ರಾಮನಗರದ ಐಜೂರು ವೃತ್ತದಲ್ಲಿ ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
- ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಬಗ್ಗೆ ನಿರ್ಲಕ್ಷ್ಯ
- ಮಾ.12ರಂದು ರಾಜ್ಯಾದ್ಯಂತ ಕನ್ನಡ ಶಾಲೆಗಳನ್ನು ಬಂದ್
- ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ
ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಬಗ್ಗೆ ನಿರ್ಲಕ್ಷ್ಯ ತಾಳುತ್ತಿದ್ದು, ಮಾ.12ರಂದು ರಾಜ್ಯಾದ್ಯಂತ ಕನ್ನಡ ಶಾಲೆಗಳನ್ನು ಬಂದ್ ಮಾಡಿ ಬಿಸಿ ಮುಟ್ಟಿಸಲಾಗುತ್ತದೆ ಎಂದು ಕನ್ನಡಪರ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.
ಕನ್ನಡ ಶಾಲೆಗಳಿಗೆ ಆಯವ್ಯಯದಲ್ಲಿ ಅನುದಾನ ಘೋಷಣೆ ಮಾಡಿಲ್ಲ ಹಾಗೂ ಸಾಮಾಜಿಕ ಜಾಲತಾಣ ನಿಷೇಧವನ್ನು ವಿರೋಧಿಸಿ ಇಲ್ಲಿನ ಐಜೂರು ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ಕರುನಾಡ ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಸುಮಾರು 800ಕ್ಕೂ ಹೆಚ್ಚು ಪಬ್ಲಿಕ್ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭ ಮಾಡಲು 3,900 ಕೋಟಿ ಅನುದಾನ ನೀಡಿದ್ದಾರೆ.
ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಕನಿಷ್ಠ 1,000 ಕೋಟಿ ರೂ. ಅನುದಾನವನ್ನಾದರೂ ನೀಡಬೇಕಿತ್ತು. ಆದರೆ ನಯಾಪೈಸೆ ನೀಡಿಲ್ಲ. ಮೂರು ದಶಕಗಳಿಂದ ಕನ್ನಡ ಶಾಲೆಗಳನ್ನು ಕಡೆಗಾಣಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಪಕ್ಕದ ಕೇರಳ, ತಾಳವಾಡಿ, ಹೊಸೂರು, ಅಕ್ಕಲಕೋಟೆ, ಮಡಗಸಿರಾ, ಸೊಲ್ಲಾಪುರದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಕನ್ನಡ ಶಾಲೆಗಳ ಬಗ್ಗೆ ಹೇಳುವವರು, ಕೇಳುವವರು ಇಲ್ಲ ಎಂದುಕೊAಡಿದ್ದಾರೆ. ಕನ್ನಡ ಶಾಲೆಗಳನ್ನು ಉಳಿಸಿ, ಗೌರವಿಸಬೇಕು. ಇದಕ್ಕಾಗಿ ಮಾ.12ರಂದು ರಾಜ್ಯದಾದ್ಯಂತ ಬೆಳಗ್ಗಿನ ಸಂಜೆಯವರೆಗೆ ಕನ್ನಡ ಶಾಲೆಗಳ ಬಂದ್‌ಗೆ ಕರೆ ನೀಡಿ, ಪ್ರತಿಭಟನೆ ನಡೆಸಲಾಗುವುದು. ಶಾಲೆಗಳು ಮುಖ್ಯಶಿಕ್ಷಕರು, ಶಿಕ್ಷಕರು ಸಹಕಾರ ನೀಡಬೇಕು ಎಂದು ವಾಟಾಳ್ ನಾಗರಾಜ್ ಮನವಿ ಮಾಡಿದರು.
ಮಕ್ಕಳು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣ ಬಳಸುವುದನ್ನು ಸರ್ಕಾರ ಹೇಗೆ ನಿಷೇಧ ಮಾಡುತ್ತದೆ. ಮಕ್ಕಳು ಮೊಬೈಲ್ ಬಳಸಿದರೆ ಅವರನ್ನು ಬಂಧಿಸಿ, ಕೇಸು ಹಾಕಿ ಜೈಲಿಗೆ ಹಾಕಲು ಸಾಧ್ಯವೇ ? ಶಾಲೆ-ಕಾಲೇಜು, ಪರೀಕ್ಷೆ ಕೊಠಡಿಗಳಿಗೆ ಮೊಬೈಲ್ ಬಳಕೆ ಬೇಡ. ಆದರೆ ಪ್ರಪಂಚದ ಉದ್ದಗಲಕ್ಕೂ ಇಂದು ಸಾಮಾಜಿಕ ಜಾಲತಾಣ ಬೆಳವಣಿಗೆ ಆಗಿದೆ.
ನೀವು ಮಕ್ಕಳಿಗೆ ಮೊಬೈಲ್ ಬಳಕೆಯನ್ನು ನಿಷೇಧ ಮಾಡಿದರೆ ಮಕ್ಕಳು ಮನೆಯಲ್ಲಿನ ತಂದೆ, ತಾಯಿ, ಸಹೋದರ, ಸಹೋದರಿಯರನ್ನು ವಿರೋಧ ಮಾಡಿ, ಮನೆ ಬಿಟ್ಟು ಹೋಗುತ್ತಾರೆ. ಕುಟುಂಬದ ಸದಸ್ಯರ ಜತೆ ಗಲಾಟೆ ಮಾಡಿಕೊಳ್ಳುತ್ತಾರೆ. ಇದನ್ನು ಗಂಭೀರವಾಗಿ ಸರ್ಕಾರ ಆಲೋಚಿಸಬೇಕು. ವಿಶ್ವದ ಅನೇಕ ಸುದ್ದಿಗಳನ್ನು ಎಲ್ಲರೂ ಕುಳಿತಲ್ಲೇ ತಿಳಿದುಕೊಳ್ಳುತ್ತಿರುವುದರಿಂದ ಜಾಲತಾಣಗಳು ಮಕ್ಕಳಿಗೆ ಅವಶ್ಯಕತೆ ಇದೆ. ಇವುಗಳ ಬಳಕೆಯನ್ನು ನಿಷೇಧಿಸುವುದು ಖಂಡನೀಯ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ ಐಜೂರು, ರಾಜ್ಯ ಉಸ್ತುವಾರಿ ಅಧ್ಯಕ್ಷ ಗಂಗಾಧರ್ ವಿ.ಎನ್., ಜಿಲ್ಲಾಧ್ಯಕ್ಷ ಜಯಕುಮಾರ್, ತಾಲೂಕು ಮಹಿಳಾ ಅಧ್ಯಕ್ಷೆ ಭಾಗ್ಯಸುಧಾ, ಕಾರ್ಯಾಧ್ಯಕ್ಷ ಶಿವಮೂರ್ತಿ, ಪ್ರಧಾನ ಕಾರ್ಯದರ್ಶಿ ಕುಮಾರ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಹೇಮಂತ್, ಕಾರ್ಯದರ್ಶಿ ಕೊತ್ತಿಪುರ ಸುರೇಶ್, ವಾಟಾಳ್ ನಾಗರಾಜ್ ಅವರ ಆಪ್ತ ಸಹಾಯಕ ಪಾರ್ಥಸಾರಥಿ ಇದ್ದರು.