ಅರಣ್ಯಕ್ಕೆ ಬಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ಅಗ್ನಿ ಶಾಮಕ ಸಿಬ್ಬಂದಿ.
ಚನ್ನಪಟ್ಟಣ: ತಾಲೂಕಿನ ಅಬ್ಬೂರು ಗುಡ್ಡೆ ಅರಣ್ಯ ಪ್ರದೇಶಕ್ಕೆ ತಗುಲಿದ ಬೆಂಕಿಯನ್ನು ಆರಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆದರೂ ಅಂದಾಜು 30 ಎಕರೆಗೂ ಹೆಚ್ಚಿನ ಅರಣ್ಯ ಭೂಮಿ ಬೆಂಕಿಗೆ ಆಹುತಿಯಾಗಿದೆ.
ಭಾನುವಾರ ಸಂಜೆ ಚನ್ನಪಟ್ಟಣ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಬಾಧಿತ ಅರಣ್ಯಪ್ರದೇಶವಾದ ಅಬ್ಬೂರುಗುಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕುರುಚಲು ಅರಣ್ಯವಾದ ಕಾರಣ, ಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಕಿಮೀಗಟ್ಟಲೇ ವ್ಯಾಪಿಸಿತ್ತು. ಅಬ್ಬೂರು ಗುಡ್ಡೆಯಿಂದ ಹಿಡಿದು ಕಣ್ವ ಡ್ಯಾಂ ವ್ಯಾಪ್ತಿಯವರೆಗೂ ಬೆಂಕಿ ಆವರಿಸಿ, ಆತಂಕ ಸೃಷ್ಟಿಸಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಹಾಗೂ ಅಗ್ನಿ ಶಾಮಕ ಅಧಿಕಾರಿ, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು.
ವಿವಿಧ ಭಾಗಗಳಲ್ಲಿ ಬೆಂಕಿ ಆವರಿಸಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೆಶ್ ಹಾಗೂ ರಾಮನಗರ ವಲಯ ಅರಣ್ಯಾಧಿಕಾರಿ ಮನ್ಸೂರ ನೇತೃತ್ವದಲ್ಲಿ ಮೂರು ತಂಡಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ್ದವು. ಅಂತಿಮವಾಗಿ ಭಾನುವಾರ ರಾತ್ರಿ 12ರ ವೇಳೆಗೆ ಸಂಪೂರ್ಣ ನಂದಿಸಲಾಯಿತು. ಪ್ರಾಣಿಗಳಿಗೆ ಹಾನಿಯಾದ ವರದಿ ಇಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.