ಕರ್ನಾಟಕ ಲೋಕಾಯುಕ್ತ ಸಂಗ್ರಹ ಚಿತ್ರ
- ಆಶ್ರಯ ಯೋಜನೆ ಭೂಮಿಯನ್ನು ಪರಭಾರೆ
- ಕನಕಪುರದಲ್ಲಿ ನಡೆದ ಘಟನೆ
- ಆರ್ ಐ ಮತ್ತು ವಿಎ ವಿರುದ್ಧ ಕ್ರಮ
- ಲೋಕಾಯುಕ್ತದಲ್ಲಿ ಪ್ರಕರಣದ ದಾಖಲು
ರಾಮನಗರ: ಆಶ್ರಯ ಯೋಜನೆಯಡಿ ಬಡವರಿಗೆ ಹಂಚಲು ಸರ್ಕಾರವು ಕನಕಪುರ ತಹಶೀಲ್ದಾರವರ ಹೆಸರಿನಲ್ಲಿ ಖರೀದಿಸಿದ್ದ ಜಮೀನಿನನ್ನು ಮತ್ತೊಬ್ಬ ವ್ಯಕ್ತಿ ಹೆಸರಿಗೆ ಖಾತೆ ಮಾಡಿಕೊಟ್ಟ ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಆಢಳಿತಾಧಿಕಾರಿ ವಿರುದ್ಧ ರಾಮನಗರ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ.
ಆರ್‌ಐ ತಂಗರಾಜು ಮತ್ತು ವಿಎ ಚಂದ್ರೇಗೌಡ ಈಗಾಗಲೇ ಲಂಚ ಪ್ರಕರಣವೊಂದರಲ್ಲಿ ಭಾಗಿಯಾಗಿ ಅಮಾನತ್ತುಗೊಂಡಿದ್ದು ಇವರ ವಿರುದ್ಧ ಈಗ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ: ಆಶ್ರಯ ಯೋಜನೆಯಡಿ ಬಡವರಿಗೆ ಹಂಚಲು ಸರ್ಕಾರವು ಕನಕಪುರ ತಾಲೂಕು ಕಸಬಾ ಹೋಬಳಿಯ ಶಿವನಹಳ್ಳಿ ಗ್ರಾಮದ ಸರ್ವೇ ನಂಬರ್ 383/2 ರಲ್ಲಿ 02 ಎಕರೆ 37 ಗುಂಟೆ ಜಮೀನನ್ನು ಗೂಳಯ್ಯ, ಕಾಳಮಾದಯ್ಯ ರವರಿಂದ 1992ರ ಆ.10ರಂದು ಕನಕಪುರ ತಹಶೀಲ್ದಾರ್ 95,000 ರೂ.ಗಳಿಗೆ ಕ್ರಯಕ್ಕೆ ತೆಗೆದುಕೊಂಡಿರುತ್ತಾರೆ. ನಂತರ 1997ರ ಫೆ.26ರಂದು ಕನಕಪುರ ತಾಲೂಕು ತಹಶೀಲ್ದಾರ್ ಮತ್ತು ಕನಕಪುರ ಪುರಸಭೆ ಮುಖ್ಯಾಧಿಕಾರಿ/ಆಯುಕ್ತರು ಫಲಾನುಭವಿಗಳಿಗೆ ಈ ಜಮೀನಿನಲ್ಲಿ ನಿವೇಶನಗಳನ್ನು ಹಂಚಿರುತ್ತಾರೆ. ಸದರಿ ಜಮೀನನ್ನು ಕನಕಪುರ ತಹಶೀಲ್ದಾರ್ ಹೆಸರಿನಲ್ಲಿ ಖರೀದಿಸಿದ ನಂತರ ಪಹಣಿಯಲ್ಲಿ ಖಾತೆಯಾಗಿರುವುದಿಲ್ಲ.
ಇದನ್ನೇ ಬಂಡವಾಳ ಮಾಡಿಕೊಂಡು ಜಮೀನನ್ನು ಸರ್ಕಾರಕ್ಕೆ ಮಾರಿದ ಮಾಲೀಕರಾದ ಕಾಳಮಾದಯ್ಯ ಮತ್ತು ಲಕ್ಷಮ್ಮ ಅವರಿಗೆ ಕನಕಪುರ ತಾಲೂಕು ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರಾದ ತಂಗರಾಜು ಮತ್ತು ಶಿವನಹಳ್ಳಿ ವೃತ್ತದ ಗ್ರಾಮ ಆಡಳಿತಾಧಿಕಾರಿಯಾದ ಚಂದ್ರೇಗೌಡ ಅವರು ಸರ್ಕಾರಿ ಜಮೀನು ಹಾಗೂ ಆಶ್ರಯ ಯೋಜನೆಯಡಿ ಫಲಾನುಭವಿಗಳಿಗೆ ಹಂಚಿಕೆಯಾಗಿರುವ ಜಮೀನು ಎಂದು ತಿಳಿದಿದ್ದರೂ 2023ರಲ್ಲಿ ಪೌತಿ ಖಾತೆ ಮಾಡಿದ್ದಾರೆ. ನಂತರ ಇದೇ ಜಮೀನನ್ನು ವಿಭಾಗ ಮಾಡಿ ಕಾಳಮಾದಯ್ಯ ಅವರ ಹೆಸರಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿರುತ್ತಾರೆ.
ಈ 2 ಎಕರೆ 37 ಗುಂಟೆ ಜಮೀನಿನ ಪ್ರಸ್ತುತ ಎಸ್‌ಆರ್ ಮೌಲ್ಯ 3,15,90,000 ರೂ.ಗಳಿದ್ದು ಮಾರುಕಟ್ಟೆ ಮೌಲ್ಯವು ಇನ್ನು ಹೆಚ್ಚಿದೆ. ಸರ್ಕಾರಿ ನೌಕರರಿಬ್ಬರು ಕಾನೂನು ಬಾಹಿರವಾಗಿ ಸದರಿ ಜಮೀನಿಗೆ ಅಕ್ರಮ ಖಾತೆ ಮಾಡಿ ಸರ್ಕಾರಕ್ಕೆ ಕೋಟ್ಯಾಂತರ ರೂ. ನಷ್ಟವುಂಟು ಮಾಡಿದ್ದಾರೆ.ಈ ಪ್ರಕರಣದಲ್ಲಿ ಖಾತೆ ಮಾಡಿಸಿಕೊಂಡು ಕಾಳ ಮಾದಯ್ಯ ಮತ್ತು ಲಕ್ಷö್ಮಮ್ಮ ಹಾಗೂ ಖಾತೆ ಮಾಡಿಕೊಟ್ಟ ತಂಗರಾಜು ಮತ್ತು ಚಂದ್ರೇಗೌಡ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಗದೀಶ್ ಎಸ್.ಕೆ. ಎಂಬುವರು ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಅಕ್ರಮ ಎಸಗಿದ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಕರ್ನಾಟಕ ಲೋಕಾಯುಕ್ತದ ಅಪರ ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಕುಮಾರ್ ಎಂ. ರವರು ಪ್ರಾಥಮಿಕ ವಿಚಾರಣೆಯನ್ನು ನಡೆಸಿ ಗ್ರಾಮ ಆಡಳಿತಾಧಿಕಾರಿ ಚಂದ್ರೇಗೌಡ, ರಾಜಸ್ವ ನಿರೀಕ್ಷಕ ತಂಗರಾಜು ಮತ್ತು ಖಾಸಗಿ ವ್ಯಕ್ತಿಗಳಾದ ಕನಕಪುರ ಟೌನಿನ ಕುರುಪೇಟೆಯ ಕಾಳಮಾದಯ್ಯ, ಲಕ್ಷö್ಮಮ್ಮ ಅವರುಗಳ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವ ಪ್ರಾಥಮಿಕ ವಿಚಾರಣಾ ವರದಿಯನ್ನು ಲೋಕಾಯುಕ್ತ ಎಸ್‌ಪಿಗೆ ಸಲ್ಲಿಸಿದ್ದರು.
ಲೋಕಾಯುಕ್ತ ಎಸ್‌ಪಿ ನಿರ್ದೇಶನದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.