ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ನೇರಳೆಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಸಂಸದ ಡಾ. ಸಿ. ಎನ್. ಮಂಜುನಾಥ್ ಚಾಲನೆ ನೀಡಿದರು.ಶಿಬಿರದ ಮುಖ್ಯಸ್ಥ ಮನು ಗಂಗಾಧರಯ್ಯ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಶ್ವೇತಾ , ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರ ಜಗನಾಥ್ ಗೌಡ, ಸಂಕಿಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್ ಇತರರು ಇದ್ದರು. 
ಬೆಂಗಳೂರು ದಕ್ಷಿಣ

ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿ ಅಗತ್ಯ

ಸಂಸದ ಡಾ. ಸಿ. ಎನ್. ಮಂಜುನಾಥ್ ಹೇಳಿಕೆ

ಮಾಗಡಿ : ರೈತರು ದೇಶದ ಸೂಪರ್ ಸ್ಟಾರ್‌ಗಳು, ಆರೋಗ್ಯಕರ ಜೀವನಕ್ಕೆ ಸಾವಯವ ಕೃಷಿ ಅತ್ಯಗತ್ಯ ಎಂದು ಸಂಸದ ಡಾ. ಸಿ. ಎನ್. ಮಂಜುನಾಥ್ ತಿಳಿಸಿದರು.

ತಾಲೂಕಿನ ತಿಪ್ಪಸಂದ್ರ ಹೋಬಳಿ ನೇರಳೆಕೆರೆ ಗ್ರಾಮದಲ್ಲಿ ಮಂಗಳವಾರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ದೇಶದ ಜನಸಂಖ್ಯೆಯ ದೊಡ್ಡ ಭಾಗದ ಜೀವನೋಪಾಯವು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಅವಲಂಬಿಸಿದೆ. ದೇಶದ ಆರ್ಥಿಕ ಪ್ರಗತಿಯಲ್ಲಿ ರೈತರ ಕೊಡುಗೆ ಅಪಾರವಾಗಿದೆ. ರೈತರು ಕೇವಲ ಆಹಾರ ಉತ್ಪಾದಕರು ಮಾತ್ರವಲ್ಲ, ದೇಶದ ಅನ್ನದಾತರು ಮತ್ತು ನಿಜವಾದ ಸೂಪರ್ ಸ್ಟಾರ್‌ಗಳು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವು ಆಹಾರದ ಕೊರತೆಯನ್ನು ಎದುರಿಸಿ ವಿದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿತ್ತು. ಆದರೆ, ಇಂದು ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ತಂತ್ರಜ್ಞಾನ, ನೀರಾವರಿ ಸೌಲಭ್ಯ, ಸಂಶೋಧನೆ ಮತ್ತು ರೈತರ ನಿರಂತರ ಪರಿಶ್ರಮದಿಂದ ಭಾರತವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ಈ ಪ್ರಗತಿಯ ಹಿಂದೆ ರೈತರ ಬೆವರಿನ ಪರಿಶ್ರಮ ಹಾಗೂ ಕೃಷಿ ವಿಜ್ಞಾನಿಗಳ ಸಂಶೋಧನೆಯಿದೆ ಎಂದರು.

ಯೋಜನೆಗಳು: ರೈತರ ಆದಾಯ, ಕೃಷಿ ಉತ್ಪಾದಕತೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅರ್ಹ ರೈತ ಕುಟುಂಬಗಳಿಗೆ ನೇರ ಆರ್ಥಿಕ ನೆರವು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ನೈಸರ್ಗಿಕ ವಿಕೋಪಗಳು ಮತ್ತು ಇತರ ಅಧಿಸೂಚಿತ ಅಪಾಯಗಳಿಂದ ಉಂಟಾಗುವ ಬೆಳೆ ನಷ್ಟಕ್ಕೆ ವಿಮಾ ರಕ್ಷಣೆ, ಕಿಸಾನ್ ಕ್ರೆಡಿಟ್ ಕಾರ್ಡ್ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಕಾಲದಲ್ಲಿ ಸಾಲ ಸೌಲಭ್ಯ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ನೀರಿನ ಸಮರ್ಥ ಬಳಕೆ ಮತ್ತು ನೀರಾವರಿ ಸೌಲಭ್ಯಗಳ ಅಭಿವೃದ್ಧಿಗೆ ಉತ್ತೇಜನ, ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ, ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಸಮತೋಲಿತ ಗೊಬ್ಬರ ಬಳಕೆ ಮತ್ತು ಉತ್ತಮ ಕೃಷಿ ಪದ್ಧತಿಗಳಿಗೆ ಮಾರ್ಗದರ್ಶನ, ಇ-ನಾಮ್ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಂಪರ್ಕ ಮತ್ತು ಪಾರದರ್ಶಕ ವ್ಯಾಪಾರಕ್ಕೆ ಡಿಜಿಟಲ್ ವೇದಿಕೆ, ಈ ಯೋಜನೆಗಳ ಪ್ರಯೋಜನಗಳನ್ನು ಅರ್ಹ ರೈತರು ಸಮರ್ಪಕವಾಗಿ ಪಡೆದುಕೊಳ್ಳಬೇಕು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ವಿಧಾನಗಳು ಹಾಗೂ ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ಪಾದಕತೆ ಹೆಚ್ಚಿಸಬೇಕು ಎಂದು ಡಾ. ಮಂಜುನಾಥ್ ತಿಳಿಸಿದರು.

ಕೃಷಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು:

ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ಕೃಷಿ ವಿದ್ಯಾರ್ಥಿಗಳಿಗೆ ಗ್ರಾಮೀಣ ಪ್ರದೇಶಗಳ ವಾಸ್ತವಿಕ ಕೃಷಿ ಪರಿಸ್ಥಿತಿ ಅರಿತುಕೊಳ್ಳಲು, ರೈತರ ಸಮಸ್ಯೆ ತಿಳಿದುಕೊಳ್ಳಲು ಮತ್ತು ವೈಜ್ಞಾನಿಕ ಕೃಷಿ ಜ್ಞಾನವನ್ನು ರೈತರಿಗೆ ತಲುಪಿಸಲು ಉತ್ತಮ ವೇದಿಕೆಯಾಗಿದೆ. ಕೃಷಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಕೇವಲ ಪದವಿ ಪಡೆಯುವುದಕ್ಕೆ ಸೀಮಿತಗೊಳಿಸದೆ, ರೈತರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬಳಸಿಕೊಳ್ಳಬೇಕು ಎಂದು ಸಂಸದರು ಸಲಹೆ ನೀಡಿದರು.

ರೈತರು, ಕೃಷಿ ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ಸರ್ಕಾರದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ರೈತರ ಕಲ್ಯಾಣ ಮತ್ತು ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸುಸ್ಥಿರ ಕೃಷಿ ಪದ್ಧತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು, ಕೃಷಿ ವಿಜ್ಞಾನಿಗಳು, ರೈತರು ಹಾಗೂ ಸ್ಥಳೀಯ ಮುಖಂಡರು ಇದ್ದರು.

ಆರೋಗ್ಯಕರ ಜೀವನಕ್ಕೆ ಆದ್ಯತೆ ನೀಡಲಿ: ಇಂದಿನ ಜೀವನಶೈಲಿಯಲ್ಲಿ ಆರೋಗ್ಯದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ನಾವು ದೀರ್ಘಕಾಲ ಆರೋಗ್ಯಕರವಾಗಿ ಬದುಕಬೇಕಾದರೆ ಪೌಷ್ಟಿಕ ಆಹಾರ ಸೇವನೆ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡುವ, ರಾಸಾಯನಿಕಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡುವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಪ್ರಯತ್ನಗಳು ಅತ್ಯಂತ ಮುಖ್ಯವಾಗಿವೆ ಎಂದು ಸಂಸದರು ತಿಳಿಸಿದರು. ರೈತರು ದೇಶದ ನಿಜವಾದ ಸೂಪರ್ ಸ್ಟಾರ್‌ಗಳು ಅವರು ಬೆಳೆದ ಅನ್ನದಿಂದಲೇ ಇಡೀ ದೇಶದ ಜನರ ಬದುಕು ಸಾಗುತ್ತಿದೆ. ರೈತರನ್ನು ಗೌರವಿಸುವುದು, ಕೃಷಿಯನ್ನು ಉಳಿಸುವುದು ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ಆಹಾರವನ್ನು ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.