ಕನಕಪುರ ತಾಲೂಕು ಕೋಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಡಿಪುರ ಕೆರೆ ಅಭಿವೃದ್ಧಿಯಲ್ಲಿ ಅಕ್ರಮದ ಆರೋಪದ ಹಿನ್ನೆಲೆ ಲೋಕಾಯುಕ್ತ ಸರ್ಕಲ್ ಇನ್ಸ್ಪೆಕ್ಟರ್ಗಳಾದ ಸಂದೀಪ್ಕುಮಾರ್, ರು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರು.
ಕನಕಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ತಾಲೂಕಿನ ಕೋಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿರುವುದು ಮತ್ತು ಅಕ್ರಮ ನಡೆದಿರುವ ಆರೋಪದ ಹಿನ್ನೆಲೆ ಸ್ವಯಂ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೇ ಕಾಮಗಾರಿ ಸಂಬಂಧಿತ ಕಡತಗಳನ್ನು ಪರಿಶೀಲಿಸಿದರು.
ಕೋಡಿಪುರ, ಹಳ್ಳಿಮರದೊಡ್ಡಿ, ದೊಡ್ಡಕೆಬ್ಬಳ್ಳಿ, ಗ್ರಾಮದಲ್ಲಿ 2020&21ನೇ ಸಾಲಿನಲ್ಲಿ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು. ಅಕ್ರಮದ ತನಿಖೆಗೆ ಲೋಕಾಯುಕ್ತರು ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದರು.
ಲೋಕಾಯುಕ್ತ ಸರ್ಕಲ್ ಇನ್ಸ್ಪೆಕ್ಟರ್ ಸಂದೀಪ್ಕುಮಾರ್ ನೇತೃತ್ವ ತಂಡ ಬುಧವಾರ ಕೋಡಿಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ 18 ಕಾಮಗಾರಿಗಳ ಲೋಪದೋಷಗಳನ್ನು ಪರಿಶೀಲಿಸಿದರು. ನಾಲಾ ಅಭಿವೃದ್ಧಿ, ಕೆರೆ ಹೂಳೆತ್ತುವುದು, ಕೆರೆ ಹೂಳೆತ್ತುವಾಗ ಮಣ್ಣು ತೆಗೆದಿರುವ ಬಗ್ಗೆ, ಅದನ್ನು ವಿನಿಮಯ ಮಾಡಿದ ಸ್ಥಳ, ನೀರು ಕೆರೆಯಲ್ಲಿ ಇರುವಾಗಲೋ ಅಥವಾ ಇಲ್ಲದಿರುವಾಗಲೋ ಕಾಮಗಾರಿ ಮಾಡಲಾಗಿದೆಯೇ?, ಕಾಮಗಾರಿಗಳನ್ನು ಹೇಗೆ ಮಾಡಿದ್ದೀರಿ? ಪಿಚಿಂಗ್ ಕಾಮಗಾರಿ ಮಾಡುವಾಗ ಬಳಸಿರುವ ಕಲ್ಲುಗಳು ಹೊಸತೋ ಅಥವಾ ಹಳೆಯ ಕಲ್ಲುಗಳೇ ? ಅಥವಾ ಯಾವುದಾದರೂ ಮರುಬಳಕೆ ಮಾಡಲಾಗಿದೆಯೇ ? ಹೀಗೆ ಕಾಮಗಾರಿಗಳಲ್ಲಿ ಕೇಳಿ ಬಂದ ದೂರುಗಳ ಬಗ್ಗೆ ಮಾಹಿತಿ ಪಡೆದರು.
ಇನ್ನು ನರೇಗಾದಡಿ ಕೆರೆ ಅಭಿವೃದ್ಧಿ ಕೈಗೆತ್ತಿಕೊಂಡ ಕಾರಣ ಕಾಮಗಾರಿಯು ಕೂಲಿ ಕಾರ್ಮಿಕರಿಂದ ಕೆಲಸ ಆಗಿದೆಯೇ ಅಥವಾ ಜೆಸಿಬಿ ಯಂತ್ರ ಬಳಸಲಾಗಿದೆಯೇ?, ಸ್ಥಳದಲ್ಲಿ ಜಿಪಿಎಸ್ ಫೋಟೋ ತೆಗೆದಿರುವ ಬಗ್ಗೆ ಸ್ಥಳ ಪರಿಶೀಲಿಸಿ ಕಾಮಗಾರಿಗಳ ಸ್ಥಳದಲ್ಲಿ ನಾಮಫಲಕಗಳು ಇಲ್ಲದೆ ನಾಪತ್ತೆಯಾಗಿರುವ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಪಡೆದರು.
ಲೋಕಾಯುಕ್ತ ಸರ್ಕಲ್ ಇನ್ಸ್ಪೆಕ್ಟರ್ ರು, ತಾಲೂಕು ಪಂಚಾಯಿತಿ ಇಒ ಅವಿನಾಶ್, ಹಾಲಿ ಪಿಡಿಒ ಶ್ರೀಧರ್, ಈ ಹಿಂದಿನ ಪಿಡಿಒ ಕೃಷ್ಣಮೂರ್ತಿ ಹಾಗೂ ಇತರ ಅಧಿಕಾರಿಗಳು, ಸಿಬ್ಬಂದಿ ಇದ್ದರು.
18 ಕಾಮಗಾರಿಗಳ ಮಾಹಿತಿ ಕಲೆ ಹಾಕಿದ ಲೋಕಾಯುಕ್ತ ಅಧಿಕಾರಿಗಳಿಗೆ ನಡೆದಿರುವ ಕಾಮಗಾರಿ, ದಾಖಲಾತಿಗಳನ್ನು ಪರಿಶೀಲಿಸಿದಾಗ ನಿರ್ವಹಿಸಿದ ಕಾಮಗಾರಿ, ದಾಖಲಾತಿಗಳಲ್ಲಿ ವ್ಯತ್ಯಾಸ, ಲೋಪದೋಷ ಕಂಡುಬಂದಿದೆ ಎನ್ನಲಾಗಿದೆ.