ಚನ್ನಪಟ್ಟಣ ತಾಲೂಕಿನ ಎಲೆತೋಟದಹಳ್ಳಿ ಗ್ರಾಪಂನ ಬಾಚಹಳ್ಳಿಯ ಹಳೇ ಟ್ಯಾಂಕ್ಗೆ ಬಣ್ಣ ಬಳಿದಿರುವುದು.
ಜಲಜೀವನ್ ಮಿಷನ್ ಯೋಜನೆ ಅಕ್ರಮ ಅನಾವರಣ
ಚನ್ನಪಟ್ಟಣ: ಜಲಜೀವನ್ ಮಿಷನ್ ಯೋಜನೆಯ (ಜೆಜೆಎಂ) ಅಕ್ರಮಗಳು ತಾಲೂಕಿನಲ್ಲಿ ಒಂದರ ಮೇಲೊಂದು ಅನಾವರಣಗೊಳ್ಳುತ್ತಿವೆ. ಕಾಮಗಾರಿ ನಡೆಯದೇ ಹಣ ಬಿಡುಗಡೆಯಾಗಿರುವ ಪ್ರಕರಣಗಳು ಒಂದೆಡೆಯಾದರೆ, ಹಳೆಯ ನೀರಿನ ಟ್ಯಾಂಕ್ಗೆ ಬಣ್ಣ ಬಳಿದು ಗೋಲ್ಮಾಲ್ ಮಾಡಿರುವ ಆರೋಪವೊಂದು ಕೇಳಿಬಂದಿದೆ.
ಹೌದು. ತಾಲೂಕಿನ ಎಲೆತೋಟದಹಳ್ಳಿ ಗ್ರಾಪಂ ವ್ಯಾಪ್ತಿಯ ಬಾಚಹಳ್ಳಿಯಲ್ಲಿ ಇಂತಹದೊಂದು ಗೋಲ್ ಮಾಲ್ ಬೆಳಕಿಗೆ ಬಂದಿದೆ. 2004ರಲ್ಲಿ ಅಂದಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯಿಂದ 4 ಲ ರೂ. ವೆಚ್ಚದಲ್ಲಿ ಬಾಚಹಳ್ಳಿ ಹಾಗೂ ಅಂಚೀಪುರ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಈಗ ಜಲಜೀವನ್ ಮೀಷನ್ ಯೋಜನೆಯಡಿ ಅದೇ ಟ್ಯಾಂಕ್ಗೆ ಬಣ್ಣ ಬಳಿದು ಅಕ್ರಮ ಎಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ 37.10 ಲ ರೂ. ಬಿಡುಗಡೆಯಾಗಿದೆ. ಇದರಲ್ಲಿ ರಾಜ್ಯದ ಅನುದಾನ 18.55 ಲ ರೂ. ಹಾಗೂ ಕೇಂದ್ರದ ಅನುದಾನ 18.55 ಲ ರೂ. ದೊರೆತಿದೆ. ಇದಕ್ಕೆ 2020&21ರಲ್ಲಿ ತಾಂತ್ರಿಕ ಅನುಮೋದನೆ ದೊರೆತು ಕಾಮಗಾರಿ ಆರಂಭಿಸಲು 27ಮಾರ್ಚ್ 2021ರಂದು ಕಾರ್ಯಾದೇಶ ಮಾಡಲಾಗಿದೆ. ಆದರೆ, ಕಾಮಗಾರಿ ಪಡೆದಿರುವ ಗುತ್ತಿಗೆದಾರ ಕೇವಲ ಪೈಪ್ಲೈನ್ ಮಾಡಿದ್ದು, 2004ರ ಫೆಬ್ರವರಿ 2ರಲ್ಲಿ ಉದ್ಘಾಟನೆ ಮಾಡಲಾಗಿರುವ ಹಳೆಯ ಟ್ಯಾಂಕ್ಗೆ ಸುಣ್ಣ ಬಳಿದಿದ್ದು ಬಿಟ್ಟರೇ ಮತ್ತಿನ್ಯಾವ ಕಾಮಗಾರಿ ಮಾಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಮಾಹಿತಿ ನೀಡಲು ತಿಣುಕಾಟ!
ಈ ಬಗ್ಗೆ ಗ್ರಾಮಸ್ಥರು ಎಲೆತೋಟದಹಳ್ಳಿ ಗ್ರಾಪಂ ಅಧಿಕಾರಿಗಳನ್ನು ವಿಚಾರಿಸಿದರೆ ಕಾಮಗಾರಿಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಇನ್ನೂ ಈ ಬಗ್ಗೆ ದಾಖಲೆಗಳನ್ನು ಕೇಳಿದರೆ ನಮ್ಮ ಬಳಿ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ. ಜಿಪಂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಇಂಜಿನಿಯರ್ ಗುರುಸಿದ್ದಯ್ಯ ಕೂಡ ನೀಡಿದ ಅರ್ಜಿಗೆ ಯಾವುದೇ ಮಾಹಿತಿ ನೀಡದೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಚಿರಂಜೀವಿ ಕೆ. ಪೂಜಾರಿ ಆರೋಪಿಸಿದ್ದಾರೆ.
ಟ್ಯಾಂಕ್ ನಿರ್ಮಿಸಿರುವ ಜಾಗ ಕೂಡ ಖಾಸಗಿ ವ್ಯಕ್ತಿಗೆ ಸೇರಿದ್ದಾಗಿದ್ದು, ಈ ಬಗ್ಗೆ ದಾಖಲೆಗಳನ್ನು ಕೇಳಿದರೆ ಗ್ರಾಪಂ ಪಿಡಿಒ ಹಾಗೂ ಸಿಬ್ಬಂದಿ ಬಲಾಢ್ಯರ ಒತ್ತಾಯಕ್ಕೆ ಮಣಿದು ಯಾವುದೇ ಮಾಹಿತಿ ನೀಡದೇ ಮರೆ ಮಾಚುತ್ತಿದ್ದಾರೆ. ಕೇಳಿದ ಯಾವುದೇ ಮಾಹಿತಿಗೆ ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ಸಿದ್ಧಪಡಿಸಿಕೊಂಡ ಹಿಂಬರಹ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಹೊಣೆಗಾರರು ಯಾರು?
ತಾಲೂಕಿನಲ್ಲಿ ನಡೆದಿರುವ ಜೆಜೆಎಂ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಆದರೆ, ಈ ಅಕ್ರಮಗಳಿಗೆ ಉತ್ತರಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಇಡೀ ಅಕ್ರಮದ ಪ್ರಮುಖ ಸೂತ್ರಧಾರ ಈ ಹಿಂದಿನ ಎಇಇ. ಅವರೀಗ ಇಲ್ಲಿಂದ ವರ್ಗಾವಣೆ ಆಗಿ ಬೇರೆ ಕಡೆ ಇದ್ದಾರೆ. ಅವರ ಅವಧಿಯಲ್ಲಿ ನಡೆದಿರುವ ಅಕ್ರಮಗಳ ಸಾಲು ಹೇಳತೀರದಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯೊಂದೇ ದಾರಿಯಾಗಿದೆ. ಜೆಜೆಎಂ ಕಾಮಗಾರಿಯ ಬಗ್ಗೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ಕಾಮಗಾರಿಯ ಗುಣಮಟ್ಟ ನೋಡಿಕೊಳ್ಳಲು ರ್ನಿಲ್ಯ ವಹಿಸಿರುವುದು ಎಲ್ಲದಕ್ಕೂ ಕಾರಣ ಎಂದರೆ ತಪ್ಪಾಗಲಾರದು. ಕೆಲ ತಿಂಗಳುಗಳ ಹಿಂದೆ ಶಾಸಕ ಸಿ.ಪಿ.ಯೋಗೇಶ್ವರ್, ತಾಲೂಕಿನಲ್ಲಿ ನಡೆಸಿದ ಜನಸಂಪರ್ಕ ಸಭೆಗಳಲ್ಲಿ ಜೆಜೆಎಂ ಅವಾಂತರ ಜೋರಾಗಿ ಸದ್ದು ಮಾಡಿತ್ತು. ಈ ವೇಳೆ ಕಾಮಗಾರಿ ಅನುಷ್ಠಾನ ನಿರ್ವಹಣೆ ಮಾಡಿದ ಜಿಪಂ ಎಇಇ ಮಧುಸೂಧನ್ ಅವರನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. "ನಮ್ಮ ಜನರಿಗೆ ಯಾಕಯ್ಯ ಅನ್ಯಾಯ ಮಾಡುತ್ತಿದ್ದೀಯಾ..., ನಮ್ಮ ಜನ ನೀರಿಲ್ಲದೇ ಸಾಯುವ ಸ್ಥಿತಿ ತಂದಿದ್ದೀಯಾ..., ಎಲ್ಲ ಊರಿನಲ್ಲೂ ನೀನು ಅಧ್ವಾನ ಮಾಡಿದ್ದೀಯಾ.., ಇಷ್ಟರಲ್ಲೆ ನೀನು ಜೈಲಿಗೆ ಹೋಗುತ್ತಿಯಾ ಹುಷಾರ್' ಎಂದು ಎಚ್ಚರಿಕೆ ನೀಡಿದ್ದರು.