ನಿವೃತ್ತಿ ಹೊಂದಿದ ಬಾಂಬ್​ ಪತ್ತೆ ದಳದ ಲಕ್ಕಿ.  
ಬೆಂಗಳೂರು ದಕ್ಷಿಣ

ಬಾಂಬ್​ ಪತ್ತೆ ದಳಕ್ಕೆ ಲಕ್​ನಂತಿದ್ದ ಲಕ್ಕಿ!

ಪ್ರಮುಖ ಮುಖ್ಯಾಂಶಗಳು

  • 9 ವರ್ಷ ಸುದೀರ್ಘ ಸೇವೆ ಬಳಿಕ ನಿವೃತ್ತಿ
  • ಜಿಲ್ಲಾ ಪೊಲೀಸ್​ ಇಲಾಖೆಯಿಂದ ಬೀಳ್ಕೊಡುಗೆ
  • ಹಲವು ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಮಹತ್ವದ ಪಾತ್ರ
ರಾಮನಗರ
ಉಗ್ರಗಾಮಿಗಳು ಎಂದರೆ ದಿನಪತ್ರಿಕೆ, ಮಾಧ್ಯಮಗಳಲ್ಲಿ ನೋಡುತ್ತ ಕಾಲ ಕಳೆಯುತ್ತಿದ್ದ ಜಿಲ್ಲೆಯ ಜನತೆಗೆ ಒಂದು ದಿನ ಮುಂಜಾನೆಯೇ ಬೆಚ್ಚಿ ಬೀಳುವಂತಹ ಸುದ್ದಿಯೊಂದು ಹೊರ ಬಂದಿತ್ತು.
 ರಾಮನಗರದಲ್ಲಿ ಉಗ್ರನೊಬ್ಬ ಅಡಗಿದ್ದಾನೆ ಎನ್ನುವ ಜಾಡು ಹಿಡಿದು ಬಂದಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ)ಯು ಅಬ್ದುಲ್​ ರೆಹಮಾನ್​ ಎಂಬಾತನನ್ನು ಬಂಧಿಸಿತ್ತು. ಈ ವೇಳೆ ಅವನ ಬಳಿ ಉಗ್ರ ಕೃತ್ಯಕ್ಕೆ ಬಳಸುವ ಹಲವಾರು ವಸ್ತುಗಳು ಇವೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಿ, ಎಲ್ಲರೂ ಆತಂಕದಿಂದಲೇ ಕಾಲ ಕಳೆಯುವಂತೆ ಮಾಡಿತ್ತು. ಇಂತಹ ಸನ್ನಿವೇಶದಲ್ಲಿ ಆತಂಕ ದೂರ ಮಾಡಿದ್ದು ಲಕ್ಕಿ...!
ಹೌದು..! ಆತಂಕಕಾರಿ ವಸ್ತುಗಳನ್ನು ಚಾಣಾಕ್ಷತನದಿಂದಲೇ ಪತ್ತೆ ಮಾಡಿದ್ದ ಲಕ್ಕಿ, ಎನ್​ಐಎಗೆ ಸಾಥ್​ ನೀಡುವ ಜತೆಗೆ ನಗರದ ಜನತೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತೆ ಮಾಡಿತ್ತು. ಅರೆ..... ಯಾರು ಈ ಲಕ್ಕಿ ಎಂದಿರಾ? ಅದು ಶ್ವಾನ. 
ಜಿಲ್ಲೆಯ ಪೊಲೀಸ್​ ಶ್ವಾನದಳದಲ್ಲಿ ಮುಂಚೂಣಿಯಲ್ಲಿದ್ದ ಜರ್ಮನ್​ ಶೆರ್ಡ್​ ಜಾತಿಯ ತರಬೇತಿ ಹೊಂದಿದ ಶ್ವಾನ. ಅದರ ಹೆಸರು ಲಕ್ಕಿ. ಸುದೀರ್ 9 ವರ್ಷಗಳ ಸೇವೆಯಲ್ಲಿ 485 ಪ್ರಕರಣಗಳಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿ ಪೊಲೀಸ್​ ಇಲಾಖೆಯಲ್ಲಿ ಸೈ ಎನಿಸಿಕೊಂಡ ಕರ್ತವ್ಯನಿಷ್ಠ ಲಕ್ಕಿಗೆ ಈಗ ನಿವೃತ್ತಿಯ ಸಮಯ. ಹಲವಾರು ಪ್ರಮುಖ ಸಂದರ್ಭದಲ್ಲಿ ಪೊಲೀಸ್​ ಇಲಾಖೆಗಾಗಿ ಪ್ರಾಣವನ್ನೂ ಪಣಕ್ಕಿಟ್ಟ ಶ್ವಾನಕ್ಕೆ ಇಲಾಖೆಯು ಭಾರವಾದ ಹೃದಯದಿಂದಲೇ ಬೀಳ್ಕೊಡುಗೆ ನೀಡಿದ್ದು, ಭಾವನಾತ್ಮಕ ಕ್ಷಣಕ್ಕೆ ಚನ್ನಪಟ್ಟಣದ ಪೊಲೀಸ್​ ಪರೇಡ್​ ಮೈದಾನ ಸಾಕ್ಷಿಯಾಗಿತ್ತು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೇರಿ ಎಲ್ಲರೂ ವಂದಿಸುವ ಮೂಲಕ ಲಕ್ಕಿಯ ನಿವೃತ್ತ ಜೀವನಕ್ಕೆ ಶುಭ ಕೋರಿದರು.

ಇದುವೇ ಡಾನ್​....!

ಕಳೆದ 2016ರ ನವೆಂಬರ್​ 26ರಂದು ಜನಿಸಿರುವ ಜರ್ಮನ್​ ಶೆರ್ಡ್​ ಜಾತಿಯ ಲಕ್ಕಿಯನ್ನು 2017ರ ಮಾರ್ಚ್​ 27ರಂದು ಜಿಲ್ಲಾ ಪೊಲೀಸ್​ ಶ್ವಾನ ದಳಕ್ಕೆ ನೇಮಿಸಿಕೊಳ್ಳಲಾಯಿತು. ನಂತರ ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದುಕೊಂಡ ಲಕ್ಕಿ, ಬಾಂಬ್​ ಪತ್ತೆ ದಳದ ಡಾನ್​ ಆಗಿ 9 ವರ್ಷ ಸುದೀರ್ ಸೇವೆ ಸಲ್ಲಿಸಿದೆ.
ರಾಜ್ಯದ ಮುಖ್ಯಮಂತ್ರಿಯೇ ಆಗಿರಲಿ, ದೇಶದ ಪ್ರಧಾನಿ, ರಾಷ್ಟ್ರಪತಿಯೇ ಆಗಿರಲಿ, ವಿದೇಶೀ ಗಣ್ಯ ವ್ಯಕ್ತಿಗಳೇ ದೇಶಕ್ಕೆ ಬರಲಿ, ಇವರ ಭದ್ರತೆಯ ಭಾಗವಾಗಿ ಲಕ್ಕಿ ಕರ್ತವ್ಯ ನಿರ್ವಹಿಸಿದೆ. ಇನ್ನು ಪ್ರಮುಖ ಸ್ಥಳಗಳಿಗೆ ಅಪಾಯವಿದೆ ಎನ್ನುವ ಸೂಚನೆ ದೊರೆಯುತ್ತಿದ್ದಂತೆ ಲಕ್ಕಿಯ ಮುಂದಾಳತ್ವದಲ್ಲಿಯೇ ಪರಿಶೀಲನೆ ನಡೆಯುತಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೂ ಆಯೋಜನೆಗೊಳ್ಳುತ್ತಿದ್ದ ಕ್ರಿಕೆಟ್​ ಪಂದ್ಯಗಳಿಗೂ ಲಕ್ಕಿ ಅಭಯ ನೀಡಿದೆ. ಹೀಗೆ ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳಲ್ಲಿಯೂ ಲಕ್ಕಿ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಡಾನ್​ ಆಗಿ ಮೆರೆದಿದೆ. ಹಲವಾರು ಬಾರಿ ಪ್ರಶಸ್ತಿ ಮತ್ತು ಪ್ರಶಂಸೆಗಳನ್ನೂ ಬಾಚಿಕೊಂಡಿದೆ.

ಲಾಂಚರ್​ ಪತ್ತೆ ಮಾಡಿತ್ತು!

ಕಾವೇರಿ ನದಿ ಪಾತ್ರದಲ್ಲಿ ಅನುಮಾನಾಸ್ಪದವಾಗಿ ಮರಳಿನಲ್ಲಿ ಉದುಗಿ ಹೋಗಿದ್ದ ರಾಕೆಟ್​ ಲಾಂಚರ್​ಗಳು ಪತ್ತೆಯಾಗಿದ್ದವು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡೇ ಇರುವ ಈ ಪ್ರದೇಶದಲ್ಲಿ ಲಾಂಚರ್​ಗಳ ಪತ್ತೆ ನಕ್ಸಲ್​ ಇಲ್ಲವೇ ಉಗ್ರರ ಚಟುವಟಿಕೆಯ ಗುಮಾನಿಯನ್ನು ಹುಟ್ಟಿಹಾಕಿತ್ತು. ಬಾಂಬ್​ ಪತ್ತೆ ವಿಚಾರದಲ್ಲಿ ಅದಾಗಲೇ ಸೈ ಎನಿಸಿಕೊಂಡಿದ್ದ ಲಕ್ಕಿ ಅಖಾಡಕ್ಕೆ ಇಳಿದು, ಹಲವಾರು ಲಾಂಚರ್​ಗಳನ್ನು ಪತ್ತೆ ಮಾಡಿಕೊಟ್ಟಿತ್ತು. ನಂತರ ಇವು ಭಾರತೀಯ ಸೈನ್ಯಕ್ಕೆ ಸೇರಿದ್ದ ಲಾಂಚರ್​ಗಳು, ತರಬೇತಿ ವೇಳೆ ಬಿಟ್ಟು ಹೋಗಲಾಗಿದೆ ಎನ್ನುವುದು ಖಾತ್ರಿ ಆಗಿತ್ತು.

ನಿವೃತ್ತಿ ಬದುಕು

9 ವರ್ಷಗಳ ಸುದೀರ್ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಲಕ್ಕಿಗೆ ಶುಕ್ರವಾರ ಜಿಲ್ಲಾ ಪೊಲೀಸರಿಂದ ಬೀಳ್ಕೊಡುಗೆ ನೀಡಲಾಯಿತು. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಲಕ್ಕಿಯ ಹ್ಯಾಂಡಲರ್​ಗಳಾದ ಎಲ್​.ಶ್ರೀನಿವಾಸ್​ ಮತ್ತು ಉಮಾಶಂಕರ್​ ಬಿ.ಎನ್​ ಇದ್ದರು. ನಿವೃತ್ತಿ ಹೊಂದಿದ ಲಕ್ಕಿಯ ಜವಾಬ್ದಾರಿಯನ್ನು ಷರತ್ತುಗಳಿಗೆ ಒಳಪಟ್ಟು ಉಮಾಶಂಕರ್​ ಅವರ ವಶಕ್ಕೆ ನೀಡಲಾಗಿದೆ.