ರಾಮನಗರದಲ್ಲಿ ಸಾರಿಗೆ ಇಲಾಖೆ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಮಾಸಾಚರಣೆಗೆ ನ್ಯಾಯಾಧೀಶರಾದ ಸವಿತಾ ಚಾಲನೆ ನೀಡಿದರು.  
ಬೆಂಗಳೂರು ದಕ್ಷಿಣ

ಜೀವವೇ ಅಮೂಲ್ಯ ಇದಕ್ಕಿಂತ ಮಿಗಿಲಿಲ್ಲ

ರಾಮನಗರ: ಜೀವಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ, ವಾಹನ ಸವಾರರು ವೇಗದ ಮಿತಿ ಅನುಸರಿಸಿ ರಸ್ತೆ ಸುರಕ್ಷಿತ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಪಿ. ಆರ್. ಸವಿತಾ ಕರೆ ನೀಡಿದರು.
ನಗರದ ಆರ್.ಟಿ.ಓ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಹಯೋಗದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ವಾಸಾಚರಣೆ ಜನವರಿ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ವಾತನಾಡಿದರು.
ಶತಮಾನಗಳ ಹಿಂದೆ ಯಾವುದೇ ರಸ್ತೆಗಳು ಇರಲಿಲ್ಲ. ಕಾಡುದಾರಿ ಇತ್ತು. ರಸ್ತೆಗಳು ನಿರ್ಮಾಣವಾದ ನಂತರ ಅಪಘಾತಗಳಿಂದ ಸಾವುನೋವುಗಳು ಹೆಚ್ಚಾಗಿ, ರಸ್ತೆ ಎಂದರೆ ಭಯಪಡುವಂತಾಗಿದೆ. ವಾಹನ ಚಲಾಯಿಸುವಾಗ, ಪಾದಾಚಾರಿ ಮಾರ್ಗಗಳಲ್ಲಿ ಸಂಚರಿಸುವಾಗ ಚಿಕ್ಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ ನಿಯಮಗಳನ್ನು ಅನುಸರಿಸಿ ಜೀವ ರಕ್ಷಣೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು.
ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಲೇ ಬಾರದು, ಮುಖ್ಯವಾಗಿ ಮದ್ಯಪಾನ ವಾಡಿ ವಾಹನ ಓಡಿಸಬಾರದು, ವಾಹನ ಚಲಾಯಿಸುವಾಗ, ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸಬೇಕು. ಸರಣಿ ಅಪಘಾತ ತಪ್ಪಿಸಲು, ಒಂದು ವಾಹನದಿಂದ ಮತ್ತೊಂದು ವಾಹನದ ನಡುವೆ ಅಂತರ ಕಾಯ್ದುಕೊಳ್ಳಬೇಕು. ವಾಹನಗಳನ್ನು ಸುಸ್ಥಿತಿಯಲ್ಲಿಡಬೇಕು. ವಾಹನ ಚಾಲನೆ ವೇಳೆ ಮೊಬೈಲ್ ಬಳಸಬಾರದು. ಅನಿವಾರ್ಯ ಸಂದರ್ಭಗಳಲ್ಲಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೊಬೈಲ್ ಬಳಸಬೇಕು ಎಂದು ರಸ್ತೆ ಸುರಕ್ಷತಾ ಕ್ರಮಗಳನ್ನು ಕುರಿತು ವಿವರಿಸಿದರು.
ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ತಾಳ್ಮೆ ಅತ್ಯಂತ ಮುಖ್ಯವಾಗಿರುತ್ತದೆ. ಅವಸರದಲ್ಲಿ, ವೇಗವಾಗಿ ವಾಹನ ಚಲಾಯಿಸುವವರು ಎಂದಿಗೂ ಉತ್ತಮ ಚಾಲಕರಾಗಲು ಸಾಧ್ಯವಿಲ್ಲ. ರಸ್ತೆ ನಿಯಮಗಳನ್ನು ಪಾಲಿಸಿ ತಾಳ್ಮೆಯಿಂದ ವಾಹನ ಚಲಾಯಿಸುವವರು ವಾತ್ರ ಉತ್ತಮ ಚಾಲಕರು ಸಾಧ್ಯ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಚ್. ರಾಮಚಂದ್ರಯ್ಯ ವಾತನಾಡಿ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 39 ಕೊಲೆ ಪ್ರಕರಣಗಳಲ್ಲಿ ಸಾವು ಸಂಭವಿಸಿದೆ. ರಸ್ತೆ ಅಪಘಾತದಿಂದ 438 ಮಂದಿ ಸಾವನ್ನಪ್ಪಿದ್ದಾರೆ. ಕೊಲೆಗಿಂತ, ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ ಅದರಲ್ಲಿ ಹೆಚ್ಚಾಗಿ ದ್ವಿಚಕ್ರ ವಾಹನವನ್ನು ಅತಿ ವೇಗದಲ್ಲಿ ಚಲಾಯಿಸುವ ಯುವಜನರು ರಸ್ತೆ ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ರೈತರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುತ್ತಾರೆ, ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸಾರ್ವಜನಿಕರಿಗೆ ಸಾಕಷ್ಟು ಜಾಗತಿ ಮೂಡಿಸುತ್ತಿವೆ, ಇದರ ಹೊರತಾಗಿಯೂ ರಸ್ತೆ ನಿಯಮಗಳ ಪಾಲನೆ ಸೂಕ್ತವಾಗಿ ಆಗಬೇಕು, ರಸ್ತೆ ಸುರಕ್ಷಿತಾ ಕ್ರಮಗಳನ್ನು ಅನುಸರಿಸುವ ಮೂಲಕ ಜನರ ಪ್ರಾಣ ರಕ್ಷಣೆಗೆ ಸಹಕಾರ ನೀಡಬೇಕೆಂದರು.
ಸಾರಿಗೆ ಇಲಾಖೆಯ ಪ್ರಾದೇಶಿಕ ಕಚೇರಿ ಅಧಿಕಾರಿ ಟಿ.ಎ. ಸತೀಶ್ ಬಾಬು ಅವರು 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜನವರಿ 2026ರ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು.
ವೇದಿಕೆ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಅರಿವು ಮೂಡಿಸಲು 11 ವಿವಿಧ ಬಗೆಯ ಪೋಸ್ಟರ್‌ಗಳು ಹಾಗೂ ಕರಪತ್ರಗಳನ್ನು ಬಿಡುಗಡೆ ವಾಡಲಾಯಿತು.
ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಸಂಚಾರಿ ಪ್ರಚಾರ ವಾಹನಕ್ಕೆ ಹಾಗೂ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ರಸ್ತೆಗೆ ಸುರಕ್ಷತೆ ಕುರಿತಾದ ಅರಿವು ಮೂಡಿಸುವ ಧ್ವನಿವಾಹಿನಿಯನ್ನು ಹೊಂದಿರುವ ಕಸ ವಿಲೇವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಜಿಲ್ಲಾ ರಸ್ತೆ ಸುರಕ್ಷಿತ ಸಮಿತಿ ಕಾರ್ಯದರ್ಶಿ ಶಂಕರ್, ಜಿಲ್ಲಾ ವೈದ್ಯಾಧಿಕಾರಿ ಡಾ. ಶಶಿ ಕಿರಣ್, ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಕೆ. ಕೆಂಪಯ್ಯ, ಲಯನ್ಸ್ ಕ್ಲಬ್‌ನ ವೆಂಕಟಸುಬ್ಬಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾರಿಗೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.