ರಾಮನಗರ ಜಿಲ್ಲಾ ಕೃಷಿ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಸಭೆ ನಡೆಯಿತು. ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಇಟ್ಟಮಡು ಡಿ. ಗೋಪಾಲ್, ಜಂಟಿ ಕೃಷಿ ನಿರ್ದೇಶಕಿ ಎನ್. ಅಂಬಿಕಾ, ಜಿಲ್ಲಾ ಉಪ ಕೃಷಿ ನಿರ್ದೇಶಕಿ ವಿನುತಾ, ಉಪಾಧ್ಯಕ್ಷ ರಾಮಣ್ಣ, ರಾಜ್ಯ ಪ್ರತಿನಿಧಿ ಲಿಂಗಪ್ಪ ತಾಲೂಕು ಅಧ್ಯಕ್ಷ ಶಾಂತಪ್ಪ ಇದ್ದರು.  
ಬೆಂಗಳೂರು ದಕ್ಷಿಣ

ತೋಟದ ಬೆಳೆಗಳಲ್ಲಿ ನಿಯಂತ್ರಣಕ್ಕೆ ಬರುತ್ತಿಲ್ಲ ಕೀಟಬಾಧೆ

ರಾಮನಗರ: ಹಳ್ಳಿಯಲ್ಲಿ ರೈತ ಕ್ಷೇಮವಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕೃಷಿಯಲ್ಲಿ ರೈತ ಖುಷಿ ಕಾಣಬೇಕಾದರೆ ಅಧಿಕಾರಿಗಳು ರೈತರ ಜತೆ ನಿಲ್ಲಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಇಟ್ಟಮಡು ಡಿ. ಗೋಪಾಲ್ ತಿಳಿಸಿದರು.

ರಾಮನಗರದ ಜಿಲ್ಲಾ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಕೃಷಿಕ ಸಮಾಜದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಬಿತ್ತನೆ ಮಾಡಿದ ರಾಗಿ ಪೈರು ಮೇಲಿದ್ದಿಲ್ಲ. ಮಳೆಯಾಗುತ್ತಿದ್ದರೂ ಅದರಿಂದ ಫಸಲು ಬರುತ್ತದೆ ಎನ್ನುವ ನಂಬಿಕೆ ಇಲ್ಲ. ಜತೆಗೆ ತೆಂಗು ಇತರ ತೋಟದ ಬೆಳೆಗಳಿಗೆ ಕೀಟಬಾಧೆ ನಿಯಂತ್ರಣಕ್ಕೆ ಬರುತ್ತಿಲ್ಲ. ಜಿಲ್ಲೆಯಲ್ಲಿ ಅರಣ್ಯದಂಚಿನ ಗ್ರಾಮಗಳಲ್ಲಿ ವನ್ಯ ಪ್ರಾಣಿಗಳ ಉಪಟಳ ಹೆಚ್ಚಾಗಿದೆ ಎಂದರು.

ವಿದ್ಯುತ್ ಸಮಸ್ಯೆ, ಅಂತರ್ಜಲಮಟ್ಟ ಕ್ಷೀಣಗೊಂಡು ಬೋರ್‌ವೆಲ್‌ಗಳು ಬತ್ತುತ್ತಿರುವುದು ಹೀಗೆ ಹತ್ತು ಹಲವು ಸಮಸ್ಯೆಯನ್ನು ರೈತರು ಎದುರಿಸುತ್ತಿದ್ದಾರೆ. ಜಿಲ್ಲೆಯ ರೈತರೊಂದಿಗೆ ಅರಣ್ಯ, ತೋಟಗಾರಿಕೆ, ಕೃಷಿ, ರೇಷ್ಮೆ, ಮೀನುಗಾರಿಕೆ, ಕಂದಾಯ ಮತ್ತಿತರ ಇಲಾಖೆ ಅಧಿಕಾರಿಗಳು ನಿಲ್ಲಬೇಕು. ಕಾಲಕಾಲಕ್ಕೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ರೈತರಿಗೆ ಸೂಕ್ತ ಮಾಹಿತಿ ನೀಡಿ ತಲುಪಿಸುವ ಕೆಲಸ ಆಗಬೇಕಿದೆ ಎಂದರು.

ಜಂಟಿ ಕೃಷಿ ನಿರ್ದೇಶಕಿ ಎನ್. ಅಂಬಿಕಾ ಮಾತನಾಡಿ, ಕೃಷಿ ಇಲಾಖೆ ಕಾಲಕಾಲಕ್ಕೆ ರೈತರಿಗೆ ಇಲಾಖೆಯ ಪ್ರಯೋಜನ ತಿಳಿಸುತ್ತಿದೆ. ಜತೆಗೆ ಆಧುನಿಕ ಕೃಷಿ ಪದ್ಥತಿ ತಿಳಿವಳಿಕೆ ಬಿತ್ತನೆ ಬೀಜ ಪೂರೈಕೆ ಸಹಾಯಧನದಲ್ಲಿ ದೊರೆಯುವ ಕೃಷಿ ಯಂತ್ರೋಪಕರಗಳ ಬಗ್ಗೆ ಮಾಹಿತಿ ನೀಡುವುದು ಸೇರಿ ಹಲವು ಕಾರ್ಯಕ್ರಮಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಇಲಾಖೆ ಮಾಡುತ್ತಿದೆ ಎಂದರು.

ಆನೆ, ಚಿರತೆ, ಕರಡಿ ಮತ್ತಿತರ ವನ್ಯ ಪ್ರಾಣಿಗಳು ಅರಣ್ಯ ಬಿಟ್ಟು ನಾಡಿಗೆ ಬರುತ್ತಿವೆ.ಅರಣ್ಯದಲ್ಲೇ ಆಹಾರ ಸಿಗುವ ವ್ಯವಸ್ಥೆ ಮಾಡಬೇಕು ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಲಿಂಗಪ್ಪ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದರು. ಇದಕ್ಕೆ ಉತ್ತರ ನೀಡಿದ ಎಸಿಎಫ್ ಪುಟ್ಟಮ್ಮ, ಆನೆ ಧಾಳಿ ತಡೆಗಟ್ಟಲು ಸೂಕ್ತ ಕ್ರಮ ಅರಣ್ಯ ಇಲಾಖೆ ಕೈಗೊಂಡಿದೆ ಎಂದು ಉತ್ತರ ನೀಡಿದರು.

ಕೃಷಿಕ ಸಮಾಜದ ಉಪಾಧ್ಯಕ್ಷ ರಾಮಣ್ಣ ಮಾತನಾಡಿ, ರೇಷ್ಮೆ ಮಾರುಕಟ್ಟೆಯಲ್ಲಿ ಹಿರಿಯ ನಾಗರಿಕರು ರೇಷ್ಮೆ ಗೂಡು ಹೊತ್ತು ತರಬೇಕು ಅವರ ನೆರವಿಗೆ ಸೂಕ್ತ ಕೂಲಿ ಆಳು ನೇಮಿಸಬೇಕು. ಜತೆಗೆ ಜಾಲರಿ ವ್ಯವಸ್ಥೆ ಜರೂರಾಗಿ ಹರಾಜು ವ್ಯವಸ್ಥೆ ಕೈಗೊಳ್ಳಬೇಕು ಎಂಬ ಸಲಹೆ ನೀಡಿದರು. ಆಗ ರೇಷ್ಮೆ ಮಾರುಕಟ್ಟೆ ನಿರ್ದೇಶಕ ಕೈಲಾಶ್ ಮೂರ್ತಿ ಉತ್ತರ ನೀಡಿ ಮಾತನಾಡಿ, ಮುಂದೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದು ನಿಮ್ಮ ಸಲಹೆ ಈಡೇರಿಸಲಾಗುತ್ತದೆ ಎಂದು ತಿಳಿಸಿದರು.

ಮಾಗಡಿ ಕು ಕೃಷಿಕ ಸಮಾಜದ ಅಧ್ಯಕ್ಷ ರಾಜೇಶ್ ಮಾತನಾಡಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು : ಅರಣ್ಯ ಇಲಾಖೆ ಎಸಿಎಫ್ ಪುಟ್ಟಮ್ಮ, ಕೃಷಿ ಇಲಾಖೆ ಜಿಲ್ಲಾ ಉಪ ಕೃಷಿ ನಿರ್ದೇಶಕಿ ವಿನುತಾ, ತೋಟಗಾರಿಕೆ ಇಲಾಖೆ ಅಧಿಕಾರಿ ಶ್ವೇತಕ್, ಪಶುಪಾಲನಾ ಇಲಾಖೆ ಡಾ. ಯು.ಸಿ. ಕುಮಾರ್, ಸರ್ವೇ ಇಲಾಖೆ ಡಿಡಿಎಲ್‌ಆರ್ ಹನುಮೇಗೌಡ, ರೇಷ್ಮೆ ಇಲಾಖೆ ಪುಟ್ಟಸ್ವಾಮಿ, ರೇಷ್ಮೆ ಮಾರುಕಟ್ಟೆ ಅಧಿಕಾರಿ ಕೈಲಾಶ್‌ಮೂರ್ತಿ, ಇತರ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಆರ್.ಎಸ್. ಗೀತಾ, ಎಸ್. ಪ್ರಕಾಶ್, ಎಸ್. ಶಶಿಕಲಾ ಭಾಗವಹಿಸಿದ್ದರು.

ಚನ್ನಪಟ್ಟಣ ತಾಲೂಕು ಅಧ್ಯಕ್ಷ ರಾಜೇಶ್, ಮಾಗಡಿ ತಾಲೂಕು ಅಧ್ಯಕ್ಷ ತೋಟೆದ ಮನೆ ಗಿರೀಶ್, ಜಿಲ್ಲಾ ಪ್ರತಿನಿಧಿಗಳಾದ ನಟರಾಜ್, ಟಿ. ರಾಜೇಶ್, ದೊಡ್ಡವೀರೇಗೌಡ, ಜಿ. ರಂಗಸ್ವಾಮಯ್ಯ, ಸಿದ್ದರಾಜು, ಸಹಾಯಕ ಕೃಷಿ ನಿರ್ದೇಶಕರಾದ ಉಷಾ, ರಮೇಶ್, ತಾಂತ್ರಿಕ ಅಧಿಕಾರಿಗಳಾದ ಅಶೋಕ್, ಪ್ರಭಾಕರ್, ಪ್ರದೀಪ್ ಇದ್ದರು.