ಬಸ್ ಶೆಲ್ಟರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಹೋದ ಶಾಸಕ ಇಕ್ಬಾಲ್ ಹುಸೇನ್ ಅವರೊಟ್ಟಿಗೆ ಮಾತನಾಡುತ್ತಿರುವ ನಾಗರೀಕರು.
- ಕಟ್ಟಡ ನಿರ್ಮಾಣಕ್ಕೆ ವ್ಯಾಪಾರಸ್ಥರ ವಿರೋಧ
- ಬೇರೊಂದು ಜಾಗ ನೋಡುವುದಾಗಿ ಇಕ್ಬಾಲ್ ಹುಸೇನ್ ಹೇಳಿಕೆ
ಬಸ್ ಶೆಲ್ಟರ್ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ರಸ್ತೆ ಪಕ್ಕದ ಕಟ್ಟಡಗಳ ಮಾಲೀಕರ ವಿರೋಧದಿಂದ ಕಾಮಗಾರಿಗೆ ಚಾಲನೆ ನೀಡದೆ ವಾಪಸ್ ತೆರಳಿದರು.
ರಾಮನಗರದ ಐಜೂರು ಬಸ್ ನಿಲ್ದಾಣದ ಮೈಸೂರು ಕಡೆ ತೆರಳುವ ಪ್ರಯಾಣಿಕರ ನೆರಳಿನ ಅನುಕೂಲಕ್ಕಾಗಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಲು ಇಕ್ಬಾಲ್ ಹುಸೇನ್ ಸ್ಥಳಕ್ಕೆ ಆಗಮಿಸಿದ್ದರು.
ಪೆಟ್ರೋಲ್ ಬಂಕ್ ಪಕ್ಕದಲ್ಲಿ ಬಸ್ ಶೆಲ್ಟರ್ ನಿರ್ಮಾಣಕ್ಕೆ ಚಾಲನೆ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದರೆ ಉದ್ದೇಶಿತ ಶೆಲ್ಟರ್ ಹಿಂಭಾಗದ ರಸ್ತೆ ಪಕ್ಕದ ಕಟ್ಟಡ ಮಾಲೀಕರು ಶೆಲ್ಟರ್ ನಿರ್ಮಾಣದಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತದೆ. ಹಾಗಾಗಿ ಉದ್ದೇಶಿತ ಸ್ಥಳದಿಂದ ನೂರು ಮೀಟರ್ ಹಿಂದಕ್ಕೆ ಶೆಲ್ಟರ್ ನಿರ್ಮಿಸಿ, ಅಲ್ಲಿ ಜಾಗ ಸಹ ಖಾಲಿ ಇದೆ. ಪ್ರಯಾಣಿಕರಿಗೂ ಅನುಕೂಲ, ವ್ಯಾಪಾರಿಗಳಿಗೂ ಅನುಕೂಲ ಎಂದು ಒತ್ತಾಯಿಸಿದರು. ಕಟ್ಟಡ ಮಾಲೀಕರ ವಿರೋಧಕ್ಕೆ ಜೆಡಿಎಸ್ ಮುಖಂಡರು ಸಹ ಧ್ವನಿಗೂಡಿಸಿದ ಕಾರಣ ಶಾಸಕರು ಭೂಮಿಪೂಜೆ ನೆರವೇರಿಸದೆ ವಾಪಸ್ ಹೋದರು.
ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಪ್ರಾಧಿಕಾರದ 20 ಲಕ್ಷ ರೂ. ಅನುದಾನದಲ್ಲಿ ಸುಸಜ್ಜಿತವಾದ ಬಸ್ ಶೆಲ್ಟರ್ ನಿರ್ಮಾಣಕ್ಕೆ ಪಕ್ಕದ ಮಾಲೀಕರು ವಿರೋಧ ಮಾಡುತ್ತಿದ್ದಾರೆ, ಪ್ರಯಾಣಿಕರಿಗೆ ಮೂಲಸೌಲಭ್ಯ ಕಲ್ಪಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಳ್ಳಬೇಕು ಮಾಲೀಕರು ಸಹಕಾರ ನೀಡಬೇಕು ಎಂದರು. ಸದ್ಯ ಪ್ರಸ್ತಾಪಿಸಿರುವ ಜಾಗದ ಪಕ್ಕದಲ್ಲಿ ನಿರ್ಮಿಸುವಂತೆ ಕೆಲವರು ಸಲಹೆ ನೀಡಿದ್ದಾರೆ, ಐಜೂರು ಸರ್ಕಲ್ ಸಿಗ್ನಲ್, ಕನಕಪುರ ಸರ್ಕಲ್ ಹಾಗೂ ಹಳೇ ಬಸ್ ನಿಲ್ದಾಣ ಸರ್ಕಲ್ ಅಭಿವೃದ್ಧಿಗಾಗಿ ಯೋಜನೆ ರೂಪಿಸಲಾಗುತ್ತಿದೆ, ಅದರ ಜತೆಗೆ ಈ ಶೆಲ್ಟರ್ ನಿರ್ಮಾಣಕ್ಕೂ ಹೊಸದಾಗಿ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಮನವೊಲಿಕೆ ವಿಫಲ
ನಗರಾಭಿವೃದ್ಧಿ ಪ್ರಾಧಿಕಾರದ ನೀಲಿನೆಯಂತೆ ಕಟ್ಟಡಗಳ ಮುಂಭಾಗದಲ್ಲಿಯೇ ಶೆಲ್ಟರ್ ನಿರ್ಮಾಣಕ್ಕೆ ಯೋಜಿಸಲಾಗಿದೆ, ಅದಕ್ಕೆ ವ್ಯಾಪಾರಿಗಳು, ಕಟ್ಟಡ ಮಾಲೀಕರು ಸಹಕಾರ ನೀಡಬೇಕು ಎಂದು ಇಕ್ಬಾಲ್ ಹುಸೇನ್ ಮನವೊಲಿಸಲು ಯತ್ನಿಸಿದರಾದರೂ ಕಟ್ಟಡ ಮಾಲೀಕರು ಅದಕ್ಕೆ ಒಪ್ಪಲಿಲ್ಲ, ನಾವು ಇಲ್ಲಿ ಶೆಲ್ಟರ್ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಕಟ್ಟಡ ಮಾಲೀಕರಾದ ಜಯರಾಮೇಗೌಡ ಹಾಗೂ ಹರೀಶ್ ಮಾತನಾಡಿ, ಬಸ್ ಶೆಲ್ಟರ್ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಶೆಲ್ಟರ್ ನಿರ್ಮಾಣದಿಂದ ವ್ಯಾಪಾರಕ್ಕೆ ಅಡಚಣೆ ಮಾಡುವುದು ಬೇಡ. ಪಕ್ಕದಲ್ಲಿ ಶೆಲ್ಟರ್ ನಿರ್ಮಿಸಲಾಗಿದೆ, ಅದರ ಪಕ್ಕದಲ್ಲಿಯೂ ವಿಶಾಲ ಜಾಗವಿದೆ ಅಲ್ಲಿ ನಿರ್ಮಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದರು.