ರಾಮನಗರ: ಪ್ರಧಾನಿ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ, ದೇಶದ ಅಭಿವೃದ್ಧಿಗಾಗಿ ನಿರಂತರ ಪರಿಶ್ರಮ ಹಾಗೂ ಅಚಲ ಸಂಕಲ್ಪ ಆದರ್ಶಪ್ರಾಯವಾಗಿದೆ ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪ ಅಭಿಯಾನ ಅಂಗವಾಗಿ ಸೇವಾ ಜ್ಯೋತಿ ಯಾತ್ರೆ ಹಾಗೂ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಕಸಿತ ಭಾರತ ನಿರ್ಮಾಣ ಕೇವಲ ಕನಸಲ್ಲ, ಅದು ಪ್ರತಿ ಭಾರತೀಯನ ಸಂಕಲ್ಪವಾಗಬೇಕೆಂದು ಕರೆ ನೀಡಿದರು.
ಕಳೆದ 25 ವರ್ಷಗಳ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನವು ದೇಶಕ್ಕಾಗಿ ಸಮರ್ಪಣೆ, ನಿರಂತರ ಪರಿಶ್ರಮ ಮತ್ತು ದೃಢ ಸಂಕಲ್ಪಕ್ಕೆ ಮಾದರಿಯಾಗಿದೆ. ಹಿಂದೆ ಭಾರತ ಎಂದರೆ, ಬಡ ದೇಶ ಮತ್ತು ಭಿಕ್ಷುಕರ ದೇಶ ಎಂಬಂತೆ ವಿದೇಶಿಗರು ಕಾಣುತ್ತಿದ್ದರು. ಆದರೆ, ಇಂದು ಇಡೀ ವಿಶ್ವವೇ ಭಾರತವನ್ನು ಕಾಣುವ ದೃಷ್ಟಿಕೋನ ಬದಲಾಗಿದೆ. ಇಡೀ ಜಗತ್ತೇ ಭಾರತದ ಕಡೆ ತಿರುಗಿನೋಡುತ್ತಿದೆ. ಮೋದಿ ನಾಯಕತ್ವವೇ ಇದಕ್ಕೆ ಕಾರಣ ಎಂದು ಬಣ್ಣಿಸಿದರು.
ಕರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತವು ಕೋಟ್ಯಂತರ ಜನರಿಗೆ ಲಸಿಕೆ ನೀಡುವ ಮೂಲಕ ಬೃಹತ್ ಲಸಿಕಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿತು. ಜತೆಗೆ ವ್ಯಾಕ್ಸಿನ್ ಮೈತ್ರಿ ಮೂಲಕ ಹಲವು ದೇಶಗಳಿಗೆ ಲಸಿಕೆಗಳನ್ನು ಪೂರೈಸಿ, ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿಯೂ ತನ್ನ ಜವಾಬ್ದಾರಿಯನ್ನು ಭಾರತ ಸಮರ್ಥವಾಗಿ ನಿರ್ವಹಿಸಿ ತನ್ನ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಿತು ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಪ್ರಕೋಷ್ಠದ ಸಹ ಸಂಚಾಲಕ ಪಣೀಶ್ ಮಾತನಾಡಿ, ಮೋದಿ ಅವರು ಇಡೀ ಬದುಕನ್ನೇ ಸೇವೆಯಾಗಿಸಿಕೊಂಡಿದ್ದಾರೆ. ಸಾಮಾನ್ಯ ಕುಟುಂಬದಿಂದ ಚಹಾ ಮಾರುತ್ತಿದ್ದವರು ದೇಶದ ಪ್ರಧಾನಮಂತ್ರಿಯಾಗಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಭಾರತವನ್ನು ಬಲಾಢ್ಯ ರಾಷ್ಟ್ರವಾಗಿ ರೂಪಿಸಿದ್ದಾರೆ ಎಂದರು.
ಹಿಂದೆ ವಾಜಪೇಯಿ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದ್ದರು. ಭಾರತ ಪ್ರಕಾಶಿಸುತ್ತಿದೆ ಎಂದು ಇಡೀ ದೇಶದ ಮಾತಾಗಿತ್ತು. ಆದರೆ, ಅತಿಯಾದ ವಿಶ್ವಾಸದಲ್ಲಿ ಬಿಜೆಪಿ ಕಾರ್ಯಕರ್ತರು ಮನೆಯಲ್ಲೇ ಕುಳಿತೆವು. ಇದರ ಪರಿಣಾಮ ಅತ್ಯುತ್ತಮ ಆಡಳಿತ ನೀಡಿದ್ದರು. ಮತ್ತೊಂದು ಅವಕಾಶ ವಾಜಪೇಯಿ ಅವರಿಗೆ ಸಿಗಲಿಲ್ಲ. ಹೀಗಾಗಿ ಸೇವಾ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದ್ದು, ಮೋದಿ ಜನಪರ ಆಡಳಿತವನ್ನು ತಿಳಿಸುವ ಕೆಲಸವಾಗಬೇಕು. ನಾವು ವಿಕಸಿತ ಭಾರತ ಮಾಡಿ ತೋರಿಸುತ್ತೇವೆ ಎಂಬ ಮೋದಿ ಘೋಷಣೆ ಮಾಡಿದ್ದಾರೆ. ಅದರ ಸಾಕಾರಕ್ಕೆ ಎಲ್ಲರೂ ಶ್ರಮಿಸಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆ. ದೇವೇಗೌಡ, ಬೆಂಗಳೂರು ಗ್ರಾಮಾಂತರ ಸಹ ಪ್ರಭಾರಿ ವಾಸುದೇಚ್ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್, ಶಿವಮುತ್ತು, ಚಂದ್ರಶೇಖರ್, ಮುಖಂಡರಾದ ಎಸ್.ಆರ್. ನಾಗರಾಜು, ಆರ್. ವಿ. ಸುರೇಶ್, ಪದ್ಮನಾಭ್, ಚಂದನ್ ಮೋರೆ, ಸಿದ್ದರಾಜು, ನಾಗಮ್ಮ, ಲಕ್ಷ್ಮೀ, ಹೇಮಾ, ದೇವಿಕಾ, ಚನ್ನಪ್ಪ, ಪ್ರವೀಣ್ ಗೌಡ, ನಾಗೇಶ್, ಗೂಗಾರೆ ದೊಡ್ಡಿ ನಾಗರಾಜು, ದೇವರು ಜಾದವ್ ಇದ್ದರು.
ಬೈಕ್ ರ‌್ಯಾಲಿ ಮೂಲಕ ಸೇವಾ ಜ್ಯೋತಿ ಯಾತ್ರೆ
ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷಗಳ ಮೈಲಿಗಲ್ಲನ್ನು ಸಂಭ್ರಮಿಸಿದ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ಪ್ರಧಾನಿ ಭಾಷಣವನ್ನು ಬೃಹತ್ ಪರದೆ ಮೂಲಕ ನೇರಪ್ರಸಾರ ವೀಕ್ಷಿಸಿದರು. ಬಳಿಕ ಬೈಕ್ ಹಾಗೂ ತೆರದ ವಾಹನದಲ್ಲಿ ಸೇವಾ ಜ್ಯೋತಿ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ರ‌್ಯಾಲಿ ನಡೆಸಿದರು.
ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಿಂದ ಆರಂಭಗೊಂಡ ರ‌್ಯಾಲಿ ಐಜೂರು ವೃತ್ತ, ಕೆಂಗಲ್ ಹನುಮಂತಯ್ಯ ವೃತ್ತ ಮಾರ್ಗವಾಗಿ, ರೈಲ್ವೆ ಸ್ಟೇಷನ್ ರಸ್ತೆ, ಎಂಜಿ ರಸ್ತೆ, ಕಂದಾಯ ಭವನ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿ ಬಳಿಕ ಕಲ್ಯಾಣ ಮಂಟಪಕ್ಕೆ ಹಿಂತಿರುಗಿ ಅಂತ್ಯಗೊಂಡಿತು. ದಾರಿಯುದ್ದಕ್ಕೂ ಬಿಜೆಪಿ ಬಾವುಟ ಹಿಡಿದ ನೂರಾರು ಕಾರ್ಯಕರ್ತರು ಮೋದಿ ಪರ ಘೋಷಣೆಗಳನ್ನು ಕೂಗಿದರು. ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಸ್ವತಃ ಕಾರ್ಯಕರ್ತರು, ಮುಖಂಡರು ರಾಷ್ಟ್ರಗೀತೆಯನ್ನು ಹಾಡಿದರು. ಇದೇ ವೇಳೆ ವಿಕಸಿತ ಭಾರತ ಸಂಕಲ್ಪ ಪ್ರತಿಜ್ಞೆ ಮಾಡಲಾಯಿತು.
ಆತ್ಮನಿರ್ಭರ ಭಾರತ : ಪಶ್ಚಿಮ ಏಷ್ಯಾದ ಸಂಘರ್ಷ ಸೇರಿ ಜಾಗತಿಕ ಮಟ್ಟದಲ್ಲಿ ಹಲವು ಸವಾಲುಗಳು ಎದುರಾಗಿರುವ ಸಂದರ್ಭದಲ್ಲಿ ಭಾರತ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದೆ. ಅನೇಕ ರಾಷ್ಟ್ರಗಳು ಆರ್ಥಿಕತೆ ಒತ್ತಡಕ್ಕೆ ಒಳಗಾಗಿದ್ದರೂ, ಭಾರತ ಆರ್ಥಿಕ ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುತ್ತಿದೆ. ಆತ್ಮನಿರ್ಭರ ಭಾರತ್ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳ ಮೂಲಕ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲಾಗಿದೆ. ಭಾರತವು ಕೇವಲ ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿರದೆ, ತನ್ನದೇ ಉತ್ಪನ್ನಗಳನ್ನು ಜಾಗತಿಕ ಮಾರುಕಟ್ಟೆಗೆ ರಫ್ತು ಮಾಡುವ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದೆ ಎಂದು ಸಂಸದರು ತಿಳಿಸಿದರು.