ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಇಕ್ಬಾಲ್ ಹುಸೇನ್.
- ಮುಕ್ತಾಯದ ಹಂತದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ
- ಶಾಸಕ ಇಕ್ಬಾಲ್ ಹುಸೇನ್ ಮಾಹಿತಿ
ಮಂಚನಬೆಲೆ ಜಲಾಶಯದಿಂದ ರಾಮನಗರ ತಾಲೂಕಿನ ಕಸಬಾ ಮತ್ತು ಕೈಲಾಂಚ ಹೋಬಳಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರವೇ ಮುಕ್ತಾಯವಾಗಲಿದೆ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.
ತಾಲೂಕಿನ ಮಂಚನಬೆಲೆ ಬಳಿ ಮಂಚನಬೆಲೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸ್ಥಳ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರದಲ್ಲಿ ಇರುವಷ್ಟು ನೀರಿನ ಹಾಹಾಕಾರ ರಾಜ್ಯದ ಬೇರೆ ಯಾವ ಜಿಲ್ಲೆ ಹಾಗೂ ನಗರದಲ್ಲಿ ಇಲ್ಲ. ಈ ಯೋಜನೆ ೪೬೪ ಕೋಟಿ ರೂ. ವೆಚ್ಚದಾಗಿದ್ದು, ಈಗಾಗಲೇ ಚಾಲನೆ ನೀಡಲಾಗಿ, ಕೆಲಸ ಪ್ರಗತಿಯಲ್ಲಿದೆ. ಯೋಜನೆ ಮುಖಾಂತರ ರಾಮನಗರ ತಾಲೂಕಿನ ಕಸಬಾ ಹಾಗೂ ಕೈಲಾಂಚ ಹೋಬಳಿಯ 118 ಗ್ರಾಮಗಳಿಗೆ ನೀರಿನ ಸೌಲಭ್ಯ ದೊರಕಲಿದೆ. ನೀರು ಪೂರೈಕೆಯಾಗಲಿರುವ ಪ್ರತಿ 118 ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣವಾಗಲಿದೆ. ಯೋಜನೆಯಲ್ಲಿನ ಶೇ.50ರಷ್ಟು ಕಾಮಗಾರಿಯು ಮುಕ್ತಾಯವಾಗಿದ್ದು, ಶೀಘ್ರದಲ್ಲಿಯೇ ಈ ಯೋಜನೆ ಮುಕ್ತಾಯವಾಗಲಿದೆ ಎಂದರು.
ನೀರು ಶುದ್ಧೀಕರಣ:
65ರಿಂದ 70 ಸಾವಿರ ಜನ ಸಂಖ್ಯೆ ಇರುವ ಕಸಬಾ ಹಾಗೂ ಕೈಲಾಂಚ, ಮಾಗಡಿ ಹಾಗೂ ಬಿಡದಿ ಕೆಲವು ಭಾಗಗಳಿಗೆ ಈ ಯೋಜನೆ ಮುಖಾಂತರ ಕುಡಿಯುವ ನೀರು ಪೂರೈಕೆಯಾಗಲಿದೆ. ನಗರ ಪ್ರದೇಶಕ್ಕೆ ಈಗಾಗಲೇ ನೆಟ್ಕಲ್ ಜಲಾಶಯದ ಮುಖಾಂತರ ನೀರು ಪೂರೈಸಲಾಗುತ್ತಿದೆ. ಗ್ರಾಮಗಳಿಗೆ ಗುರುತ್ವಾಕರ್ಷಣ ಬಲದ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತದೆ. ಯೋಜನೆಯ ಮೊದಲ ಹಾಗೂ ಕೊನೆಯ ಭಾಗದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಮಾಡಲಾಗುತ್ತಿದೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.
ಈ ವೇಳೆ ಸುಗ್ಗನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಪುಟ್ಟಸ್ವಾಮಿ, ಗೋವಿಂದರಾಜು, ಮುಖಂಡರಾದ ವಾಸು, ವಸಂತಾ ಮತ್ತು ಮತ್ತು ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.