ಮಾಗಡಿ: ಭಾರತ ಸರ್ಕಾರದ ಮಹತ್ವಾಕಾಂ ಪ್ರಧಾನಮಂತ್ರಿ ಪೋಷಣ್ ಅಭಿಯಾನ ಸದ್ಯ ಬೇಳೆ ಮತ್ತು ಅಡುಗೆ ಎಣ್ಣೆ ಕೊರತೆಯಿಂದಾಗಿ ತಾಲೂಕಿನಲ್ಲಿ ಹಳ್ಳ ಹಿಡಿಯುವ ಲಕ್ಷಣಗಳು ಗೋಚರಿಸಿವೆ.
ಶಾಲಾ ತರಗತಿಗಳು ಪ್ರಾರಂಭವಾಗಿ ತಿಂಗಳು ಕಳೆದರೂ ಶಿಕ್ಷಣ ಇಲಾಖೆಯಿಂದ ಅಗತ್ಯ ದಿನಸಿ ಸಾಮಗ್ರಿಗಳು ಪೂರೈಕೆಯಾಗದ ಕಾರಣ, ಹಲವು ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಅಂಗಡಿಗಳಿಗೆ ಅಲೆಯುತ್ತಿರುವ ಶಿಕ್ಷಕರು: ಅಕ್ಷರ ದಾಸೋಹ ಯೋಜನೆಯಡಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಲು ಬೇಳೆ ಮತ್ತು ಎಣ್ಣೆ ಇಲ್ಲದಿರುವುದರಿಂದ, ಶಿಕ್ಷಕರು ಸ್ಥಳಿಯ ಅಂಗಡಿಗಳಲ್ಲಿ ಸ್ವಂತ ಹಣ ಅಥವಾ ಸಾಲದ ರೂಪದಲ್ಲಿ ದಿನಸಿ ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಹೇಗೋ ಪರಿಸ್ಥಿತಿ ನಿಭಾಯಿಸುತ್ತಿದ್ದರೂ, ಹೆಚ್ಚಿನ ಮಕ್ಕಳಿರುವ ಶಾಲೆಗಳಿಗೆ ನಿತ್ಯ ಸ್ವಂತ ಖರ್ಚಿನಲ್ಲಿ ದಿನಸಿ ಹೊಂದಿಸುವುದು ಶಿಕ್ಷಕರಿಗೆ ತಲೆನೋವಾಗಿದೆ.
ಟೆಂಡರ್ ವಿಳಂಬವೇ ಕಾರಣ: ಪ್ರತಿ ವರ್ಷ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್ಎಸ್ಸಿ) ಮೂಲಕ ಶಾಲೆಗಳಿಗೆ ಬೇಳೆ ಹಾಗೂ ಎಣ್ಣೆ ಸರಬರಾಜು ಮಾಡಲಾಗುತ್ತದೆ. ಆದರೆ, ಈ ಬಾರಿ ಟೆಂಡರ್ ಪ್ರಕ್ರಿಯೆ ವಿಳಂಬವಾಗಿರುವುದರಿಂದ ರಾಜ್ಯಾದ್ಯಂತ ದಿನಸಿ ಪೂರೈಕೆ ಸ್ಥಗಿತಗೊಂಡಿದೆ. ಟೆಂಡರ್ ಅಂತಿಮಗೊಂಡು, ಸಾಮಗ್ರಿಗಳನ್ನು ಖರೀದಿಸಿ, ಗುಣಮಟ್ಟ ಪರೀಸಿದ ನಂತರ ಶಾಲೆಗಳಿಗೆ ವಿತರಿಸಲು ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು.
ಕಳೆದ ವರ್ಷ ಕೆಜಿಗೆ 60 ರೂಪಾಯಿಯಂತೆ ಖರೀದಿಸಿದ್ದ ಬೇಳೆಯಲ್ಲಿ ಕೀಟಗಳು ಕಂಡುಬಂದಿದ್ದರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಈ ಬಾರಿ ಗುಣಮಟ್ಟದ ಬೇಳೆ ಖರೀದಿಸಲು ಮುಂದಾಯಿತು. ಆದರೆ, ಟೆಂಡರ್ನಲ್ಲಿ ಪೂರೈಕೆದಾರರು ಕೆಜಿಗೆ 100 ರೂ.ಗಿಂತ ಅಧಿಕ ದರ ನಮೂದಿಸಿದ್ದರಿಂದ ಪ್ರಕ್ರಿಯೆ ಮತ್ತಷ್ಟು ತಡವಾಯಿತು. ಸದ್ಯ ಸುಮಾರು 83 ರೂ.ದರದಲ್ಲಿ ಗುಣಮಟ್ಟದ ಬೇಳೆ ಪೂರೈಕೆಗೆ ಒಪ್ಪಿಗೆ ನೀಡಿದ್ದರೂ, ವಿತರಣೆ ಇನ್ನೂ ಆರಂಭವಾಗಿಲ್ಲ.
ಅಡುಗೆ ಎಣ್ಣೆ ಪೂರೈಕೆಯೂ ಸ್ಥಗಿತ
ಕಳೆದ ವರ್ಷ ಲೀಟರ್ಗೆ ಸುಮಾರು 160 ರೂ. ದರದಲ್ಲಿ ಎಣ್ಣೆ ಖರೀದಿಸಲಾಗಿತ್ತು. ಈ ಬಾರಿಯೂ ಹೊಸ ಪೂರೈಕೆದಾರರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಎಣ್ಣೆ ವಿತರಣೆಯೂ ಸಂಪೂರ್ಣ ವಿಳಂಬವಾಗಿದೆ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಶಾಲೆಗಳಿಗೆ ನೇರವಾಗಿ ಹಣ ಬಿಡುಗಡೆ ಮಾಡಿದರೆ ಸ್ಥಳಿಯವಾಗಿಯೇ ಎಣ್ಣೆ ಖರೀದಿಸಬಹುದು ಎಂಬುದು ಶಿಕ್ಷಕರ ಅಭಿಪ್ರಾಯ. ಆದರೆ, ಅದಕ್ಕೆ ಬೇಕಾದ ಅನುದಾನ ಬಿಡುಗಡೆಯಾಗದ ಕಾರಣ ಶಿಕ್ಷಕರು ಸ್ವಂತ ಹಣ ಖರ್ಚುಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ಮಕ್ಕಳ ಹಸಿವು ನೀಗಿಸುವ ಬಿಸಿಯೂಟ ಯೋಜನೆಯ ಟೆಂಡರ್ ಪ್ರಕ್ರಿಯೆಯ ಆಮೆಗತಿ ಕಂಟಕವಾಗಿದೆ. ಸರ್ಕಾರ ತಕ್ಷಣವೇ ಶಾಲೆಗಳಿಗೆ ದಿನಸಿ ಅಥವಾ ಅಗತ್ಯ ಅನುದಾನ ಬಿಡುಗಡೆ ಮಾಡದಿದ್ದರೆ ಮಧ್ಯಾಹ್ನದ ಬಿಸಿಯೂಟ ಬಂದ್ ಆಗುವ ಸಾಧ್ಯತೆ ಇದೆ.
"
ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಒಪ್ಪತ್ತು ದಿನಸಿ ತರಬಹುದು. ಆದರೆ, 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ನಿತ್ಯ 6 ಕೆಜಿ ಬೇಳೆ ಬೇಕು. ಎಸ್ಡಿಎಂಸಿ ಖಾತೆಯಲ್ಲಿ ಹಣ ಇದ್ದರೆ ಖರೀದಿಸಬಹುದು. ಇಲ್ಲದಿದ್ದರೆ ಶಿಕ್ಷಕರು ಸ್ವಂತ ಹಣ ಹಾಕಬೇಕಿದೆ. ಎಣ್ಣೆಯನ್ನು ಖಾಸಗಿಯಾಗಿ ಹೊಂದಿಸುವುದು ತುಂಬಾ ಕಷ್ಟ. ಸರ್ಕಾರ ತಕ್ಷಣವೇ ದಿನಸಿ ಪೂರೈಸಬೇಕು.
— > ಹೆಸರು ಹೇಳಲಿಚ್ಛಿಸದ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ
"
ಟೆಂಡರ್ ಪ್ರಕ್ರಿಯೆ ವಿಳಂಬದಿಂದ ಬೇಳೆ, ಎಣ್ಣೆ ಬಂದಿಲ್ಲ. ಬುಧವಾರ 128 ಕ್ವಿಂಟಾಲ್ ಬೇಳೆ ಬಂದಿದೆ. ಬಿಸಿಯೂಟಕ್ಕೆ ತೊಂದರೆಯಾಗದಂತೆ ಪ್ರತಿ ಲೀಟರ್ ಅಡುಗೆ ಎಣ್ಣೆಗೆ 160 ರೂ. ಬೇಳೆಗೆ 105 ರೂ. ನಂತೆ ಶಾಲೆಯ ಅನುದಾನದ ಹಣ ನೀಡಿ ಖರೀದಿಸುವಂತೆ ಶಾಲೆಗಳಿಗೆ ಸೂಚಿಸಲಾಗಿದೆ. ಯಾವ ಶಾಲೆಗಳಲ್ಲೂ ಬಿಸಿ ಊಟ ನಿಂತಿಲ್ಲ.
— > ರೇಣುಕೇಶ್, ಅಕ್ಷರ ದಾಸೋಹ ಸಹಾಯಕ
"
ಗ್ಯಾರಂಟಿ ಭಾಗ್ಯಗಳ ನಡುವೆ ಸರ್ಕಾರಿ ಶಾಲೆಗೆ ಬೇಳೆ, ಎಣ್ಣೆ ವಿತರಣೆ ವಿಳಂಬವಾಗಿದೆ. ಸರ್ಕಾರ ಸಮರ್ಪಕವಾಗಿ ದಿನಸಿ ಸರಬರಾಜು ಮಾಡದಿದ್ದರೆ ರೈತರೆಲ್ಲರೂ ಒಗ್ಗೂಡಿ ನಾವೇ ನಮ್ಮ ಸರ್ಕಾರಿ ಶಾಲೆಗಳಿಗೆ ಬೇಳೆ ವಿತರಿಸುತ್ತೇವೆ.
— > ಲೋಕೇಶ್ ಹೊಸಪಾಳ್ಯ, ತಾಲೂಕು ರೈತಸಂದ ಅಧ್ಯಕ್ಷ