ಮಾಗಡಿ ಬಸವೇಶ್ವರ ವೃತ್ತದ ಬಳಿಯ ತಾತ್ಕಾಲಿಕ ತಾಲೂಕು ಕಚೇರಿ ಕಟ್ಟಡ. 
ಬೆಂಗಳೂರು ದಕ್ಷಿಣ

ಮಾಗಡಿ ಸಮಸ್ಯೆಗಳ ಮಹಾಗಣಿ!

ಮಾಗಡಿ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ವಿವಿಧ ಅರ್ಜಿಗಳ ವಿಲೇವಾರಿ ಹಾಗೂ ದಾಖಲೆಗಳ ವಿತರಣೆ ಪ್ರಕ್ರಿಯೆ ತೀವ್ರ ವಿಳಂಬವಾಗುತ್ತಿದ್ದು, ಸಾರ್ವಜನಿಕರು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕು ಆಡಳಿತದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸೇರಿ ನೂರಾರು ಜನ ದಿನಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾದ ದುಸ್ಥಿತಿ ಎದುರಾಗಿದ್ದು, ಮಾಗಡಿ ಸಮಸ್ಯೆಗಳ ಮಹಾಗಣಿಯಾಗುತ್ತಿದೆ. ಹೈಟೆಕ್​ ಆಸ್ಪತ್ರೆ ನಿರ್ಮಾಣದ ಉದ್ದೇಶದಿಂದ ಹಳೆಯ ತಾಲೂಕು ಕಚೇರಿ ಕಟ್ಟಡ ತೆರವುಗೊಳಿಸಲಾಗಿದ್ದು, ಸದ್ಯ ಕಚೇರಿಯನ್ನು ಶ್ರೀ ಬಸವೇಶ್ವರ ವೃತ್ತದ ಡಾ.ಶಿವಕುಮಾರ ಸ್ವಾಮೀಜಿ ಆಡಿಟೋರಿಯಂ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಆದರೆ, ಈ ತಾತ್ಕಾಲಿಕ ಕಚೇರಿಯಲ್ಲಿ ಸಮರ್ಪಕ ಕುಡಿಯುವ ನೀರು ಹಾಗೂ ಶೌಚಗೃಹದ ವ್ಯವಸ್ಥೆಯೂ ಇಲ್ಲದಂತಾಗಿದೆ. ಕಚೇರಿ ಮುಂದೆ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಓಡಾಡಲು ಪರದಾಡುವಂತಾಗಿದೆ. ಕನಿಷ್ಠ ತುರ್ತು ಸಂದರ್ಭದಲ್ಲಿ ತಹಸೀಲ್ದಾರ್​ ವಾಹನವೂ ಸಂಚರಿಸದಷ್ಟು ಟ್ರಾಫಿಕ್​ ಕಿರಿಕಿರಿ ಉಂಟಾಗುತ್ತಿದೆ.
ಸರ್ವರ್​ ಸಮಸ್ಯೆ
ಕಚೇರಿಗೆ ಪ್ರತಿನಿತ್ಯ ನೂರಕ್ಕೂ ಹೆಚ್ಚು ಮಂದಿ ವಿವಿಧ ಅರ್ಜಿಗಳನ್ನು ಸಲ್ಲಿಸಲು ಬರುತ್ತಿದ್ದರೂ, ಕೇವಲ ಒಂದೇ ಒಂದು ಕೌಂಟರ್​ ತೆರೆದಿರುವುದು ಜನದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಈ ನಡುವೆ ನಿರಂತರ ಸರ್ವರ್​ ಸಮಸ್ಯೆ ಹಾಗೂ ಪದೇಪದೆ ವಿದ್ಯುತ್​ ಕೈಕೊಡುವುದರಿಂದ ಇಡೀ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದೆ. ಆದಾಯ, ಜಾತಿ ಪ್ರಮಾಣಪತ್ರ, ಪಹಣಿ, ಮ್ಯುಟೇಷನ್​ ಹಾಗೂ ಹಳೆಯ ದಾಖಲೆಗಳ ಸ್ಕಾ$ನಿಂಗ್​ ಪ್ರತಿಗಳನ್ನು ಪಡೆಯಲು ಬರುವ ಜನಸಾಮಾನ್ಯರು ಕಚೇರಿಯ ವಿವಿಧ ಇಲಾಖೆಗಳ ನಡುವೆ ದಿನಗಟ್ಟಲೆ ಅಲೆಯುವಂತಾಗಿದೆ.
ಸಿಗದ ಸೋಲೂರು ದಾಖಲೆ
ಸೋಲೂರು ಹೋಬಳಿಯನ್ನು ತರಾತುರಿಯಲ್ಲಿ ನೆಲಮಂಗಲ ತಾಲೂಕಿಗೆ ಸೇರ್ಪಡೆಗೊಳಿಸಲಾಗಿದೆ. ಆದರೆ ಸೋಲೂರು ಹೋಬಳಿಯ ಸಮರ್ಪಕವಾದ ದಾಖಲೆ ಪತ್ರಗಳನ್ನು ನೆಲಮಂಗಲ ತಾಲೂಕು ಕಚೇರಿಗೆ ಇನ್ನೂ ವರ್ಗಾಯಿಸಿಲ್ಲ. ಇದರಿಂದಾಗಿ ಸೋಲೂರು ಹೋಬಳಿಯ ನೂರಾರು ಜನ ಪ್ರತಿನಿತ್ಯ ಮಾಗಡಿ ಕಚೇರಿಗೆ ಅಲೆದರೂ, 'ನೆಲಮಂಗಲ ತಾಲೂಕು ಕಚೇರಿಯಲ್ಲೆ ದಾಖಲೆ ಪಡೆಯಿರಿ' ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ಬರಿಗೈಲಿ ವಾಪಸ್​ ಹೋಗುವಂತಾಗಿದೆ.
ಮಾಹಿತಿ ಕೊರತೆ, ಸಾರ್ವಜನಿಕರ ಅಳಲು
ಕಚೇರಿಯಲ್ಲಿ ಕುಳಿತುಕೊಳ್ಳಲು ಸೂಕ್ತ ಆಸನಗಳಿಲ್ಲ, ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಸಣ್ಣ ಕೆಲಸಕ್ಕೂ ವಾರಗಟ್ಟಲೆ ಅಲೆಯಬೇಕಾಗಿದೆ ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಟನೆಗಳ ಪದಾಧಿಕಾರಿಗಳು ದೂರಿದ್ದಾರೆ. ಶಾಸಕ ಎಚ್​.ಸಿ. ಬಾಲಕೃಷ್ಣ ಅವರು ಹೊಸ ತಾಲೂಕು ಕಚೇರಿ ಹಾಗೂ ಆಸ್ಪತ್ರೆ ನಿರ್ಮಾಣಕ್ಕೆ ಶ್ರಮವಹಿಸಿ ಕಟ್ಟಡಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಸ್ಥಳಿಯ ಅಧಿಕಾರಿಗಳು ಇರುವ ಜಾಗದಲ್ಲೆ ನಾಗರಿಕರಿಗೆ ಕನಿಷ್ಠ ಸೌಲಭ್ಯ ಒದಗಿಸದೆ ಇರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ. ಕಚೇರಿ ಸ್ಥಳಾಂತರಗೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಪ್ರಚಾರ ನೀಡದ ಕಾರಣ, ಜನ ಇನ್ನೂ ಹಳೆಯ ಕಚೇರಿಗೆ ಅಲೆದಾಡುತ್ತಿದ್ದಾರೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ತಣವೇ ಮಧ್ಯಪ್ರವೇಶಿಸಿ, ಹೆಚ್ಚುವರಿ ಕೌಂಟರ್​ಗಳನ್ನು ತೆರೆಯುವ ಮೂಲಕ ಸರ್ವರ್​ ಸಮಸ್ಯೆ ನಿವಾರಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ಶ್ರೀವಾಗಿ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರತಿಕ್ರಿಯೆಗೆ ಸಿಗದ ತಹಸೀಲ್ದಾರ್​!
ತಾತ್ಕಾಲಿಕ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪ್ರತಿಕ್ರಿಯೆ ಪಡೆಯಲು ಮಾಗಡಿ ತಹಸೀಲ್ದಾರ್​ ಕೆ.ಆರ್​.ರಂಜಿತ್​ ಅವರಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸುತ್ತಿಲ್ಲ. ಇನ್ನು ಕಚೇರಿಯಲ್ಲೂ ಅವರು ಸಾರ್ವಜನಿಕರಿಗೆ ಹೆಚ್ಚಾಗಿ ಲಭ್ಯವಿರುವುದಿಲ್ಲ ಎಂಬ ದೂರುಗಳು ಕೇಳಿಬಂದಿವೆ.