ಸೋಲೂರಿನ ರಾಜಶೇಖರಯ್ಯ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸ್ವಾತಂತ್ರ್ಯ ಹೋರಾಟಗಾರರ ತತ್ವ, ಆದರ್ಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ರಾಜಶೇಖರಯ್ಯ ತಿಳಿಸಿದರು.
ಸೋಲೂರಿನ ಆರ್.ಪಿ.ಎಸ್ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿ, ವಿದೇಶಿಯರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ದೇಶವನ್ನು ಬಿಡುಗಡೆಗೊಳಿಸಲು ಸಾವಿರಾರು ಹೋರಾಟಗಾರರ ಬಲಿದಾನವಾಗಿದೆ. ಸ್ವಾತಂತ್ರ್ಯ ದಿನವು ಪ್ರತಿ ಭಾರತೀಯನಿಗೆ ಹೆಮ್ಮೆಯ ದಿನ ಎಂದರು.
ಸಂಸ್ಥೆಯ ಸಿಇಒ, ನಿಸರ್ಗ ತಜ್ಞ ಡಾ. ಆರ್. ಚೇತನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶ ಪ್ರೇಮ, ರಾಷ್ಟ್ರಾಭಿಮಾನ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವಿವಿಧ ಚಟುವಟಿಕೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಮುಖ್ಯಸ್ಥೆ ಪುಷ್ಪಲತಾ ರಾಜಶೇಖರಯ್ಯ, ಐಶ್ವರ್ಯ ಚೇತನ್ ಕುಮಾರ್, ಪ್ರಾಂಶುಪಾಲ ಡಾ. ಕಿರಣ್ ಕುಮಾರ್ ರೆಡ್ಡಿ, ಡಾ. ಸಂಕನಗೌಡ ಪಾಟೀಲ್, ಡಾ. ಸತೀಶ್, ಆಡಳಿತಾಧಿಕಾರಿ ಸುಗುಣಾ ಇತರರು ಇದ್ದರು.