ಮಾಗಡಿ: ವನ್ಯಜೀವಿಗಳ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಅರಣ್ಯ ಇಲಾಖೆಯ ಹೊಣೆಯಲ್ಲ, ಪ್ರಕೃತಿ ಮತ್ತು ಪ್ರಾಣಿ ಸಂಕುಲವನ್ನು ರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ ಎಂದು ಜಿಲ್ಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುಟ್ಟಮ್ಮ ಹೇಳಿದರು.
ತಾಲೂಕಿನ ಸಾವನದುರ್ಗ ವನಧಾಮದಲ್ಲಿ ಹಮ್ಮಿಕೊಂಡಿದ್ದ 72ನೇ ವನ್ಯಜೀವಿ ಸಪ್ತಾಹ 2026ರ ಆಚರಣೆಯ ಅಂಗವಾಗಿ ವನ್ಯಜೀವಿ ಸಂರಕ್ಷಣೆಗಾಗಿ ಯುವ ಕರ್ನಾಟಕ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾಡು ಮತ್ತು ಪ್ರಾಣಿಗಳು ಸಮತೋಲಿತ ಪರಿಸರಕ್ಕೆ ಅತ್ಯಗತ್ಯ. ಮಾನವನ ಅತಿಯಾದ ಹಸ್ತಕ್ಷೇಪದಿಂದಾಗಿ ಇಂದಿನ ದಿನಗಳಲ್ಲಿ ವನ್ಯಜೀವಿಗಳ ಆವಾಸಸ್ಥಾನಗಳು ಕ್ಷೀಣಿಸುತ್ತಿವೆ. ಪರಿಸರ ಸಮತೋಲನ ಕಾಯ್ದುಕೊಳ್ಳಲು ಯುವಜನತೆ ಮುಂದೆ ಬಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸಾವನದುರ್ಗದ ಅರಣ್ಯ ಹಾಗೂ ರಸ್ತೆ ಬದಿಗಳಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಸೂಕ್ತವಾಗಿ ವಿಲೇವಾರಿ ಮಾಡಿದರು. ಪ್ರವಾಸಿಗರು ಎಸೆಯುವ ಪ್ಲಾಸ್ಟಿಕ್ ವನ್ಯಜೀವಿಗಳ ಜೀವಕ್ಕೆ ಕಂಟಕವಾಗುತ್ತಿದ್ದು, ಈ ಬಗ್ಗೆ ಪ್ರವಾಸಿಗರಲ್ಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಈ ಬಗ್ಗೆ ಪ್ರತಿ ನಿತ್ಯ ಸುತ್ತಮುತ್ತ ಜಾಗೃತಿ ಮೂಡಿಸಬೇಕು ಎಂದರು.
ವಲಯ ಅರಣ್ಯಾಧಿಕಾರಿ ಟಿ. ನೇತ್ರಾವತಿ ಮಾತನಾಡಿ, ಪ್ರಕೃತಿಯಲ್ಲಿ ಪ್ರತಿ ಜೀವಿಯೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕಾಡಿದ್ದರೆ ನಾಡು, ವನ್ಯಜೀವಿಗಳಿದ್ದರೆ ಕಾಡು ಸುರಕ್ಷಿತವಾಗಿರುತ್ತದೆ. ಪ್ರಾಣಿ-ಪಕ್ಷಿಗಳ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ವನ್ಯಜೀವಿ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ಅರಣ್ಯ ಅಂಚಿನ ಗ್ರಾಮಸ್ಥರು ಇಲಾಖೆಯೊಂದಿಗೆ ಸಹಕರಿಸಬೇಕು. ಕಾಡಿಗೆ ಬೆಂಕಿ ಹಚ್ಚುವುದು, ಪ್ರಾಣಿಗಳ ಬೇಟೆಯಾಡುವುದು ಹಾಗೂ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಎಸೆಯುವುದನ್ನು ತಡೆಗಟ್ಟಬೇಕು. ವನ್ಯಜೀವಿಗಳಿಗೆ ತೊಂದರೆ ಉಂಟಾದರೆ ಅಥವಾ ಪ್ರಾಣಿಗಳು ಜನನಿಬಿಡ ಪ್ರದೇಶಕ್ಕೆ ಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.
ವನ್ಯಜೀವಿ ಸಪ್ತಾಹದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಸ್ಪರ್ಧೆಗಳು ಹಾಗೂ ಜಾಗೃತಿ ಜಾಥಾಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸುಮಾರು ಜಾತಿಗಳ ಸಸಿಗಳನ್ನು ನೆಟ್ಟು ನೀರೆಯಲಾಯಿತು.
ಗಸ್ತುಪಾಲಕರಾದ ಉಮೇಶ್, ಕಿರಣ್ ಕುಮಾರ್, ಗೋವಿಂದ್ ರಾಜು, ವರದರಾಜು, ಪ್ರದೀಪ್, ಪರಶುರಾಮು ಸೇರಿ ಗವಿನಾಗಮಂಗಲ ಗೇಟ್‌ನ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು.