ ಶನಿವಾರ ಬೆಳಗ್ಗೆ 11ಕ್ಕೆ ವೇದಿಕೆಗೆ ಆಗಮಿಸಲು ಶಾಸಕ ಬಾಲಕೃಷ್ಣ ಸ್ನೇಹಿತರ ಕಾರಿನಲ್ಲಿ ತೆರಳುವ ವೇಳೆ ಹಲಸಬೆಲೆ ಗೇಟ್​ ಬಳಿ ಬ್ಯಾರಿಕೇಡ್​ ಅಳವಡಿಸಿ ಡಿವೈಎಸ್​ಪಿ ರವಿ ಶಾಸಕರ ಕಾರನ್ನು ತಡೆದರು. ಈ ವೇಳೆ ಪೊಲೀಸರೊಂದಿಗೆ ಶಾಸಕರು ವಾಕ್​ ಸಮರ ನಡೆಯಿತಾದರೂ ಗ್ರಾಮದಲ್ಲಿ ನಿಷೇಧಾೆ ಜಾರಿಯಿದ್ದು, ಯಾವುದೇ ಚರ್ಚೆ ಹಾಗೂ ಸಭೆ ಮಾಡುವಂತಿಲ್ಲ ಎಂದು ಶಾಸಕರಿಗೆ ಸೂಚನೆ ನೀಡಿದರು.
ಭರವಸೆಗೆ ಮಣಿದ ಶಾಸಕ
ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಮಾಜಿ ಶಾಸಕರ ವಿರುದ್ಧ ಕ್ರಮ ಆಗಬೇಕು. ಪ್ರತಿನಿತ್ಯ ಆರೋಪ ಮಾಡಿ, ವೈಯಕ್ತಿಕ ನಿಂದನೆ ಮಾಡುವುದು ನಿಲ್ಲಬೇಕು. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವೇ ಚರ್ಚೆಗೆ ಅವಕಾಶ ಕೊಡಬೇಕು ಎಂದು ಪೊಲೀಸರಿಗೆ ಬಾಲಕೃಷ್ಣ ಮನವಿ ಮಾಡಿದರಲ್ಲದೇ ತಿಂಗಳೊಳಗೆ ಕ್ರಮಕೈಗೊಳ್ಳದಿದ್ದರೆ ಠಾಣೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು. ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕರಿಗೆ ನೋಟಿಸ್​ ನೀಡುವುದಾಗಿ ಡಿವೈಎಸ್ಪಿ ರವಿ ಭರವಸೆ ನೀಡಿದ ಬಳಿಕ, ಶಾಸಕರು ಸ್ಥಳದಿಂದ ಮರಳಿಹೋದರು.
ಮಾಜಿ ಶಾಸಕನಿಗೆ ದಿಗ್ಬಂಧನ
ಮಾಜಿ ಶಾಸಕ ಎ.ಮಂಜುನಾಥ್​ ಕಲ್ಯಾಗೇಟ್​ ಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಬೆಂಬಲಿಗರೊಂದಿಗೆ ಜೆಡಿಎಸ್​ ಭವನಕ್ಕೆ ಬಂದು, ಅಲ್ಲಿಂದ ಚಕ್ರಬಾವಿಯಲ್ಲಿನ ಚರ್ಚೆಗೆ ತೆರಳಲು ಮುಂದಾದಾಗ ಪೊಲೀಸ್​ ಇನ್​ಸ್ಪೆಕ್ಟರ್​ ಶ್ರೀನಿವಾಸ್​ ಹಾಗೂ ಸಿಬ್ಬಂದಿ ಅಡ್ಡಗಟ್ಟಿದರು. ಈ ವೇಳೆ ಮಾಜಿ ಶಾಸಕ ಹಾಗೂ ಬೆಂಬಲಿಗರು ಮತ್ತು ಪೊಲೀಸರ ನಡುವೆ ತಳ್ಳಾಟ, ನೂಕಾಟ ನಡೆಯಿತು. ಕೊನೆಗೆ ಮಾಜಿ ಶಾಸಕರು ಹಾಗೂ ಅವರ ಬೆಂಬಲಿಗರನ್ನು ಪೊಲೀಸರು ಜೆಡಿಎಸ್​ ಕಚೇರಿ ಒಳಗೆ ತಳ್ಳಿ, ಬೀಗ ಹಾಕಿ, ದಿಗ್ಬಂಧನ ಹೇರಿದರು.
1 ಮಾನನಷ್ಟ ಮೊಕದ್ದಮೆ
ಪಟ್ಟಣದ ಕಾಂಗ್ರೆಸ್​ ಕಚೇರಿಯಲ್ಲಿ ಎಚ್​.ಸಿ.ಬಾಲಕೃಷ್ಣ ಮಾತನಾಡಿ, ಎ.ಮಂಜುನಾಥ್​ ನನ್ನ ವಿರುದ್ಧ<600 ಕೋಟಿ ಹಗರಣದ ಆರೋಪ ಮಾಡಿದ್ದಾರೆ. ಈ ಆಧಾರದ ಮೇಲೆ ಅವರ ವಿರುದ್ಧನ್ಯಾಯಾಲಯದಲ್ಲಿ ಒಂದು ರೂ. ಮಾನನನಷ್ಟ ಮೊಕದ್ದಮೆ ಹೂಡುತ್ತೇನೆ. ನನ್ನ ಸಹೋದರ ಬಿಡಿಸಿಸಿಸಿ ಬ್ಯಾಂಕ್​ ಅಧ್ಯಕ್ಷ ಎಚ್​.ಎನ್​.ಅಶೋಕ್​ ವಿರುದ್ಧ 18 ಕೋಟಿ ರೂ. ಲೂಟಿಯ ಆರೋಪ ಮಾಡಿದ್ದಾರೆ.ಈ ಬಗ್ಗೆ ಎಚ್​.ಎನ್​.ಅಶೋಕ್​ ಸಹ ಮಾಜಿ ಶಾಸಕರ ವಿರುದ್ಧಮಾನನಷ್ಟ ಮೊಕದಮೆ ಹೂಡಲಿದ್ದಾರೆ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ ಎಂದರು.
ಕೆಟ್ಟ ಹೆಸರು ತರಲು ಯತ್ನ
ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ಎಚ್​.ಎನ್​.ಆಶೋಕ್​ ಮಾತನಾಡಿ, ನಕಲಿ ಚಿನ್ನ ಅಡಮಾನ ವಿಚಾರವಾಗಿ ಚಿನ್ನ ಪರೀಕ್ಷಕ ಅವರ ಪತ್ನಿ ಹಾಗೂ ಕೆಲ ಸಿಬ್ಬಂದಿವಿರುದ್ಧ ದೂರು ನೀಡಿ ತನಿಖೆ ನಡೆಸಿ 3 ಮಂದಿ ತಪ್ಪಿತಸ್ಥರ ವಿರುದ್ದ ಎಫ್​ಐಆರ್​ ಹಾಕಿಸಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿದೆ. ದುರುಪಯೋಗವಾಗಿದ್ದ < 4.38 ಕೋಟಿಯನ್ನು ಬಡ್ಡಿ ಸಮೇತ ಬ್ಯಾಂಕ್​ಗೆ ಮರಳಿಸಲು ಕ್ರಮವಹಿಸಲಾಗಿದೆ. <9 ಕೋಟಿ, <18 ಕೋಟಿ ದುರುಪಯೋಗವಾಗಿದೆ ಎಂದು ಮಾಜಿ ಶಾಸಕರು ಆರೋಪಿಸಿದ್ದಾರೆ. ಇದರಿಂದ ಗ್ರಾಹಕರಲ್ಲಿ ಪ್ರಚೋದನೆ ನೀಡಿದಂತಾಗಿ ಉದ್ವಿಗ್ನ ವಾತಾವರಣ ಸೃಷ್ಟಿಸಿ, ರಾಜಕೀಯವಾಗಿ ನನಗೆ ಕೆಟ್ಟ ಹೆಸರು ತರಲು ಯತ್ನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಟಿ.ಜಿ.ವೆಂಕಟೇಶ್​, ಬಿಎಂಆರ್​ಡಿಎ ಅಧ್ಯಕ್ಷ ಪ್ರಕಾಶ್​, ನಿರ್ದೇಶಕ ಚಂದ್ರಶೇಖರ್​, ಬಮುಲ್​ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಟಿಎಪಿಸಿಎಂಎಸ್​ ಅಧ್ಯಕ್ಷ ಶಿವಪ್ರಸಾದ್​, ದೀಪು ಉದ್ದೀಶ್​, ಕಲ್ಕೆರೆ ಶಿವಣ್ಣ, ಬ್ಯಾಲಕೆರೆ ಚಿಕ್ಕರಾಜು, ಪುರಸಭೆ ಮಾಜಿ ಸದಸ್ಯರಾದ ರೂಪೇಶ್​, ರೆಹಮತ್​, ಶಿವಕುಮಾರ್​, ಅಶ್ವತ್ಥ್​, ಜೆಡಿಎಸ್​ ಮುಖಂಡರಾದ ಕೆಂಪೇಗೌಡ, ಸಾಗರ್​, ಡಿ.ಜಿ.ಕುಮಾರ್​, ನಯಾಜ್​, ಬಿಎಸ್​.ಸುಹೇಲ್​, ರಂಗಣ್ಣಿ, ವಿಜಯ್​ ಕುಮಾರ್​, ಮಂಜುನಾಥ್​ ಇತರರು ಇದ್ದರು.