ಮಾಗಡಿ ಗೌರಮ್ಮ ಕೆರೆ ರಸ್ತೆ 
ಬೆಂಗಳೂರು ದಕ್ಷಿಣ

ಗಬ್ಬು ನಾರುತ್ತಿದೆ ಮಾಗಡಿ ಗೌರಮ್ಮಕೆರೆ ಮುಖ್ಯರಸ್ತೆ

ಪ್ರಮುಖ ಮುಖ್ಯಾಂಶಗಳು

  • `ಮಂದಗತಿಯ ಕಾಮಗಾರಿ' ಕೆರೆಯಂತಾದ ರಸ್ತೆ
  • 2ವರ್ಷಗಳಾದರೂ ಮುಗಿಯದ ವೈಟ್‌ಟಾಪಿಂಗ್
  • ಹಾಳಾದ ಮ್ಯಾನ್‌ಹೋಲ್, ಒಳಚರಂಡಿ
  • ಕೊಳಚೆ ನೀರು ದುರ್ನಾತದಿಂದ ಬೇಸತ್ತ ಜನ
ಮಾಗಡಿ
ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಒಂದಾದ ಗೌರಮ್ಮಕೆರೆ ಮುಖ್ಯರಸ್ತೆಯ ಕಾಮಗಾರಿ ವಿಳಂಬ ಹಾಗೂ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಮತ್ತು ವಾಹನ ಸವಾರರು ಪ್ರತಿದಿನ ನರಕಯಾತನೆ ಅನುಭವಿಸುವಂತಾಗಿದೆ. ಗುತ್ತಿಗೆದಾರರ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಮಹಾತ್ಮಗಾಂಧೀಜಿ ವೃತ್ತದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಸುಮಾರು 2 ಕಿ.ಮೀ.ರಸ್ತೆ ವೈಟ್ ಟಾಪಿಂಗ್ ಕಾಮಗಾರಿ ಆರಂಭಗೊಂಡು 2 ವರ್ಷಗಳಾಗಿದ್ದು, ಇನ್ನೂ ಮುಗಿದಿಲ್ಲ. ಈ ಮಧ್ಯೆ ಗೌರಮ್ಮಕೆರೆಯ ಬಳಿ ಕಾಮಗಾರಿ ಅವೈಜ್ಞಾನಿಕತೆಯಿಂದ ಕೂಡಿದೆ ಎಂಬ ಆರೋಪವೂ ಕೇಳಿಬಂದಿದೆ.
ಕೊಳಚೆ ನೀರಿನಿಂದ ದುರ್ನಾತ: ಕಳೆದ 15 ದಿನಗಳಿಂದ ಸುಮಾರು ಒಂದೂವರೆ ಅಡಿ ಆಳಕ್ಕೆ ರಸ್ತೆಯನ್ನು ಒಂದು ಕಡೆ ಅಗೆದು ಬಿಟ್ಟಿರುವುದರಿಂದ ಅರ್ಧ ರಸ್ತೆಯಲ್ಲಿ ಓಡಾಡಲಾಗುತ್ತಿದೆ. ಈ ವೇಳೆ ಸಾಕಷ್ಟು ಮಂದಿ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಒಳಚರಂಡಿ, ಮ್ಯಾನ್‌ಹೋಲ್‌ಗಳು ಒಡೆದು ಹಾಳಾಗಿರುವುದರಿಂದ ರಸ್ತೆಯಲ್ಲಿ ಕೊಳಚೆ ನೀರು ನಿಂತು ಕೆರೆಯಂತಾಗಿದೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶ ಗಬ್ಬು ನಾರುತ್ತಿದೆ. ಈ ರಸ್ತೆಯಲ್ಲಿ ನಿತ್ಯ ಓಡಾಡುವ ಸಾವಿರಾರು ವಿದ್ಯಾರ್ಥಿಗಳು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಇದೇ ರಸ್ತೆ ಬದಿಯಲ್ಲಿ ಹೋಟೆಲ್ ಇದೆ. ಮೂಗು ಮುಚ್ಚಿಕೊಂಡೇ ಉಪಾಹಾರ, ಊಟ ಸೇವಿಸಬೇಕು, ಸುತ್ತಮುತ್ತಲ ಮನೆಯವರು ದುರ್ವಾಸನೆಗೆ ಸದಾ ಮನೆಬಾಗಿಲು ಮುಚ್ಚಿದ್ದಾರೆ.

ಹೊಣೆ ಯಾರದು?

ರಸ್ತೆ ಕಾಮಗಾರಿ ವೇಳೆ ಒಳಚರಂಡಿ, ಮ್ಯಾನ್‌ಹೋಲ್‌ಗಳು ಹಾಳಾಗಿ 6 ತಿಂಗಳಾದರೂ ಪುರಸಭೆ ದುರಸ್ತಿಗೆ ಮುಂದಾಗಿಲ್ಲ. ಪರಿಸ್ಥಿತಿ ಬೇರೆಯದೇ ತೆರನಾಗಿರುವಾಗ ರಸ್ತೆ ಕಾಮಗಾರಿ ಮಾಡುವುದಾದರೂ ಹೇಗೆ ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಾದ, ಪುರಸಭೆ ಅಧಿಕಾರಿಗಳು ಈ ರಸ್ತೆಗೂ ನಮಗೂ ಸಂಬಂಧವಿಲ್ಲ ಎನ್ನುತ್ತಾರೆ.

ಸಂಚಾರಕ್ಕೆ ಅಡ್ಡಿ

ಪಟ್ಟಣದ ಬಹುತೇಕ ಸರ್ಕಾರಿ ಕಚೇರಿ, ಶಾಲೆ ಮತ್ತು ಕಾಲೇಜುಗಳಿಗೆ ಈ ರಸ್ತೆಯಲ್ಲೇ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದೇ ರಸ್ತೆಯನ್ನು ಅವಲಂಬಿಸಿದ್ದು, ರಸ್ತೆ ಅಗೆದಿರುವುದರಿಂದ ಸಂಚಾರಕ್ಕೆ ದಾರಿಯೇ ಇಲ್ಲದಂತಾಗಿದೆ.

ಟಿಪ್ಪರ್‌ಗಳ ಸಂಚಾರ ಹೆಚ್ಚು

ಗೌರಮ್ಮನ ಕೆರೆ ಅಭಿವೃದ್ಧಿಗಾಗಿ ಕೆರೆ ಮಣ್ಣನ್ನು ಹೊತ್ತೊಯ್ಯುವ 10ಕ್ಕೂ ಹೆಚ್ಚು ಟಿಪ್ಪರ್ ಲಾರಿಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಹಾಗಾಗಿ ರಸ್ತೆಯೆಲ್ಲ ಧೂಳುಮಯ. ರಸ್ತೆಗೆ ನೀರು ಸಿಂಪಡಿಸದ ಕಾರಣ ನಾಗರಿಕರು ಓಡಾಡದಸ್ಥಿತಿ ತಲುಪಿದೆ. ಈ ರಸ್ತೆ ಬದಿಯ ಕೆಲ ಅಂಗಡಿಗಳ ಮಾಲೀಕರು ಧೂಳಿನಿಂದಾಗಿ ಅಂಗಡಿಗಳನ್ನೇ ಮುಚ್ಚಿದ್ದಾರೆ. ನೀರು ಸಿಂಪಡಿಸುವಂತೆ ಸಂಬಂಧಪಟ್ಟವರಿಗೆ ತಿಳಿಸಿದರೆ ಸ್ಥಳೀಯರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಕ್ಯಾರೆ ಎನ್ನುತ್ತಿಲ್ಲ.
ಗೌರಮ್ಮಕೆರೆ, ಟಿಎ.ರಂಗಯ್ಯ ಲೇಔಟ್ ಮಾರ್ಗದಿಂದ ಬರುವ ವಾಹನಗಳಿಗೆ ಸಂಚರಿಸಲು ದಾರಿಯೇ ಇಲ್ಲದಂತಾಗಿದೆ. ಸಾರ್ವಜನಿಕರ ಕಷ್ಟಕ್ಕೆ ಸಂಬಂಧಪಟ್ಟವರು ಸ್ಪಂದಿಸಬೇಕು. ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು.
| ಎಲ್‌ಐಸಿ ಎಚ್. ಕುಮಾರ್ ತಾಲೂಕು ಪ್ರಧಾನ ಕಾರ್ಯದರ್ಶಿ, ಕುರುಬರ ಸಂಘ, ಮಾಗಡಿ