ರಾಮನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟ ಮಾವು 
ಬೆಂಗಳೂರು ದಕ್ಷಿಣ

ಮಾರುಕಟ್ಟೆಗೆ ಲಗ್ಗೆಯಿಟ್ಟ ಮಾವು

ಪ್ರಮುಖ ಮುಖ್ಯಾಂಶಗಳು

  • ಹಣ್ಣು ಪ್ರಿಯರಿಗೆ ಸಿಹಿ ಸುದ್ದಿ
  • ಹೊರ ರಾಜ್ಯಗಳಲ್ಲೂ ಹೆಚ್ಚಿದ ಬೇಡಿಕೆ
ರಾಮನಗರ
ಜಿಲ್ಲೆಯ ಮಾರುಕಟ್ಟೆಗೆ ಮಾವು ಲಗ್ಗೆ ಇಟ್ಟಿದ್ದು, ಮಾವು ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಜಿಲ್ಲೆ ರೇಷ್ಮೆಗೆ ಮಾತ್ರವಲ್ಲದೇ ಮಾವಿಗೂ ಪ್ರಸಿದ್ಧಿ ಪಡೆದಿದ್ದು, ಜಿಲ್ಲೆಯ ವಾಣಿಜ್ಯ ಬೆಳೆಯಾಗಿದೆ. ಮಾವು ವಹಿವಾಟಿಗೆ ರಾಮನಗರ ಮತ್ತು ಚನ್ನಪಟ್ಟಣ ಮಾರುಕಟ್ಟೆಗಳೇ ನಿರ್ಣಾಯಕ. ಮಾವು ವ್ಯಾಪಾರ ನಡೆಸಲು ಸ್ಥಳಿಯ ಎಪಿಎಂಸಿ ಪ್ರಾಂಗಣದಲ್ಲಿ ಮಾವು ಮಾರುಕಟ್ಟೆಗಳು ಭಾನುವಾರದಿಂದ ತೆರೆದಿದ್ದು, ಮಾರುಕಟ್ಟೆಗೆ ಪ್ರಥಮವಾಗಿ ಮಾವು ಲಗ್ಗೆ ಇಟ್ಟು ವ್ಯಾಪಾರಕ್ಕೆ ಅಣಿಯಾಗಿದೆೆ.
ಪ್ರತಿ ವರ್ಷ ಕೋಲಾರ ಮಾರುಕಟ್ಟೆಗೂ ಮೊದಲೇ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುತ್ತದೆ. ಜಿಲ್ಲೆಯ ಮಾವಿಗೆ ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಾರುಕಟ್ಟೆ ಇದ್ದು, ಬಾದಾಮಿ, ರಸಪೂರಿ, ಸೆಂಧೂರ ಮಾವಿಗೆ ಹೆೆಚ್ಚಿನ ಬೇಡಿಕೆಯಿದೆ. ಈಗಾಗಲೇ ರೈತರು ಮಾವಿನ ಕಾಯಿಗಳನ್ನು ಮಾರಾಟಕ್ಕೆ ತರುತ್ತಿದ್ದು, ಈ ಬಾರಿ ಮಾವು ವ್ಯಾಪಾರ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಸಿಹಿ ಕೊಡುತ್ತದೋ ಹುಳಿ ನೀಡುತ್ತದೋ ಕಾದು ನೋಡಬೇಕಿದೆ.

ಬಾಗಿಲು ತೆರೆದ ಮಂಡಿಗಳು

ರಾಮನಗರ-ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರ್ಚ್​ ಮೊದಲ ವಾರವೇ ಮಾವು ಮಂಡಿಗಳು ತೆರೆಯುತ್ತಿದ್ದವು. ಆದರೆ ಈ ಬಾರಿ ಸಲಿನ ಕೊರತೆಯಿಂದ ಮಾರ್ಚ್​ ಕೊನೇ ವಾರದಲ್ಲೂ ಒಂದೊಂದೇ ಮಂಡಿಗಳು ಬಾಗಿಲು ತೆರೆಯುತ್ತಿವೆ. ಪ್ರತಿ ವರ್ಷ ಸುಮಾರು 30ರಿಂದ 40 ಮಂಡಿಗಳು ವ್ಯಾಪಾರ ನಡೆಸುತ್ತಿದ್ದು, ಪ್ರಾರಂಭಿಕವಾಗಿ ಕಳೆದ ಎರಡು ದಿನಗಳಿಂದ ಮೂರ್ನಾಲ್ಕು ಮಂಡಿಗಳು ಕಾರ್ಯಾರಂಭ ಮಾಡಿವೆ.

ಹೊರ ರಾಜ್ಯಕ್ಕೆ ಜಿಲ್ಲೆಯ ಮಾವು

ಮಂಡಿ ವರ್ತಕರು ರೈತರಿಂದ ಮಾವು ಖರೀದಿಸಿ ಬೆಂಗಳೂರು ಮಾರುಕಟ್ಟೆ ಸೇರಿ ಮಹಾರಾಷ್ಟ್ರ, ದೆಹಲಿ, ಬಾಂಬೆ, ಹರಿಯಾಣ ರಾಜ್ಯಗಳ ಜತೆಗೆ ಮಾವು ಉತ್ಪನ್ನ, ತಂಪು ಪಾನೀಯ ಕಾರ್ಖಾನೆಗಳಿಗೂ ಜಿಲ್ಲೆಯ ಮಾವು ಸರಬರಾಜಾಗುತ್ತದೆ.

ಫಸಲು ಕೊರತೆ

ಕೀಟಬಾಧೆ, ಮಳೆ ಕೊರತೆ, ಜೋನಿ, ಬೂದು ರೋಗ, ವಾತಾವರಣ ಬದಲಾವಣೆ ಭೂಮಿಯಲ್ಲಿ ತೇವಾಂಶ ಕೊರತೆಯಿಂದ, ಬಿಸಿಲಿನ ತಾಪಕ್ಕೆ ಹೂ ಉದುರಿ ಕಾಯಿ ಕಚ್ಚದ ಪರಿಣಾಮ ಜತೆಗೆ ಜೋನಿರೋಗಕ್ಕೆ ಔಷಧ ಸಿಂಪಡಣೆ ಮಾಡಿದರೂ ಕೀಟ ಬಾಧೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮಾವು ಫಸಲು ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು, ಈ ಬಾರಿ ಹೆಚ್ಚಿನ ಫಸಲು ಮಾರುಕಟ್ಟೆ ಪ್ರವೇಶಿಸುತ್ತದೆಯೇ ಎಂಬ ಪ್ರಶ್ನೆ ಮೂಡಿದೆ ಎನ್ನುತ್ತಾರೆ ನಂಜಾಪುರ ರೈತ ಮತ್ತರಾಜು.

ಪ್ರಸ್ತುತ ದರ ಎಷ್ಟಿದೆ?

ಮಾರುಕಟ್ಟೆಯಲ್ಲಿ ಸೆಂಧೂರ 50ರಿಂದ 70 ರೂ., ಬಾದಾಮಿಗೆ 140ರಿಂದ 250 ರೂ., ರಸಪೂರಿ 70ರಿಂದ 120 ರೂ ಹಾಗೂ ತೋತಾಪುರಿ 30ರಿಂದ 50 ರೂ. ಆಸುಪಾಸಿನಲ್ಲಿದೆ. ಮಾರುಕಟ್ಟೆಗೆ ಹೆಚ್ಚಿನ ದಾಸ್ತಾನು ಬಂದರೆ ಹೊರ ರಾಜ್ಯದ ವ್ಯಾಪಾರಿಗಳು ಬಂದು ಮಾವು ಖರೀದಿಸುವುದರಿಂದ ಒಂದಷ್ಟು ಬೆಲೆಯಲ್ಲಿ ಏರಿಳಿತ ಕಾಣಬಹುದು. ಇಲ್ಲ ಉತ್ತಮ ಫಸಲು ಬಂದರೆ ಇನ್ನೂ ಹೆಚ್ಚಿನ ದರವೂ ಆಗಬಹುದು. ಈಗಾಗಲೇ ಮಾರುಕಟ್ಟೆಗೆ ಹೆಚ್ಚಾಗಿ ಸೆಂಧೂರ ಕಾಯಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬಾದಾಮಿ, ರಸಪೂರಿ ಮಾವು ಹೆಚ್ಚಾಗಿ ಮಾರುಕಟ್ಟೆ ಪ್ರವೇಶಿಸಬಹುದು ಎನ್ನುತ್ತಾರೆ ಮಂಡಿ ವರ್ತಕರು.
ಜಿಲ್ಲೆಯ ಮಾವಿಗೆ ಹೊರ ರಾಜ್ಯದಲ್ಲಿ ಬೇಡಿಕೆ ಇದೆ. ಬಾಂಬೆ, ದೆಹಲಿ, ಮಹಾರಾಷ್ಟ್ರ ಮುಂತಾದ ಕಡೆ ಉತ್ತಮ ಹಣ್ಣಿನ ತೊಟ್ಟಿನ ಕಾಯಿಗಳನ್ನು ರೈತರಿಂದ ಕೊಂಡು ಈ ವೇಳೆಗಾಗಲೇ ಹಣ್ಣಿಗೆ ಕಳುಹಿಸಲಾಗುತ್ತಿತ್ತು. ಹೊರ ರಾಜ್ಯಕ್ಕೆ ಕಳಿಸುವ ಮಾವಿನಕಾಯಿಗಳು ಉತ್ತಮವಾಗಿರಬೇಕು. ಈ ವರ್ಷ ಜಿಲ್ಲೆಯಲ್ಲಿ ಮಾವು ಸಲು ಉತ್ತಮವಾಗಿರದ ಕಾರಣ ಮಾರುಕಟ್ಟೆಗೆ ಬಂದ ಕಾಯಿಗಳನ್ನು ಸ್ಥಳಿಯವಾಗಷ್ಟೇ ವ್ಯಾಪಾರ ಮಾಡಲಾಗುತ್ತಿದೆ.
> ಅಸ್ಲಂ ಪಾಷ, ಎಬಿಆರ್​ ಮಾವಿನಕಾಯಿ ಮಂಡಿ ವರ್ತಕ, ರಾಮನಗರ.
ಬಿಸಿಲಿನ ಝಳ, ಜೋನಿ, ಬೂದು ರೋಗ ಹೊಡೆತದಿಂದ ಶೇ.10 ಫಸಲು ಸಿಗುವುದು ಕಷ್ಟವಾಗಿದೆ. ಮರಗಳಲ್ಲಿ ವಿರಳವಾಗಿ ಕಾಯಿಗಳು ಕಚ್ಚಿದ್ದು, ಅವು ದಪ್ಪವಾಗಿಲ್ಲ. ಔಷಧ ಖರ್ಚಿನ ಹಣವೂ ಕಾಣದಾಗಿದೆ. ಕಳೆದ ವರ್ಷವೂ ಬೆಲೆ ಸಿಗದೆ ನಷ್ಟವಾಗಿತ್ತು. ಲೋಡ್​ಗಟ್ಟಲೆ ಮಾರುಕಟ್ಟೆಗೆ ಫಸಲು ಹೋಗುವ ಕಾಲದಲ್ಲಿ ಒಂದೆರಡು ಬುಟ್ಟಿ ತೆಗೆದುಕೊಂಡು ಹೋಗಿ ವ್ಯಾಪಾರ ಮಾಡಬೇಕಿದೆ. ಮಾವು ಕಳೆದ ವರ್ಷದಿಂದ ರೈತನಿಗೆ ಸಿಹಿ ತರುವ ಬದಲು ಹುಳಿ ಉಣಿಸುತ್ತಿದೆ.
> ಗೋಪಾಲನಾಯ್ಕ, ಮಾವು ಬೆಳೆಗಾರ ರೈತ ದೇವರದೊಡ್ಡಿ.