ಚನ್ನಪಟ್ಟಣ: ಬೊಂಬೆನಾಡು ಚನ್ನಪಟ್ಟಣ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಗತವೈಭವ ಹೇಳುವ ಇತಿಹಾಸಗಳಿವೆ. ಆದರೆ, ಯಾವುದೇ ಮೂಲ ಇತಿಹಾಸ ಇರದಿದ್ದರೂ, ಶ್ರಮಿಕ ವರ್ಗವೊಂದು ನೆಲೆಕಟ್ಟಿಕೊಂಡಿರುವ ಗ್ರಾಮವೇ ತಾಲೂಕಿನ ಮೋಳೆದೊಡ್ಡಿ.
ಹೌದು...ಚನ್ನಪಟ್ಟಣದ ಸಾಕಷ್ಟು ಗ್ರಾಮಗಳನ್ನು ಒಳಗೊಂಡಂತೆ ಇಲ್ಲಿ ಹಲವು ರಾಜಮನೆತನಗಳು ಆಳಿರುವ ಇತಿಹಾಸವಿದೆ. ಇವುಗಳೊಂದಿಗೆ ಹೊಸದಾಗಿ ಹುಟ್ಟಿಕೊಂಡಿರುವ ಹಲವು ಗ್ರಾಮಗಳ ಸಾಲಿನಲ್ಲಿ ಈ ಮೋಳೆದೊಡ್ಡಿ ಗ್ರಾಮವೂ ಒಂದಾಗಿದ್ದು, ಜಗತ್ತಿನ ಬಹುದೊಡ್ಡ ಬೆವರಿನ ಸಂಸತಿಗಳಲ್ಲಿ ಒಂದಾದ ಬೆಸ್ತ (ಗಂಗಾಮತಸ್ಥ) ಸಮುದಾಯವೇ ಸಂಪೂರ್ಣವಾಗಿರುವುದು ಈ ಗ್ರಾಮದ ವಿಶೇಷ.
ಮೋಳೆದೊಡ್ಡಿ ನಗರಕೇಂದ್ರದಿಂದ 6 ಕಿ.ಮೀ ಅಂತರದಲ್ಲಿದ್ದು, 720 ಮನೆಗಳು ಹಾಗೂ 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಒಂದರಿಂದ 8ನೇ ತರಗತಿಯವರೆಗೆ ಸರ್ಕಾರಿ ಶಾಲೆಯಿದ್ದು, ಅತಿಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆ ಎಂಬ ಹೆಗ್ಗಳಿಕೆಯಿದೆ. ಜತೆಗೆ ಎರಡು ಅಂಗನವಾಡಿ ಕೇಂದ್ರಗಳಿದ್ದು, ಅತಿಹೆಚ್ಚು ಹಾಲು ಉತ್ಪಾದನೆಯ ಕೀರ್ತಿ ಗ್ರಾಮಕ್ಕಿದೆ.
ಇತಿಹಾಸ: ಗ್ರಾಮದ ಇತಿಹಾಸದ ಬಗ್ಗೆ ಯಾವುದೇ ದಾಖಲೆ ಅಥವಾ ಪುರಾವೆಗಳಿಲ್ಲ. ಇದು ಸೆಣಬನಹಳ್ಳಿ ದಾಖಲೆ ಗ್ರಾಮವಾಗಿದ್ದು, ಬಹಳ ವರ್ಷಗಳ ಹಿಂದೆ ಈ ಗ್ರಾಮದವರು ಪಕ್ಕದ ಹೊಂಗನೂರಿನ ಕೆರೆಯ ಬಳಿ ವಾಸಿಸುತ್ತಿದರಂತೆ. ಆದರೆ, ಕೆರೆಯ ನೀರಿನ ಹರಿವು ಹೆಚ್ಚಾಗಿ ಮುಳುಗಡೆಯಾಗುವ ಭೀತಿಯಿಂದ ಆ ಜಾಗ ತೊರೆದು ಮೇಲ್ಭಾಗಕ್ಕೆ (ಈಗಿರುವ ಗ್ರಾಮ) ಬಂದು ಜೀವನಕಟ್ಟಿಕೊಂಡಿದ್ದಾರೆ ಎನ್ನುತ್ತಾರೆ ಇಲ್ಲಿನ ಗಾಮಸ್ಥರು. ಈಗಲೂ ಹಳೆ ಮೋಳೆದೊಡ್ಡಿ ಗ್ರಾಮದ ಕೆಲವು ಕುಟುಂಬಗಳು ವಾಸವಿವೆ.
ಆದರೆ, ಇತಿಹಾಸದ ಪ್ರಕಾರ "ಮೋಳೆ' ಎಂಬ ಪದಕ್ಕೆ ಉಪ್ಪು ತಯಾರಿಸಲು ಕಟ್ಟುವ ಒಡ್ಡುಗಳು ಅಥವಾ ಕೆರೆ ಎಂದು ಅರ್ಥವಿದೆ. ಕೆರೆ ಸಂಸತಿಗೆ ಅಪಾರ ಕೊಡುಗೆ ನೀಡಿರುವ ಹಾಗೂ ಮೀನುಗಾರಿಕೆ ಮೂಲ ಕಸುಬಾಗಿರುವ ಗಂಗಾಮತಸ್ಥ ಸಮುದಾಯದ ಕಾಯಕ ಇದಾಗಿದ್ದು, ಯುದ್ದ, ಪ್ರವಾಹ, ವ್ಯಾಪಾರ, ಮುಂತಾದ ಕಾರಣಗಳಿಂದ ಬಯಲು ಪ್ರದೇಶದ ಕಡೆ ಬಂದು ನೆಲೆಸಿರುವ ಇತಿಹಾಸವಿದೆ. ಈ ಅಂದಾಜಿನ ಪ್ರಕಾರ ಈ ಮೋಳೆದೊಡ್ಡಿ ಗ್ರಾಮ ರೂಪುಗೊಂಡಿರಬಹುದು.
ಗ್ರಾಮದೇವತೆಯಾಗಿ ಪಿರಿಯಾಪಟ್ಟಣದಮ್ಮನನ್ನು ಪೂಜಿಸುತ್ತಿದ್ದು, ಪಕ್ಕದ ನೀಲಸಂದ್ರದ ಬೋರೆದೇವರನ್ನು ಗ್ರಾಮದ ಜನತೆ ಆರಾಧಿಸುತ್ತಾರೆ. ಇದರೊಂದಿಗೆ ರಾಮಮಂದಿರ, ತಪಸ್ವಿರಾಯ, ಸಿದ್ದಪಾಜ್ಜಿ, ಶನಿಮಹಾತ್ಮ ಹೀಗೆ ನಾನಾ ದೇವತೆಗಳನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಪಿರಿಯಾಪಟ್ಟಣದಮ್ಮನ (ಮಸಣಿಕಮ್ಮ) ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಗ್ರಾಮದಲ್ಲಿ ಭಜನೆ ಮಾಡುವವರಿದ್ದು, ಈ ಹಿಂದೆ ನಾಟಕ ಕಲಾವಿದರೂ ಹೆಸರುಗಳಿಸಿದ್ದಾರೆ. ಬಡತನ ಸೇರಿ ಇನ್ನಿತರ ಕಾರಣಗಳಿಂದ ಈ ಹಿಂದೆ ಯಾರು ಉತ್ತಮ ಶಿಣ ಪಡೆದಿರಲಿಲ್ಲ. ಆದರೆ, ಇತ್ತೀಚೆಗೆ ವಿದ್ಯಾವಂತ ಸಮೂಹ ಗ್ರಾಮದಲ್ಲಿ ಹೆಚ್ಚಾಗುತ್ತಿದೆ.
ಗ್ರಾಮ ಜನಸಂಖ್ಯೆಯಲ್ಲಿ ದೊಡ್ಡದಾಗಿದ್ದರೂ, ಆರ್ಥಿಕ ಅಭಿವೃದ್ಧಿ ಉತ್ತಮವಾಗಿಲ್ಲ. ಎರಡು ದಶಕಗಳ ಹಿಂದೆ ಇಡೀ ಗ್ರಾಮ ಗುಡಿಸಲಿನಿಂದ ಕೂಡಿತ್ತು. ಇತ್ತೀಚೆಗೆ ತಮ್ಮ ಶಕ್ತಾನುಸಾರ ಸೂರು ಮಾಡಿಕೊಂಡಿದ್ದಾರೆ. ಗ್ರಾಮದ ಬಹುತೇಕ ಮಂದಿ ಶ್ರಮಿಕವರ್ಗವಾಗಿದ್ದು, ಶೇ.75 ಮಂದಿ ವಿವಿಧ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಹಳ್ಳಿ ಹಳ್ಳಿಗೆ ತಿರುಗಿ ಮೀನು, ಪ್ಲಾಸ್ಟಿಕ್ ಬಿಂದಿಗೆ, ಹಕ್ಕಿ ಗೂಡು ಹೀಗೆ ನಾನಾ ವ್ಯಾಪಾರ ಮಾಡುತ್ತಾರೆ. ಮಹಿಳೆಯರು ಕರೆ ಮೀನು, ಸೊಪ್ಪಿನ ವ್ಯಾಪಾರ ಮಾಡುವ ಮೂಲಕ ದುಡಿಮೆ ಮಾಡುತ್ತಿದ್ದಾರೆ. ಕೆಲವರು ಅಲ್ಪ ಜಮೀನು ಹೊಂದಿದ್ದು, ಬಹುತೇಕ ಮಂದಿ ಭೂ ರಹಿತರಾಗಿದ್ದಾರೆ. ಇದರ ಮಧ್ಯೆಯೂ ಹೈನುಗಾರಿಕೆಯನ್ನು ಸಹ ನೆಚ್ಚಿಕೊಂಡಿದ್ದಾರೆ.