ಮಾಗಡಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು. ತಹಸೀಲ್ದಾರ್ ಕೆ.ಆರ್.ರಂಜಿತ್, ಇಒ ಜಯಪಾಲ್, ಉಪ ತಹಸೀಲ್ದಾರ್ ಪ್ರಭಾಕರ್ ಇತರರಿದ್ದರು.
ಮಾಗಡಿ: ತಾಲೂಕು ಕಚೇರಿ ಹಾಗೂ ತಾಲೂಕು ಪಂಚಾಯಿತಿಗಳ ಮೇಲೆ ಜನರಿಗಿರುವ ಕೆಟ್ಟ ಅಭಿಪ್ರಾಯವನ್ನು ಹೋಗಲಾಡಿಸಬೇಕು, ಜಡ್ಡುಗಟ್ಟಿದ ಸ್ಥಿತಿಯನ್ನು ಕೂಡಲೇ ಸರಿಪಡಿಸಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಹಸೀಲ್ದಾರ್ ಮತ್ತು ಇಒ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ. ರೈತರು ತಾಲೂಕು ಕಚೇರಿ ಮುಂದೆ ಹಸು, ಕರು ಕಟ್ಟಿ ಪ್ರತಿಭಟನೆ ನಡೆಸುವಂತಾಗಬಾರದು. ಸಾರ್ವಜನಿಕರನ್ನು ಅಲೆದಾಡಿಸದೆ ಗೌರವಯುತವಾಗಿ ನಡೆದುಕೊಳ್ಳಬೇಕು. ಪೌತಿ ಖಾತೆ ಆಂದೋಲನಕ್ಕಾಗಿ ಕರಪತ್ರ ಮುದ್ರಿಸಿ ಪ್ರತಿ ಹೋಬಳಿಯಲ್ಲೂ ಪ್ರಚಾರ ಮಾಡಿ, ಸಮಸ್ಯೆ ಇದ್ದರೆ ಸ್ಥಳ ತನಿಖೆ ನಡೆಸಿ ಖಾತೆ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಹಳೇ ಕ್ರಯ ಪತ್ರಗಳಿಗೆ ರೈತರನ್ನು ಅಲೆದಾಡಿಸಬಾರದರು. ನೀವು ಮಾಡುವ ಕೆಲಸದ ಮೇಲೆ ಮತ್ತೊಮ್ಮೆ ಶಾಸಕನಾಗುತ್ತೇನೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪೌತಿ ಖಾತೆ ಮಾಡಿಕೊಡಲು ಎಲ್ಲ ದಾಖಲೆ ನೀಡಿದರೂ ಹಿಂದಿನ ತಹಸೀಲ್ದಾರ್ ಯಥಾಸ್ಥಿತಿ ಎಂದು ನಮೂದಿಸಿ ನಾಗರಿಕರಿಗೆ ತೊಂದರೆ ನೀಡಿದ್ದರು. ಅವರು ಯುವಕ ಉತ್ತಮ ಕೆಲಸ ಮಾಡುತ್ತಾರೆ ಎಂದರೆ ಮಾಡಲಿಲ್ಲ. ನೀವು ಯುವಕರಾಗಿದ್ದು, ಉತ್ತಮ ಕೆಲಸ ಮಾಡಿ ಎಂದು ನೂತನ ತಹಸೀಲ್ದಾರ್ ರಂಜಿತ್ಗೆ ನಿರ್ದೇಶನ ನೀಡಿದರು.
ತಹಸೀಲ್ದಾರ್ ಕೆ.ಆರ್.ರಂಜಿತ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಪಾರದರ್ಶಕ ಆಡಳಿತ, ಪೌತಿ ಖಾತೆ, ಹಕ್ಕು ಪತ್ರ ಹಾಗೂ ದಾರಿ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ಸರ್ವೇಯರ್ ರಮೇಶ್, ಕಂದಾಯ ಅಧಿಕಾರಿಗಳಾದ ಚಂದ್ರಶೇಖರ್, ಹೇಮಲತಾ, ಮಧು ನಟರಾಜು, ಆಗ್ರೋ ಪುರುಷೋತ್ತಮ್, ಕುಮಾರ್ ಇತರರು ಇದ್ದರು.
ಹಳೆಯ ದಾಖಲೆ ನೀಡಲು ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಯನ್ನು ಅಮಾನತುಗೊಳಿಸಲು ಸೂಚಿಸಿದ ಶಾಸಕರು, ಹಣಕ್ಕಾಗಿ ದಂಧೆ ಮಾಡುವವರ ವಿರುದ್ಧ ಕೆಂಡಾಮಂಡಲವಾದರು. ಕಚೇರಿಯಲ್ಲಿ ಕೂಡಲೇ ದೂರು ಪೆಟ್ಟಿಗೆ ಅಳವಡಿಸಬೇಕು. ಅದರ ಒಂದು ಕೀ ಶಾಸಕರ ಬಳಿ ಹಾಗೂ ಮತ್ತೊಂದು ತಹಸೀಲ್ದಾರ್ ಬಳಿ ಇರಲಿ. ತಿಂಗಳಿಗೊಮ್ಮೆ ಎಸಿ ಸಮ್ಮುಖದಲ್ಲಿ ಪೆಟ್ಟಿಗೆ ತೆರೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
6 ಸಾವಿರ ಮಿಸ್ಸಿಂಗ್ ಫೈಲ್ಗಳು!
ತಾಲೂಕು ಕಚೇರಿಯ ಹಳೆಯ ಸುಮಾರು 6 ಸಾವಿರ ಮಿಸ್ಸಿಂಗ್ ಫೈಲ್ಗಳ ಪಟ್ಟಿ ಪ್ರದರ್ಶಿಸಿದ ಶಾಸಕರು, ಹಳೆಯ ದಾಖಲೆಗಳ ಕೊಠಡಿಗೆ ಸಿಸಿ ಕ್ಯಾಮರಾ ಅಳವಡಿಸಿ. ರೈತರು ಜಮೀನುಗಳಿಗೆ ತೆರಳಲು ದಾರಿ ಬಿಡದಿದ್ದರೆ ಪೊಲೀಸ್ ರಕ್ಷಣೆ ಪಡೆದು ದಾರಿ ಮಾಡಿಸಿಕೊಡಿ. ಇಲ್ಲಿ ಪಕ್ಷಭೇದ ಮರೆತು ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಿಮಗೆ ಕೆಲಸ ಸಿಕ್ಕಿದ್ದೇ ಪುಣ್ಯ
ಕೆಲಸ ಮಾಡದೆ ಸಂಬಳ ಪಡೆಯುವ ಆಸೆ ಇದ್ದರೆ ಅಂತಹವರನ್ನು ಬೇರೆಡೆಗೆ ವರ್ಗಾವಣೆ ಮಾಡಿಸುವುದಾಗಿ ಬಗರ್ಹುಕುಂ ಕೇಸ್ ವರ್ಕರ್ ಮನೋಹರ್ ರೆಡ್ಡಿಗೆ ಎಚ್ಚರಿಕೆ ನೀಡಿದ ಶಾಸಕರು, ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಕೆಲಸ ಸಿಕ್ಕಿರುವುದು ಪುಣ್ಯ. ಜನರ ಶಾಪ ಪಡೆಯದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ. ಬಟ್ಟೆ ಇಲ್ಲವರು ಕಚೇರಿಗೆ ಬರುತ್ತಾರೆ, ಅಂತವರ ಕೆಲಸ ಮಾಡದೆ ಅಲೆದಾಡಿಸಿದರೆ ಒಳ್ಳೆಯದಾಗುವುದಿಲ್ಲ ಎಂದು ತಿಳಿಹೇಳಿದರು.