ಮಾಗಡಿ ಎನ್​ಇಎಸ್​ ಬಡಾವಣೆಯ ನಿವಾಸಿಗಳ ಮನೆಯ ಮೇಲೆ ಕುಳಿತಿರುವ ಕೋತಿಗಳು. 
ಬೆಂಗಳೂರು ದಕ್ಷಿಣ

ಕೋತಿಗಳ ಕಾಟಕ್ಕೆ ಹೈರಾಣಾದ ಜನ

ಮಾಗಡಿ: ಪಟ್ಟಣದಲ್ಲಿ ಕೆಲ ತಿಂಗಳುಗಳಿಂದ ಕೋತಿಗಳ ಹಾವಳಿ ಮಿತಿಮೀರಿದ್ದು, ಅದರಲ್ಲೂ ಎನ್​ಇಎಸ್​ ಬಡಾವಣೆ ನಿವಾಸಿಗಳಿಗೆ ಸ್ವಂತ ಮನೆಯೇ ಜೈಲಾಗಿ ಈಗ ಪರಿಣಮಿಸಿದೆ!
ಹೌದು.... ಕೋತಿಗಳ ಹಾವಳಿಯಿಂದಾಗಿ ಬೀದಿಯಲ್ಲಿ ಓಡಾಡಲು ಭಯ, ಮನೆಯೊಳಗೆ ನಿರಾಳವಾಗಿರಲು ಆತಂಕ. ಇದು ಸದ್ಯ ಇಲ್ಲಿನ ನಿವಾಸಿಗಳ ದೈನಂದಿನ ಕಟುವಾಸ್ತವವಾಗಿದೆ. ಮಕ್ಕಳನ್ನು ಆಟವಾಡಲು ಹೊರಗೆ ಬಿಡಲಾಗದೆ, ಹೆತ್ತವರು ಅವರನ್ನು ಕತ್ತಲ ಕೋಣೆಯೊಳಗೆ ಕೂಡಿಹಾಕುವ ಪರಿಸ್ಥಿತಿ ಎದುರಾಗಿದೆ. ಪಟ್ಟಣದ ಓವರ್​ಹೆಡ್​ ಟ್ಯಾಂಕ್​ ಕಾಮಗಾರಿ ಪೂರ್ಣಗೊಂಡಿಲ. ಈ ಟ್ಯಾಂಕ್​ ಬಳಿ ನೂರಾರು ಕೋತಿಗಳು ನೆಲೆಸಿವೆ. ಟ್ಯಾಂಕ್​ ಮೇಲಿಂದ ಇಡೀ ಬಡಾವಣೆ ಮೇಲೆ ಕಣ್ಣಿಡುವ ಕೋತಿಗಳ ಹಿಂಡು, ಒಂಟಿಯಾಗಿ ಸಿಗುವ ಸಾರ್ವಜನಿಕರನ್ನು ಟಾರ್ಗೆಟ್​ ಮಾಡಿ ದಾಳಿ ನಡೆಸುತ್ತಿವೆ. ಒಂದಲ್ಲ, ಎರಡಲ್ಲ...ನೂರಾರು ಕೋತಿಗಳು ಏಕಕಾಲಕ್ಕೆ ಜನರ ದಾಳಿ ಮಾಡುತ್ತವೆ.
ತರಕಾರಿ, ಹಣ್ಣು, ತಿಂಡಿ&ತಿನಿಸುಗಳಿಗಿಲ್ಲ ರಕ್ಷಣೆ!
ಬಡಾವಣೆಯಲ್ಲಿ ಕೋತಿಗಳ ಹಿಂಡು ಹೊಂಚು ಹಾಕಿ ಕುಳಿತಿರುತ್ತದೆ. ಮನೆಗಳ ಕಿಟಕಿ, ಬಾಗಿಲು ಸ್ವಲ್ಪ ತೆರೆದಿದ್ದರೂ ಸಾಕು, ಒಳನುಗ್ಗುವ ಕೋತಿಗಳು ತರಕಾರಿ, ಹಣ್ಣು&ಹಂಪಲು ಹಾಗೂ ತಿಂಡಿ&ತಿನಿಸುಗಳನ್ನು ಎಳೆದೊಯ್ಯುತ್ತಿವೆ. ಸ್ವಲ್ಪವೇ ಮೈ ಮರೆತರೂ ಸಾರ್ವಜನಿಕರ ಕೈಯಿಂದಲೇ ವಸ್ತುಗಳನ್ನು ಕಸಿದುಕೊಂಡು ಓಡುತ್ತಿವೆ.
ಸರಣಿ ದಾಳಿಯಿಂದ ಆತಂಕ
ಕೇವಲ ಆಹಾರ ಹೊತ್ತೊಯ್ಯುವುದಷ್ಟೇ ಅಲ್ಲ, ಅವುಗಳನ್ನು ತಡೆಯಲು ಅಥವಾ ಓಡಿಸಲು ಯತ್ನಿಸಿದರೆ ನಾಗರಿಕರ ಮೇಲೆಯೇ ರೊಚ್ಚಿಗೆದ್ದು ಮುಗಿಬೀಳುತ್ತಿವೆ. ಕೋತಿಗಳ ಕಡಿತ ಹಾಗೂ ಗೀಚುವಿಕೆಗೆ ಒಳಗಾಗಿ ಈಗಾಗಲೇ ಪಟ್ಟಣದ ಸಾಕಷ್ಟು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುರಸಭೆ, ಅರಣ್ಯ ಇಲಾಖೆ ರ್ನಿಲಕ್ಷ$್ಯ
ಗಂಭೀರ ಸಮಸ್ಯೆ ಕುರಿತು ಪಟ್ಟಣ ನಿವಾಸಿಗಳು ಪುರಸಭೆ ಹಾಗೂ ಅರಣ್ಯ ಇಲಾಖೆಗೆ ಹತ್ತಾರು ಬಾರಿ ಲಿಖಿತ ಹಾಗೂ ಮೌಖಿಕ ದೂರುಗಳನ್ನು ನೀಡಿದರೂ ಅಧಿಕಾರಿಗಳು ಇತ್ತ ತಲೆಹಾಕಿಲ್ಲ. ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆಯೇ ಹೊರತು ಶಾಶ್ವತ ಪರಿಹಾರ ಸಿಗುತ್ತಿಲ್ಲ. ಅರಣ್ಯ ಇಲಾಖೆ ಕೋತಿಗಳನ್ನು ಹಿಡಿದು ಕಾಡಿಗೆ ಬಿಡುವ ಕನಿಷ್ಠ ಸೌಜನ್ಯವನ್ನೂ ತೋರುತ್ತಿಲ್ಲ ಎನ್ನುವುದು ನಾಗರಿಕರ ಆರೋಪವಾಗಿದೆ. ಕೋತಿ ದಾಳಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡ ಮೇಲಷ್ಟೇ ಅಧಿಕಾರಿಗಳು ಎಚ್ಚರಗೊಳ್ಳುತ್ತಾರಾ.? ಪ್ರತಿ ತಿಂಗಳು ತಪ್ಪದೇ ಆಸ್ತಿ ತೆರಿಗೆ, ನೀರಿನ ತೆರಿಗೆ ವಸೂಲಿಗೆ ಬರುವ ಪುರಸಭೆಗೆ ನಾಗರಿಕರ ರಕ್ಷಣೆ ನೆನಪಿಗೆ ಬರುವುದಿಲ್ಲವೇ..? ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಸ್ಥಳಾಂತರಿಸಿ, ಚಿಕಿತ್ಸಾ ವೆಚ್ಚ ಭರಿಸಿ
ಬಡಾವಣೆಯ ನೀರಿನ ಟ್ಯಾಂಕ್​ ಹಾಗೂ ಮನೆಗಳ ಮೇಲೆ ಬೀಡುಬಿಟ್ಟಿರುವ ಕೋತಿಗಳ ಹಿಂಡನ್ನು ನುರಿತ ಸಿಬ್ಬಂದಿ ಮತ್ತು ಬೋನುಗಳ ಮೂಲಕ ತಕ್ಷಣವೇ ಸೆರೆಹಿಡಿದು ದೂರದ ಅರಣ್ಯಕ್ಕೆ ಬಿಡಬೇಕು. ಹಾಗೆಯೇ ಕೋತಿಗಳ ದಾಳಿಯಿಂದ ಗಾಯಗೊಂಡಿರುವ ನಿವಾಸಿಗಳಿಗೆ ಪುರಸಭೆ ಅಥವಾ ಅರಣ್ಯ ಇಲಾಖೆಯಿಂದ ಚಿಕಿತ್ಸಾ ವೆಚ್ಚ ನೀಡಲಿ.
ಕೋತಿಗಳ ಆವಾಸಸ್ಥಾನವಾಗಿರುವ ಟ್ಯಾಂಕ್​ ಸುತ್ತಲೂ ತಡೆಗೋಡೆ ಅಥವಾ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಜನರ ತಾಳ್ಮೆ ಎಲ್ಲೆ ಮೀರಿದೆ. ಅಧಿಕಾರಿಗಳು ಹವಾನಿಯಂತ್ರಿತ ಕಚೇರಿಗಳಿಂದ ಹೊರಬಂದು, ಜನರ ಕಷ್ಟ ನೋಡಬೇಕಿದೆ ಎಂದು ಆಗ್ರಹಿಸಿದ್ದಾರೆ.
"

ಕೋತಿಗಳನ್ನು ಸೆರೆ ಹಿಡಿದು ಬೇರೆಡೆ ಬಿಡಲು ಖರ್ಚು&ವೆಚ್ಚ ಪುರಸಭೆ ಭರಿಸಬೇಕು. ಈ ಬಗ್ಗೆ ಪುರಸಭೆಗೆ ಪತ್ರ ಬರೆಯಲಾಗಿದೆ. ಖರ್ಚು&ವೆಚ್ಚದ ಬಗ್ಗೆ ಪತ್ರ ಬರೆದಿಲ್ಲ. ಖುದ್ದಾಗಿ ತೆರಳಿ ಪತ್ರ ಪಡೆದು ಕೋತಿ ಸೆರೆ ಹಿಡಿದು ಬೇರೆಡೆ ಬಿಡಲಾಗುವುದು.

— > ಚೈತ್ರಾ ವಲಯ ಅರಣ್ಯಾಧಿಕಾರಿ
"

ಕೋತಿಗಳ ಹಾವಳಿಯಿಂದ ನೆಮ್ಮದಿ ಇಲ್ಲದಂತಾಗಿದೆ. ಯಾರೂ ಬಾಡಿಗೆಗೆ ಬರುತ್ತಿಲ್ಲ. ಬೇರೆಡೆಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. 8 ತಿಂಗಳಿಂದ ಪುರಸಭೆ, ಅರಣ್ಯ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ.

— > ಜಯಸಿಂಹ ಸ್ಥಳಿಯ