ಕನಕಪುರ: ಸಾಮಾಜಿಕ ಜಾಲತಾಣದ ಮೂಲಕ ಅಂಗವಿಕಲ ಯುವತಿಗೆ ಅಶ್ಲೀಲ ಚಿತ್ರಗಳನ್ನು ಕಳಿಸಿ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರು ಕಾಮಾ ಪಾಳ್ಯ ಬಾರ್ ಒಂದರಲ್ಲಿ ಕೆಲಸ ಮಾಡುವ ರಮೇಶ್(32) ಬಂಧಿತ. ಈತ ಮೂರು ತಿಂಗಳಿಂದ ಫೋಟೋ, ವಿಡಿಯೋಗಳನ್ನು ಕಳುಹಿಸುತ್ತಿದ್ದ, ಪದೇಪದೆ ವಿಡಿಯೋ ಕರೆ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಕ್ಕೂ ಮುನ್ನ ಮಂಡ್ಯ ಜಿಲ್ಲೆ ಕುರುಬರದೊಡ್ಡಿಯ ಮಂಜುನಾಥ್ ಎಂಬಾತ ಸ್ನೇಹ ಬೆಳೆಸಿ, ಮನೆ ನಿರ್ಮಾಣಕ್ಕೆ ಎಂದು ಹಂತಹಂತವಾಗಿ 3.50 ಲಕ್ಷ ರೂ ಸಾಲ ಪಡೆದು ವಂಚಿಸಿದ್ದಾನೆ, ಹಣ ವಾಪಾಸ್ ಕೇಳಿದಾಗ ಮಂಜುನಾಥ್ ಮಾನಸಿಕ ಹಿಂಸೆ ನೀಡುತ್ತಿದ್ದ. ನಂತರ ಆತನ ಸ್ನೇಹಿತ ರಮೇಶ್ಗೆ ನನ್ನ ದೂರವಾಣಿ ಸಂಖ್ಯೆ ನೀಡಿದ್ದ. ಬಳಿಕ ಆತನೂ ಅಶ್ಲೀಲ ವಿಡಿಯೋ ಕಳುಹಿಸುವುದಲ್ಲದೇ ಅವಾಚ್ಯವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ನೊಂದ ಯುವತಿ ದೂರು ನೀಡಿದ್ದರು.
ರಮೇಶ್ ಬೆಂಗಳೂರು ಕಾಮಾಪಾಳ್ಯದಲ್ಲಿ ಇರುವ ಖಚಿತ ಮಾಹಿತಿ ಆಧರಿಸಿ ಗ್ರಾಮಾಂತರ ಠಾಣಾ ಸಬ್ ಇನ್ಸ್ಪೆಕ್ಟರ್ ಆಕಾಶ್ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.