ಕನಕಪುರ ಸಾರಿಗೆ ಡಿಪೋದಲ್ಲಿ ಚಾಲಕ ಶಿವಕುಮಾರ್ ಮೇಲೆ ಹಲ್ಲೆಯಾಗುತ್ತಿರುವ ದೃಶ್ಯ.
ಕನಕಪುರ: ಕನಕಪುರದಲ್ಲಿನ ರಾಜ್ಯ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿನ ಅಕ್ರಮಗಳನ್ನು ಪ್ರಶ್ನಿಸಿದ ಸಂಸ್ಥೆಯ ಚಾಲಕನ ಮೇಲೆ ಟಕದ ವ್ಯವಸ್ಥಾಪಕ ಸಚಿನ್ ಸಮ್ಮುಖದಲ್ಲಿಯೇ ಸಹೋದ್ಯೋಗಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಹಲ್ಲೆಯ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಚಾಲಕ ಶಿವಕುಮಾರ್ ಮೇಲೆ ಸಹೋದ್ಯೋಗಿಗಳಾದ ಕೆ.ಟಿ.ಕುಮಾರ್ (ಚಾಲಕ), ದೇವರಾಜು, ಮುನಿಬಸವರಾಜು ಅಲಿಯಾಸ್ ಹರೀಶ್, ವಿ.ಆರ್.ಶಿವಮೂರ್ತಿ(ನಿರ್ವಾಹಕರು) ಎಂಬುವವರು ಟಕ ವ್ಯವಸ್ಥಾಪಕರ ಸಮ್ಮುಖದಲ್ಲಿಯೇ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸಿ, ಒದ್ದು, ಪ್ರಾಣ ಬೆದರಿಕೆ ಹಾಕಿದ್ದಾರೆ. ಸ್ಥಳದಲ್ಲಿದ್ದ ಟಕ ವ್ಯವಸ್ಥಾಪಕ ಸಚಿನ್ ಹಲ್ಲೆ ತಡೆಯದೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಲಕ ಶಿವಕುಮಾರ್ನನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೆಎಸ್ಆರ್ಟಿಸಿ ಜಿಲ್ಲಾ ಅಧಿಕಾರಿ ಪುರುಷೋತ್ತಮ್, ಡಿಸಿಒ ಶ್ರೀನಿವಾಸ್, ಡಿಎಂಇ ಮುತ್ತುರಾಜು, ಕೆಎಸ್ಆರ್ಟಿಸಿ ಕಾರ್ಮಿಕ ಇಲಾಖೆ ಅಧಿಕಾರಿ ಶೇಖರ್ ಸ್ಥಳಕ್ಕೆ ಭೇಟಿ ನೀಡಿ, ಚಾಲಕನಿಗೆ ಸಾಂತ್ವನ ಹೇಳಿದ್ದಾರೆ.
ಚಾಲಕ ಶಿವಕುಮಾರ್ ಪಾಳಿ ಆಧಾರದಲ್ಲಿ ಕೆಲಸ ನಿರ್ವಹಿಸುವ ಬಗ್ಗೆ ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದರು. ಜತೆಗೆ ನಿಗದಿತ ರೂಟ್ ನೀಡುವ ವಿಚಾರದಲ್ಲಿ ಹಣ ನೀಡಿದವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಲ್ಲದೇ ಟಕದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಶುಕ್ರವಾರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಶಿವಕುಮಾರ್ ಅವರನ್ನು ಟಕ ವ್ಯವಸ್ಥಾಪಕ ಸಚಿನ್ ಕರೆದು ಮಾತನಾಡುವ ನೆಪದಲ್ಲಿ ನಿಲ್ಲಿಸಿಕೊಂಡಿದ್ದರು. ಇದೇ ವೇಳೆ ಖಾಸಗಿ ಕಾರಿನಲ್ಲಿ ಬಂದ ನಾಲ್ವರು ಮನಬಂದಂತೆ ಶಿವಕುಮಾರ್ಗೆ ಥಳಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ ಎನ್ನಲಾಗಿದೆ.