ಕನಕಪುರ ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ಲೋಕಾಯುಕ್ತ ಪ್ರಕರಣಗಳ ವಿಚಾರಣೆ, ವಿಲೇವಾರಿ ಕಾರ್ಯಕ್ರಮವನ್ನು ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ ಅವರು ಉದ್ಘಾಟಿಸಿದರು. ಕಿರಣ್​ ಪಾಟೀಲ್​, ಸವಿತಾ, ಸ್ನೇಹಾ ಉಪಸ್ಥಿತರಿದ್ದರು. 
ಬೆಂಗಳೂರು ದಕ್ಷಿಣ

ಅಧಿಕಾರಿಗಳೇ, ಕರ್ತವ್ಯ ಲೋಪ ಎಸಗಿದರೆ ಶಿಸ್ತು ಕ್ರಮ

ಕನಕಪುರ: ಕಳೆದ ಎರಡುದಿನಗಳಿಂದ ತಾಲೂಕಿನ ಪ್ರವಾಸದಲ್ಲಿದ್ದ ಉಪಲೋಕಾಯುಕ್ತ ಣೀಂದ್ರ ಅವರು ಮೊದಲ ದಿನವಾದ ಶುಕ್ರವಾರ ವಿವಿಧ ಗ್ರಾಪಂಗಳಿಗೆ ಭೇಟಿ ನೀಡಿ, ಮೂಲಸೌಕರ್ಯ, ದಾಖಲೆ ನಿರ್ವಹಣೆ, ಸ್ವಚ್ಛತೆ ಪರಿಶೀಲಿಸಿ, ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮವಹಿಸುವ ಎಚ್ಚರಿಕೆ ನೀಡಿದ್ದರು.
ಎರಡನೇ ದಿನವಾದ ಶನಿವಾರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಕುಂದುಕೊರತೆ ಆಲಿಸಿದರು. ಬಳಿಕ ನಗರದ ಅಂಬೇಡ್ಕರ್​ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಇಲಾಖೆಗೆ ಸಲ್ಲಿಕೆಯಾಗಿದ್ದ ಪ್ರಕರಣಗಳನ್ನು ವಿಚಾರಿಸಿ, ಅವುಗನ್ನು ತ್ವರಿತಗತಿಯಲ್ಲಿ ವಿಲೇ ಮಾಡುವಂತೆ ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಉಪಲೋಕಾಯುಕ್ತರು, ಆಡಳಿತಾತ್ಮಕ ಹಾಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಕನಕಪುರ ತಾಲೂಕನ್ನು ಮಾದರಿ, ಭ್ರಷ್ಟಾಚಾರಮುಕ್ತಗೊಳಿಸಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಆರ್​ಆರ್​ಟಿ ಪ್ರಕರಣಗಳಲ್ಲಿ ಜನರನ್ನು ಸತಾಯಿಸಬಾರದು. ಸಮಯಕ್ಕೆ ಸರಿಯಾಗಿ ಆದೇಶ ಮಾಡಿ ಇಲ್ಲವಾದಲ್ಲಿ ಹಿಂಬರ ನೀಡಿ, ನೀವು ನೀಡುವ ಹಿಂಬರಹ ಸಮರ್ಪಕವಾಗಿ ಇಲ್ಲದೇ ಹೋದಲ್ಲಿ ನಿಮ್ಮನ್ನೇ ಪ್ರಶ್ನಿಸಿ, ತಪ್ಪಿತಸ್ಥರನ್ನಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
15 ದಿನಗಳ ಗಡುವು
ಹಾರೋಹಳ್ಳಿ ಮುಖ್ಯರಸ್ತೆಯನ್ನು ಒತ್ತುವರಿ ಮಾಡಿ ವಿದ್ಯಾಸಂಸ್ಥೆಯೊಂದು ಬೃಹತ್ತ ಕಟ್ಟಡ ನಿರ್ಮಿಸಿರುವ ಬಗ್ಗೆ ಕ್ರಮಕೈಗೊಳ್ಳುವಂತೆ ಲೋಕಾಯುಕ್ತ ಇಲಾಖೆ ರಾಮನಗರ ಜಿಲ್ಲಾಧಿಕಾರಿಗೆ ನೋಟಿಸ್​, ನೀಡಿ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪಪಂ ಮುಖ್ಯಾಧಿಕಾರಿ ಶ್ವೇತಾಬಾಯಿ ಅವರು ದಾಖಲಾತಿ ಕೋರಿ ವಿದ್ಯಾಸಂಸ್ಥೆಗೆ ನೋಟಿಸ್​ ಜಾರಿ ಮಾಡಿದ್ದರು. ಬಳಿಕ ಸ್ಥಳ ಪರಿಶೀಲಿಸಿದಾಗ ಹೆದ್ದಾರಿ ಒತ್ತುವರಿಮಾಡಿಕೊಂಡು, ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಯೋಜನಾ ನಿರ್ದೇಶಕರಿಗೆ ವರದಿ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ಜಯಕರ್ನಾಟಕ ಸಂಟನೆಯ ಗಿರೀಶ್​ ಅವರು ಉಪಲೋಕಾಯುಕ್ತರಿಗೆ ದೂರು ನೀಡಿದರು. ದೂರು ಪರಿಶೀಲಿಸಿದ ಉಪಲೋಕಾಯುಕ್ತರು, ಹೆದ್ದಾರಿಯನ್ನೇ ಒತ್ತುವರಿ ಮಾಡಿಕೊಂಡು, ಕಟ್ಟಡ ನಿರ್ಮಿಸಿದ್ದರೂ ಈವರೆಗೆ ಏಕೆ ಕ್ರಮವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡರಲ್ಲದೇ 15 ದಿನಗಳ ಒಳಗಾಗಿ ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಕಟ್ಟಡ ತೆರವುಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳೇ ಕಟ್ಟಡ ತೆರವುಗೊಳಿಸಬೇಕು ಎಂದು ಖಡಕ್​ ಎಚ್ಚರಿಕೆ ನೀಡಿದರು.
55 ಪ್ರಕರಣಗಳ ವಿಚಾರಣೆ
55 ಪ್ರಕರಣಗಳನ್ನು ಉಪಲೋಕಾಯುಕ್ತರು ವಿಚಾರಣೆ ನಡೆಸಿದ್ದು, ಅದರಲ್ಲಿ ಶೇ.80ರಷ್ಟು ಪ್ರಕರಣಗಳು ಗೋಮಾಳ ಒತ್ತುವರಿ, ಬೆಸ್ಕಾಂನವರು ಖಾಸಗಿ ಜಾಗಗಳಲ್ಲಿ ಟಿಸಿ ಅಳವಡಿಸಿರುವುದು, ಆರ್​ಆರ್​ಟಿ ಪ್ರಕರಣಗಳಲ್ಲಿ ಜನರನ್ನು ತಹಸೀಲ್ದಾರ್​ ನ್ಯಾಯಾಲಯಕ್ಕೆ ವಿನಃ ಕಾರಣ ಅಲೆದಾಡಿಸುವ ಬಗ್ಗೆ ಸಲ್ಲಿಕೆಯಾಗಿದ್ದವರು
ನಿರ್ಲಕ್ಷ್ಯ ಕೇಸು ದಾಖಲಿಸುವೆ.. ಎಚ್ಚರ!
ಶುಕ್ರುವಾರ ಸಂಜೆ ಕಲ್ಲಹಳ್ಳಿ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದ ಉಪಲೋಕಾಯುಕ್ತರು, ಪಂಚಾಯಿತಿ ಸುತ್ತಮುತ್ತಲಿನ ಅನಧಿಕೃತ ಕಟ್ಟಡ ಮತ್ತು ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲು ವಿಫಲವಾಗಿರುವುದು, ತೆರಿಗೆ ವಸೂಲಿ, ದಾಖಲೆ ನಿರ್ವಹಣೆಯಲ್ಲಿನ ರ್ನಿಲಕ್ಷ$್ಯ ಕಂಡು, ತೆರಿಗೆ ವಸೂಲಿ ಹಾಗೂ ಫಲಾನುಭವಿಗಳಿಗೆ ನೀಡಿರುವ ಸವಲತ್ತುಗಳ ಬಗ್ಗೆ ಉತ್ತರವಿಲ್ಲ, ಗ್ರಾಪಂ ವ್ಯಾಪ್ತಿಯಲ್ಲಿ 3 ಅನಧಿಕೃತ ಕಟ್ಟಡಗಳು, ಅಕ್ರಮ ಬಡಾವಣೆಗಳು ತಲೆ ಎತ್ತಿವೆ ಎನ್ನುತ್ತಿರಿ, ಹಾಗಾದರೆ ಅವುಗಳ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ ? ನಿಮ್ಮ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತೇವೆ ಎಂದು ಪಿಡಿಒ ಮುನಿಮಾರೇಗೌಡಗೆ ತರಾಟೆಗೆ ತೆಗೆದುಕೊಂಡರು. ಆಗ ನೋಟಿಸ್​ ನೀಡಿದ್ದೇವೆ, ಪೊಲೀಸರಿಗೆ ದೂರು ನೀಡುತ್ತೇವೆ ಎಂಬ ಪಿಡಿಒ ಉತ್ತರಕ್ಕೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು ನೀವು ಪಂಚಾಯತ್​ ರಾಜ್​ ಕಾಯ್ದೆಯನ್ನು ಸರಿಯಾಗಿ ಓದಿಕೊಂಡಿಲ್ಲ, ಕಚೇರಿಯಲ್ಲಿ ಕಳೆದ 6 ತಿಂಗಳಿನಿಂದ ಬ್ಯಾಂಕ್​ ವಹಿವಾಟಿನ ಸಮರ್ಪಕ ಮಾಹಿತಿ ಇಲ್ಲ, ತೆರಿಗೆ ವಸೂಲಿ, ಖರ್ಚು&ವೆಚ್ಚ, ಬರಬೇಕಾದ ಆದಾಯದ ವಿವರ ಸಮರ್ಪಕವಾಗಿಲ್ಲ. 30 ಲಕ್ಷ ರೂ. ಬಾಕಿ ಬರಬೇಕೆಂದು ದಾಖಲೆ ತೋರಿಸಿದ್ದೀರಿ, ಇದನ್ನು ವಸೂಲಿ ಮಾಡುವವರು ಯಾರು? ನಿಮಗೆ ಸಂಬಳ ಕೊಡುವುದು ಹೇಗೆ? ಸರ್ಕಾರ ನಡೆಸುವುದು ಹೇಗೆ? ನಿಮ್ಮ ವಿರುದ್ಧ ಮೊಕದಮ್ಮೆ ದಾಖಲಿಸಿ ತನಿಖೆನಡೆಸಿ, ಕ್ರಮಕೈಗೊಳ್ಳುತ್ತೇವೆ. ಜಿಪಂ ಸಿಇಒ ಹಾಗೂ ತಾಪಂ ಇಒ ಇಬ್ಬರೂ ಇದೊಂದು ಉತ್ತಮ ಪಂಚಾಯಿತಿ ಎಂದುಕೊಂಡು ಕರೆತಂದರು, ಆದರೆ ಇಲ್ಲಿ ಅಕ್ರಮವಾಗಿ ಲೇಔಟ್​ಗಳು ನಿರ್ಮಾಣಗೊಂಡಿವೆ. ದಾಖಲಾತಿ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಇದೊಂದೇ ಪಂಚಾಯಿತಿಯಲ್ಲಿ ಹೀಗಾದರೆ ಉಳಿದ ಪಂಚಾಯಿತಿಗಳ ಕಥೆ ಏನು? ಹತ್ತಾರು ಅಕ್ರಮಗಳು ನಡೆದಿರುವ ಸಂಶಯವಿದ್ದು, ಲೋಕಾಯುಕ್ತರಿಂದ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ನೀಡುವುದಾಗಿ ಉಪಲೋಕಾಯುಕ್ತರು ಎಚ್ಚರಿಸಿದರು.
ಪ್ರಾಧಿಕಾರ ಬದುಕಿದೆಯೋ?
ಬೆಂಗಳೂರು ರಸ್ತೆಯಲ್ಲಿರುವ ನಗರ ಪ್ರಾಧಿಕಾರಕ್ಕೆ ಭೆಟಿ ನೀಡಿದ ಉಪಲೋಕಾಯುಕ್ತರು,
ಪ್ರಾಧಿಕಾರದಲ್ಲಿ 63 ಅಕ್ರಮ ಲೇಔಟ್​ಗಳ ನಿರ್ಮಾಣದ ಮಾಹಿತಿ ಕೇಳಿ ಹೌಹಾರಿದರು. 2001ರಲ್ಲೇ ಪ್ರಾಧಿಕಾರ ಪ್ರಾರಂಭವಾಗಿದೆ, ಆದರೂ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಪ್ರಾಧಿಕಾರ ಬದುಕಿದೆಯೋ?, ಸತ್ತಿದೆಯೋ? ಎಂಬುದನ್ನು ಕಂಡು ಹಿಡಿಯಬೇಕಿದೆ. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಕೊಳಚೆ ಪ್ರದೇಶಕ್ಕಿಂತಲೂ ಕೆಟ್ಟದಾಗಿದೆ ಬಡಾವಣೆ
ಪ್ರಧಾನಮಂತ್ರಿ ಆವಾಸ್​ ಯೋಜನೆಯಡಿ ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಬಿಜಿಎಸ್​ ಬಡಾವಣೆಯ ಸ್ಥಿತಿಗತಿ ನೋಡಿದರೆ ದೇವರಿಗೆ ಪ್ರೀತಿ, ಇಲಾಖೆ ನಿಮಯದಂತೆ ಸರಿಯಾದ ನಿವೇಶನ, ಮನೆ ಹಂಚಿಕೆಯಾಗಿಲ್ಲ. ಬಡವರು, ಕೂಲಿ ಕಾರ್ಮಿಕರು, ಕಷ್ಟಪಟ್ಟು ವಾಸ ಮಾಡುತ್ತಿದ್ದಾರೆ. ಬಡಾವಣೆಯಲ್ಲಿ ಗಿಡ&ಗಂಟಿ ಬೆಳೆದಿವೆ. ಸ್ವಚ್ಛತೆ ಇಲ್ಲದೆ ಹಾವು ಚೇಳುಗಳು ಮನೆಮಾಡಿವೆ. ರಸ್ತೆ, ಚರಂಡಿ ಇಲ್ಲದೆ ಕೊಳಚೆ ಪ್ರದೇಶಕ್ಕಿಂತಲೂ ಕೆಟ್ಟದಾಗಿ ಕಾಣುತ್ತಿದೆ ಎಂದು ಲೋಕಾಯುಕ್ತರು ತೀವ್ರ ಬೇಸರ ವ್ಯಕ್ತಪಡಿಸಿದರು. ಬಡಾವಣೆ ಸಮೀಪದ ನತ್ಯಾಜ್ಯ ವಿಲೇವಾರಿ ಟಕಕ್ಕೂ ಭೇಟಿ ನೀಡಿದಾಗ ಒಣ ಕಸ, ಹಸಿ ಕಸ ಅಸರ್ಮಪಕ ನಿರ್ವಹಣೆ ಹಾಗೂ ಅಲ್ಲಿನ ವ್ಯವಸ್ಥೆಗಳನ್ನು ನೋಡಿ ಅಸಮಾಧಾನಗೊಂಡರು. ಟಕದ ಬಳಿಯೇ ರಾಜೀವ್​ಗಾಂಧಿ ವಸತಿ ನಿಲಯವಿದೆ, ಅಲ್ಲದೇ ನಗರವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. 2 ತಿಂಗಳ ಅವಧಿಯಲ್ಲಿ ಮತ್ತೆ ಭೇಟಿ ನೀಡುವೆ. ಅಷ್ಟರಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿದಿರಬೇಕು. ಇಲ್ಲದಿದ್ದರೆ ಕಠಿಣ ಕ್ರಮವಹಿಸಲಾಗುವುದು ಎಂದು ತಾಕೀತು ಮಾಡಿದರು.
ಲೋಕಾಯುಕ್ತ ನ್ಯಾಯಾಧೀಶ ಕಿರಣ್​, ನ್ಯಾಯಾಧೀಶೆ ಸವಿತಾ, ಜಿಲ್ಲಾಧಿಕಾರಿ ಯಶ್ವಂತ ವಿ.ಗುರುಕರ್​, ಜಿಪಂ ಸಿಇಒ ಅನ್ಮೋಲ್​ ಜೈನ್​, ಜಿಲ್ಲಾ ಲೋಕಾಯುಕ್ತ ವರಿಷ್ಠಾಧಿಕಾರಿ ಸ್ನೇಹಾ, ತಹಸೀಲ್ದಾರ್​ ಸಂಜಯ್​, ಡಿವೈಎಸ್​ಪಿ ಶಿವಪ್ರಸಾದ್​, ಸರ್ಕಲ್​ ಇನ್​ಸ್ಪೆಕ್ಟರ್​ಗಳಾದ ಸಂದೀಪ್​ ಕುಮಾರ್​, ವಿಜಯ್​ಕುಮಾರ್​, ಕೋಮಲ್​, ವಿಕಾಸ್​, ಇದ್ದರು.
ತಾಲೂಕು ಆಸ್ಪತ್ರೆಗೂ ಭೇಟಿ
ಶನಿವಾರ ಬೆಳ್ಳಂ ಬೆಳಗ್ಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಫಣೀಂದ್ರ ಅವರು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಧಿಡೀರ್​ ಭೇಟಿ ನೀಡಿ, ಅನೈರ್ಮಲ್ಯ, ವೈದ್ಯರ ಹಾಜರಾತಿ, ವಾರ್ಡ್​ಗಳು, ಶೌಚಗೃಹ, ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ಪರಿಶೀಲಿಸಿದರು. ಈ ವೇಳೆ ಸಮಸ್ಯೆ ಹೇಳಿಕೊಂಡ ರೋಗಿಗಳು, ಆಸ್ಪತ್ರೆ ಹೊರಭಾಗದಲ್ಲಿ ಬೀದಿ ದೀಪ ಇಲ್ಲ. ಆಸ್ಪತ್ರೆ ಬಳಿ ಕೊಳಚೆ ನೀರು ದುರ್ನಾತ ಬಿಡುತ್ತಿದೆ. ಆವರಣದಲ್ಲಿ ಗಂಧದ ಮರಗಳು ಹಾಗೂ ಕೆಲ ಸಾಮಗ್ರಿಗಳು ಕಳ್ಳತನವಾಗಿವೆ. ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿ ಸುಮ್ಮನಾಗುತ್ತಾರೆ ಎಂದು ಸಾರ್ವಜನಿಕರು ದೂರಿದರು.
ಮನವಿಗೆ ಸ್ಪಂದಿಸಿದ ಲೋಕಾಯುಕ್ತ ಫಣೀಂದ್ರ ಅವರು ಫಿಟ್​ಗುಂಡಿ ನಿರ್ಮಾಣ, ಮ್ಯಾನ್​ಹೋಲ್​ಗೆ ಪೈಪ್​ ಅಳವಡಿಕೆ, ಯುಜಿಡಿ ಸಂಪರ್ಕ ಕಲ್ಪಿಸಲು ನಗರಸಭೆ ಅಧಿಕಾರಿಗಳಿಗೆ ಸೂಚಿಸುವ ಭರವಸೆ ನೀಡಿದರು.