ಕನಕಪುರ ಹೊಸಕೋಟೆಯಲ್ಲಿ ಜಾತಿ ವೈಷಮ್ಯದಿಂದ ಗಿಡಿಸಲು ಸುಟ್ಟು ಭಸ್ಮವಾಗಿರುವುದು.
ಕನಕಪುರ: ಹೊಸಕೋಟೆಯಲ್ಲಿ ಮಂಗಳವಾರ ಜಾತಿ ವೈಷಮ್ಯದಿಂದ ಗುಡಿಸಲಿಗೆ ಬೆಂಕಿ ಹಚ್ಚಿ, ತಾಯಿ&ಮಗನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ.
ತಾಮಸಂದ್ರದ ಸರ್ವೇ ನಂ.80ರ ಗೋಮಾಳದ ಜಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸರ್ಕಾರದಿಂದ ಜಮೀನು ಮಂಜೂರಾಗಿತ್ತು. ಅದರಂತೆ ಸಿದ್ದಗಂಗಮ್ಮ ತಮಗೆ ಮಂಜೂರಾಗಿದ್ದ 1 ಎಕರೆ 21 ಗುಂಟೆ ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ಪುತ್ರ ಸತೀಶ್ ಜತೆ ವಾಸವಾಗಿದ್ದರು.
ಮಂಗಳವಾರ ಬೆಳಗ್ಗೆ ಗ್ರಾಮದ ತಿಮ್ಮಪ್ಪ, ಮಹದೇವಮ್ಮ ಹಾಗೂ ಅವರ ಮಕ್ಕಳಾದ ಕೃಷ್ಣ ಮತ್ತು ವೆಂಕಟೇಶ್ ಎಂಬುವವರು ಜಮೀನಿನ ಬಳಿ ಬಂದು ಏಕಾಏಕಿ ದೌರ್ಜನ್ಯ ಎಸಗಿದ್ದಾರೆ. ಆರೋಪಿಗಳು ನಡೆಸಿದ ಭೀಕರ ಹಲ್ಲೆಯಿಂದಾಗಿ ಸಿದ್ದಗಂಗಮ್ಮ ಅವರ ಪುತ್ರ ಸತೀಶ್ ಅವರ ಕೈಬೆರಳು ತುಂಡಾಗಿದೆ. ಮಗನನ್ನು ಕಾಪಾಡಲು ಹೋದ ಸಿದ್ದಗಂಗಮ್ಮ ಮೇಲೂ ತೀವ್ರವಾಗಿ ಹಲ್ಲೆ ನಡೆಸಲಾಗಿದೆ.
ಹಲ್ಲೆಯಷ್ಟೇ ಅಲ್ಲದೆ, ಸಿದ್ದಗಂಗಮ್ಮ ವಾಸವಿದ್ದ ಗುಡಿಸಲಿಗೆ ಆರೋಪಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮನೆಯಲ್ಲಿದ್ದ ದವಸ&ಧಾನ್ಯಗಳು ಹಾಗೂ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಗಾಯಾಳು ಸತೀಶ್ ಅವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿದ್ದಗಂಗಮ್ಮ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.