ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿರುವದು.
ರಾಮನಗರ: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ದಣ ಜಿಲ್ಲಾ ಕೇಂದ ಜಿಲ್ಲಾ ರಾಮನಗರದಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ವ್ಯವಸ್ಥೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.
ಉದ್ಯೋಗ, ರೇಷ್ಮೆ, ಎಪಿಎಂಸಿ ಮಾರುಕಟ್ಟೆ, ಮಾವು ಮಂಡಿ, ಮತ್ತಿತರ ವಾಣಿಜ್ಯ ವಹಿವಾಟು ಸೇರಿದಂತೆ ಇತರ ಕೆಲಸಕಾರ್ಯಗಳಿಗಾಗಿ ಜಿಲ್ಲಾಕೇಂದ್ರ ರಾಮನಗರಕ್ಕೆ ಬರುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದ್ದು, ಪರಿಣಾಮ ವಾಹನದಟ್ಟಣೆಯೂ ಹೆಚ್ಚುತ್ತಿದೆ. ಅದರಲ್ಲೂ ನಗರದ ಹೃದಯ ಭಾಗದಲ್ಲಿರುವ ಕೋರ್ಟ್ ರಸ್ತೆ ಮತ್ತು ರೈಲು ನಿಲ್ದಾಣ ರಸ್ತೆಗಳು ವಾಹನಗಳಿಂದ ಕಿಕ್ಕಿರಿದಿರುತ್ತವೆ. ಪಾದಚಾರಿಗಳೂ ಈ ಮಾರ್ಗಗಳಲ್ಲಿ ಸುಗಮ ಸಂಚಾರಕ್ಕೆ ಪರದಾಡುತ್ತಾರೆ.
ಕಿರಿದಾದ ರಸ್ತೆಗಳು: ಈ ಎರಡೂ ರಸ್ತೆಗಳು ಕಿರಿದಾಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದರಿಂದ ನಿತ್ಯವೂ ಸಂಚಾರ ದಟ್ಟಣೆಯಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾದ ಸಂಚಾರ ಪೊಲೀಸರು ಮೌನವಹಿಸಿದ್ದಾರೆ. ಈ ಟ್ರಾಫಿಕ್ ಸಮಸ್ಯೆಗೆ ಯಾವಾಗ ಮುಕ್ತಿ ಸಿಗಲಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆ
ಕೆಲ ಸ್ಥಳಗಳಲ್ಲಿ ಮಾತ್ರ ಪಾರ್ಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಕೋರ್ಟ್ ರಸ್ತೆಯಲ್ಲಿ ಹಲವಾರು ವಾಣಿಜ್ಯ ಮಳಿಗೆಗಳು, ಸರ್ಕಾರಿ ಕಚೇರಿಗಳು, ಜಿಲ್ಲಾ ನ್ಯಾಯಾಲಯ, ಹೋಟೆಲ್ಗಳು, ಡಾ.ಬಿ.ಆರ್.ಅಂಬೇಡ್ಕರ್ ಭವನ, ಪ್ರಸಿದ್ಧ ಶಿರಡಿ ಸಾಯಿ ಮಂದಿರವಿದ್ದು, ಎಪಿಎಂಸಿ ಮಾರುಕಟ್ಟೆ ಹಾಗೂ ಬೆಂಗಳೂರು&ಮೈಸೂರು ರಸ್ತೆಗೆ ನೇರ ಸಂಪರ್ಕ ಕಲ್ಪಿಸುವ ಮೈಸೂರು ಮಹಾರಾಜರ ಕಾಲದ ರಸ್ತೆಯಾದ ಕಾರಣ ಹೆಚ್ಚಿನ ಜನ ಈ ಮಾರ್ಗದಲ್ಲೇ ಸಂಚರಿಸುತ್ತಾರೆ. ರಸ್ತೆ ಕಿರಿದಾಗಿರುವುದರಿಂದ ನಿಗದಿತ ಜಾಗದಲ್ಲಿ ವಾಹನ ನಿಲ್ಲಿಸಲಾಗದೆ ಕೆಲವರು ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಅರ್ಧಕ್ಕಿಂತ ಹೆಚ್ಚು ಭಾಗ ವಾಹನ ನಿಲುಗಡೆಗೆ ಬಳಕೆಯಾಗುತ್ತಿದೆ. ಉಳಿದ ಕಿರಿದಾದ ಹಾದಿಯಲ್ಲಿ ದೊಡ್ಡ ವಾಹನಗಳು, ಆಂಬುಲೆನ್ಸ್ ಬಂದರೆ ಇಡೀ ರಸ್ತೆಯೇ ಬ್ಲಾಕ್ ಆಗುತ್ತದೆ. ಇದರಿಂದ ಪಾದಚಾರಿಗಳಿಗೂ ಸಮಸ್ಯೆಯಾಗುತ್ತಿದೆ. ಪೊಲೀಸರು ಒಂದೆಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಜಿಲ್ಲಾ ಕೇಂದ್ರ ರಾಮನಗರದಲ್ಲಿ ಸಂಚಾರ ಠಾಣೆ ಇದೆ, ಅಧಿಕಾರಿ, ಸಿಬ್ಬಂದಿಯೂ ಇದ್ದಾರೆ. ಐಜೂರು ಸರ್ಕಲ್, ಮುಖ್ಯರಸ್ತೆಯ ಬಲಮುರಿ ಗಣಪತಿ ದೇವಾಲಯ ರಸ್ತೆ, ಪಿಡಬ್ಲು$್ಯಡಿ ಸರ್ಕಲ್ ಬಿಟ್ಟರೆ ಕೋರ್ಟ್ ರಸ್ತೆ, ಹಳೇ ಬಸ್ ನಿಲ್ದಾಣ, ವಿಜಯನಗರ ರಸ್ತೆ, ವಾಟರ್ ಟ್ಯಾಂಕ್ ಸರ್ಕಲ್, ರೈಲ್ವೆ ನಿಲ್ದಾಣ ಸರ್ಕಲ್, ಎಪಿಎಂಸಿ ಬಳಿ, ಕನಕಪುರ ಸರ್ಕಲ್, ಕೆಂಪೇಗೌಡ ಸರ್ಕಲ್, ರಾಯರದೊಡ್ಡಿ ಸರ್ಕಲ್, ವಿವೇಕಾನಂದನಗರ ಸರ್ಕಲ್ ಮತ್ತಿತರ ಪ್ರಮುಖ ಸ್ಥಳಗಳಲ್ಲಿ ಸಂಚಾರ ಪೊಲೀಸರ ಸುಳಿವಿರುವುದಿಲ್ಲ. ಇದೇ ಕಾರಣಕ್ಕೆ ಸದರಿ ಸ್ಥಳಗಳಲ್ಲಿ ಹೆಚ್ಚು ಸಂಚಾರ ಸಿಕ್ಕು ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಅರಿವು ಮೂಡಿಸಿ, ಬೀಟ್ ನಿಯೋಜಿಸಿ
ಸಂಚಾರ ಪೊಲೀಸರು ದಂಡ ಹಾಕಲು ಮಾತ್ರ ಸೀಮಿತವಾಗದೆ, ಪ್ರಮುಖ ರಸ್ತೆಗಳಲ್ಲಿ ಕಾಯಂ ಸಿಬ್ಬಂದಿ ನೇಮಿಸಿ ಸಂಚಾರ ದಟ್ಟಣೆ ನಿಯಂತ್ರಿಸಬೇಕು, ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕೋರ್ಟ್, ರೈಲ್ವೆ ನಿಲ್ದಾಣ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ನಿಲ್ಲಿಸುವುದನ್ನು ನಿಷೇಧಿಸಿ, ದಿನ ಬಿಟ್ಟು ದಿನ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ನಿಗದಿತ ಸ್ಥಳ ಗುರುತಿಸಬೇಕು. ಸಂಚಾರ ನಿಯಮ ಉಲ್ಲಂಸಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವವರ ವಿರುದ್ಧ ವೀಲಿಂಗ್ ಲಾಕ್ ದಂಡ ವಿಧಿಸಬೇಕು. ಸಂಜೆ 5ರಿಂದ ರಾತ್ರಿ 9ರವರೆಗೆ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಕಡ್ಡಾಯವಾಗಿ ಸಂಚಾರ ಪೊಲೀಸರು ಮೊಕ್ಕಾಂ ಹೂಡಿ ಸಂಚಾರ ಸುಗಮಗೊಳಿಸಬೇಕು.
"
ಕೋರ್ಟ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ನಿತ್ಯ ಸಂಚಾರ ಸಿಕ್ಕು ಉಂಟಾಗುತ್ತಿದೆ. ಆದರೂ ಸಂಚಾರ ಪೊಲೀಸರ ಸುಳಿವೇ ಇರುವುದಿಲ್ಲ. ನೋ&ಪಾರ್ಕಿಂಗ್ ಬೋರ್ಡ್ಗಳಿದ್ದರೂ ಜನ ಕ್ಯಾರೇ ಎನ್ನುತ್ತಿಲ್ಲ. ಪೊಲೀಸರು ಅಗತ್ಯ ಕ್ರಮ ಕೈಗೊಂಡು ರಸ್ತೆಯ ಒಂದು ಭಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಿದರಷ್ಟೇ ಅಡ್ಡಾದಿಡ್ಡಿ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಸಿಗುವುದು. ಇದರಿಂದ ನಗರಸಭೆಯ ಸುಂದರ ನಗರದ ಕನಸು ನನಸಾಗಲು ಸಾಧ್ಯ.
— > ಮಾವಿನಸಸಿ ವೆಂಕಟೇಶ್, ರಾಮನಗರ.
"
ನಗರದಲ್ಲಿ ವಾಣಿಜ್ಯ ಪ್ರದೇಶಗಳನ್ನು ಗುರುತಿಸಿ ಅಂತಹ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಜತೆಗೆ ತಿಳಿವಳಿಕೆ ಫಲಕ ಹಾಕಲಾಗಿದೆ. ಕೋರ್ಟ್ ರಸ್ತೆ, ರೈಲ್ವೇ ಸ್ಟೇಷನ್ ರಸ್ತೆಗಳಲ್ಲಿ ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
— > ರಮೇಶ್, ನಗರ ವೃತ್ತ ನಿರೀಕ್ಷಕರು, ರಾಮನಗರ.