ಬೆಂಗಳೂರು - ಮೈಸೂರು ರೈಲ್ವೆ ಮಾರ್ಗವನ್ನು ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಜಂಟಿಯಾಗಿ ಪರಿಶೀಲಿಸಿದರು.
- ರಾಮನಗರ, ಚನ್ನಪಟ್ಟಣ ನಿಲ್ದಾಣ ಆಧುನೀಕರಣ
ಚನ್ನಪಟ್ಟಣ: ರಾಜ್ಯದ ಹಲವೆಡೆ ಸಂಚಾರ ಮಾಡಿ ರೈಲ್ವೆ ನ್ಯೂನತೆ ಪರಿಶೀಲಿಸಲಾಗುತ್ತಿದ್ದು, ಪ್ರಯಾಣಿಕರು ಹಾಗೂ ಸಾರ್ವಜನಿಕರ ಸಮಸ್ಯೆ ಆಲಿಸಿ ಬಗೆಹರಿಸಲಾಗುವುದು. ರೈಲ್ವೆ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ರಾಮನಗರ ಹಾಗೂ ಚನ್ನಪಟ್ಟಣದ ರೈಲ್ವೆ ನಿಲ್ದಾಣಗಳು ಆಧುನೀಕರಣವಾತ್ತಿದ್ದು, ಶೀಘ್ರವೇ ಉದ್ಘಾಟಿಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದ ಯದುವೀರ್ ಅವರೊಂದಿಗೆ ಗುರುವಾರ ಬೆಂ-ಮೈ ರೈಲ್ವೆ ಮಾರ್ಗ ಪರಿವೀಕ್ಷಣೆ ವೇಳೆ ತಾಲೂಕಿನ ಶೆಟ್ಟಿಹಳ್ಳಿ ರೈಲ್ವೆ ನಿಲ್ದಾಣವನ್ನು ಜಂಟಿಯಾಗಿ ಪರಿಶೀಲಿಸಿ ಮಾತನಾಡಿದರು.
ಬೆಂಗಳೂರು ಮಹಾನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮೈಸೂರು ರೈಲು ನಿಲ್ದಾಣದವರೆಗೆ ಗುರುವಾರ ವಿಂಡೋ ಟ್ರೇಲಿಂಗ್ ಪರಿವೀಕ್ಷಣೆ ಕೈಗೊಂಡ ಇಬ್ಬರೂ ಸಚಿವರು, ಇದರ ಭಾಗವಾಗಿ ಶೆಟ್ಟಿಹಳ್ಳಿ ನಿಲ್ದಾಣಕ್ಕೆ ಭೇಟಿ ನೀಡಿ, ನಿಲ್ದಾಣದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಈ ವೇಳೆ ನಗರದ ಆರ್.ಕೆ.ಗೇಟ್ ನಿವಾಸಿಗಳು, ನಮ್ಮ ಬಡಾವಣೆ ಬಳಿ ಯಾವುದೇ ಪ್ರಯೋಜನ ಇಲ್ಲದಿದ್ದರೂ ಕೇವಲ ಒಂದು ವರ್ಗದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸಲು ರೂಪಿಸುತ್ತಿರುವ ಅವೈಜ್ಞಾನಿಕ ರೈಲ್ವೆ ಅಂಡರ್ ಪಾಸ್ ಯೋಜನೆಯಿಂದ ಇಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಹಾಗಾಗಿ ಅಂಡರ್ ಪಾಸ್ ನಿರ್ಮಿಸುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಬ್ಬರೂ ಸಚಿವರು, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಸಂಸದ ಯದುವೀರ್ ಒಡೆಯರ್, ಮಾಜಿ ಮಂತ್ರಿಗಳಾದ ಡಿ.ಸಿ.ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಹಾಗೂ ಇತರರು ಇದ್ದರು.
ಮೈತ್ರಿ ಅಭ್ಯರ್ಥಿ ಗೆಲ್ಲುವ ವಿಶ್ವಾಸ!
ನಿಲ್ದಾಣ ಪರಿಶೀಲನೆ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಬೆಂಗಳೂರು ಹಾಗೂ ಮೈಸೂರು ರೈಲ್ವೆ ಮಾರ್ಗ ಪರಿಶೀಲಿಸಲಾಗಿದೆ. ಕೆಲವೆಡೆ ಲೆವೆಲ್ ಕ್ರಾಸಿಂಗ್ ಹಾಗೂ ಮೇಲ್ಸೇತುವೆ ಸಮಸ್ಯೆ ಇದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.
ಇನ್ನು ದಾವಣಗೆರೆ ಹಾಗೂ ಬಾಗಲಕೋಟೆ ಉಪಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು,
ಉಪಚುನಾವಣೆಗೆ ಮತದಾನ ಆಗಿದ್ದು, ಸಾಮಾನ್ಯವಾಗಿ ಎರಡೂ ಪಕ್ಷದಲ್ಲೂ ಹೋರಾಟವಿದೆ. ನಮ್ಮ ಮೈತ್ರಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಲ್ಲಿಕಾರ್ಜುನ ಖರ್ಗೆ ಅನುಭವಿ ರಾಜಕಾರಣಿ. ಅವರ ಹೇಳಿಕೆ ಬಗ್ಗೆ ಅವರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಇಂತಹ ಪದಬಳಕೆಗೆ ಅವರದೇ ಕಾಂಗ್ರೆಸ್ ಸರ್ಕಾರ ಕಾನೂನು ತಂದಿದೆ. ಆ ಕಾನೂನಿನ ಅಡಿಯಲ್ಲಿ ಏನು ಕ್ರಮ ಕೈಗೊಳ್ತಾರೆ ನೋಡೋಣ ಎಂದರು.
ಬಿಜೆಪಿ ಮತ್ತು ಆರೆಸ್ಸೆಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಕಿಡಿಕಾರಿದ ಸೋಮಣ್ಣ,
ಮಲ್ಲಿಕಾರ್ಜುನ ಖರ್ಗೆ ಸೀನಿಯರ್ ರಾಜಕಾರಣಿ. ಹಾಗಾಗಿ ಅವರು ಇಂತಹ ಹೇಳಿಕೆ ನೀಡಿ ಎಡವಟ್ಟು ಸೃಷ್ಟಿಸಿಕೊಳ್ಳಬಾರದು. ಇದು ಅವರ ರಾಜಕಾರಣಕ್ಕೆ ಕಪ್ಪು ಚುಕ್ಕೆಯಾಗಲಿದೆ. ಹೇಳಿಕೆ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕೊಳಕು ಮನಸ್ಥಿತಿಯನ್ನು ಜನರ ಮುಂದೆ ತೋರಿಸಬಾರದು ಎಂದು ವಾಗ್ದಾಳಿ ನಡೆಸಿದರು.
ರಾಮನಗರ, ಚನ್ನಪಟ್ಟಣ, ಮಂಡ್ಯ ಹಾಗೂ ಮೈಸೂರುವರೆಗೆ ಸಾಗುವ ಮಹತ್ವದ ಈ ರೈಲು ಮಾರ್ಗದಲ್ಲಿ ಇನ್ನು ಅಭಿವೃದ್ಧಿ ಕಾಮಗಾರಿಗಳು ಮತ್ತು ಆಗಬೇಕಿರುವ ಜನೋಪಯೋಗಿ ಕೆಲಸಗಳ ಬಗ್ಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರೊಂದಿಗೆ ಪರಿವೀಕ್ಷಣೆ ನಡೆಸಿದ್ದೇವೆ. ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತದ ರೈಲ್ವೆ ವಲಯದಲ್ಲಿ ಪರಿವರ್ತನಾತ್ಮಕ ಬೆಳವಣಿಗೆಯಾಗುತ್ತಿದೆ. ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುತ್ತಿರುವ ಪ್ರಧಾನಿ ಹಾಗೂ ರಾಜ್ಯದ ಬೇಡಿಕೆಗಳಿಗೆ ಸದಾ ಸಕಾರಾತ್ಮಕವಾಗಿ ಸ್ಪಂದಿಸುವ ಕೇಂದ್ರ ರೈಲ್ವೆ ಸಚಿವರನ್ನು ಸ್ಮರಿಸುತ್ತೇನೆ.
- ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ.